ಸಿಎಂ ಸಿದ್ದರಾಮಯ್ಯರಿಂದ ಪಿಎಫ್‌ಐ ಜತೆ ಒಳಒಪ್ಪಂದ: ಮಂಜುಳಾ ಆರೋಪ

| Published : Mar 29 2024, 12:48 AM IST

ಸಿಎಂ ಸಿದ್ದರಾಮಯ್ಯರಿಂದ ಪಿಎಫ್‌ಐ ಜತೆ ಒಳಒಪ್ಪಂದ: ಮಂಜುಳಾ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸೌಧದಲ್ಲೇ ರಾಜ್ಯಸಭೆ ಚುನಾವಣೆ ವೇಳೆ ನಾಸೀರ್‌ ಹುಸೇನ್‌ ಬೆಂಬಲಿಗರು ಪಾಕ್‌ ಪರ ಘೋಷಣೆ ಕೂಗಿದಾಗಲೂ ಸರ್ಕಾರ ಸರಿಯಾದ ಕ್ರಮ ವಹಿಸಲು ಹಿಂದೇಟು ಹಾಕಿತ್ತು.

ಹೊಸಪೇಟೆ: ಸಿಎಂ ಸಿದ್ದರಾಮಯ್ಯ ನಿಷೇಧಿತ ಪಿಎಫ್‌ಐನಂತಹ ಸಂಘಟನೆ ಜತೆ ಒಳಒಪ್ಪಂದ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಈ ಮೂಲಕ ಅಲ್ಪಸಂಖ್ಯಾತರ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಮಂಜುಳಾ ಆರೋಪಿಸಿದ್ದಾರೆ.ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ 2013ರಿಂದ ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ. 185 ಪಿಎಫ್‌ಐ ಕಾರ್ಯಕರ್ತರನ್ನು ಬೇಷರತ್‌ ಬಿಡುಗಡೆ ಮಾಡಿದ್ದರು. ಎನ್‌ಐಎ ತನಿಖೆ ನಡೆಸಿದ ಬಳಿಕ ಈ ಸಂಘಟನೆಯನ್ನು ನಿಷೇಧಿಸಲಾಗಿದೆ. ದೇಶವಿರೋಧಿ ಸಂಘಟನೆಗಳ ಪರ ಸಿದ್ದರಾಮಯ್ಯ ಮೃದು ಧೋರಣೆ ತಾಳುವುದನ್ನು ಖಂಡಿಸುತ್ತೇವೆ ಎಂದರು.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವಿಷಯದಲ್ಲಿ ಸರ್ಕಾರ ವಿಫಲವಾಗಿದೆ. ವಿಧಾನಸೌಧದಲ್ಲೇ ರಾಜ್ಯಸಭೆ ಚುನಾವಣೆ ವೇಳೆ ನಾಸೀರ್‌ ಹುಸೇನ್‌ ಬೆಂಬಲಿಗರು ಪಾಕ್‌ ಪರ ಘೋಷಣೆ ಕೂಗಿದಾಗಲೂ ಸರ್ಕಾರ ಸರಿಯಾದ ಕ್ರಮ ವಹಿಸಲು ಹಿಂದೇಟು ಹಾಕಿತ್ತು. ಬಳಿಕ ಪ್ರತಿಪಕ್ಷಗಳ ಹೋರಾಟಕ್ಕೆ ಮಣಿದು ಪಾಕ್‌ ಪರ ಘೋಷಣೆ ಕೂಗಿದವರನ್ನು ಬಂಧಿಸಲಾಗಿತ್ತು. ಹಾವೇರಿಯಲ್ಲಿ ಸಂತ್ರಸ್ತ ಮಹಿಳೆ ಪರ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ. ಗ್ಯಾರಂಟಿ ಯೋಜನೆ ಜಾರಿ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದರು.ಮೋದಿ ನೀಡಿದ ಭರವಸೆಗಳನ್ನು ಈಡೇರಿಸಿದ್ದಾರೆ. ಮೋದಿ ಕೂಡ ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ಅವರು ಯೋಜನೆಗಳ ಮೂಲಕ ಕಾರ್ಯರೂಪಕ್ಕೆ ತರಲಿದ್ದಾರೆ ಎಂದರು.ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರಾಜ್ಯದ 52 ಸಾವಿರ ಮಹಿಳೆಯರಿಗೆ ಸಬ್ಸಿಡಿ ಹಣ ಪಾವತಿ ಮಾಡಿಲ್ಲ. ಅಂಗನವಾಡಿ ಕಾರ್ಯಕರ್ತರಿಗೆ ವೇತನ ಕೂಡ ಪಾವತಿ ಮಾಡಿಲ್ಲ. ಸರ್ಕಾರ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದರು.ವಿಧಾನ ಪರಿಷತ್‌ನ ಸ್ಥಾನಕ್ಕೆ ತೇಜಸ್ವಿನಿ ರಮೇಶ್‌ ರಾಜೀನಾಮೆ ನೀಡಿ ಕಾಂಗ್ರೆಸ್‌ ಕಡೆಗೆ ಹೋಗುತ್ತಿದ್ದಾರೆ. ಅಧಿಕಾರ ರಾಜಕಾರಣ ಮಾಡಬಾರದು. ಈ ಹಿಂದೆ ಕಾಂಗ್ರೆಸ್‌ನಲ್ಲಿ ಇದ್ದರು. ಅಲ್ಲಿ ಅಧಿಕಾರ ಸಿಗಲಿಲ್ಲ ಎಂದು ಬಿಜೆಪಿಗೆ ಬಂದ್ರು, ಇಲ್ಲಿ ಎಂಎಲ್ಸಿ ಮಾಡಲಾಗಿತ್ತು. ಈಗ ರಾಜೀನಾಮೆ ನೀಡಿ ಮತ್ತೆ ಕಾಂಗ್ರೆಸ್‌ಗೆ ಹೋಗುತ್ತಿದ್ದಾರೆ. ಅಧಿಕಾರವೇ ಮುಖ್ಯವಾಗಬಾರದು ಎಂದು ಸೂಚ್ಯವಾಗಿ ಹೇಳಿದರು.ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನ ನೀಡಲು ಕೋರಿದ್ದೇವು. ಆದರೆ, ಬರೀ ಎರಡೇ ಸೀಟು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನ ಸಿಗುವ ನಿರೀಕ್ಷೆ ಇದೆ. ಶಿವಮೊಗ್ಗದಲ್ಲಿ ಹರ್ಷನ ತಾಯಿಗೆ ಟಿಕೆಟ್ ನೀಡಬಹುದಿತ್ತಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಸಂತ್ರಸ್ತೆಗೆ ಟಿಕೆಟ್‌ ನೀಡಲಾಗಿದೆ. ಇಲ್ಲಿಯೂ ಮುಂದೆ ಪರಿಗಣಿಸಲಾಗುವುದು ಎಂದರು.ಜಿಲ್ಲಾಧ್ಯಕ್ಷೆ ಸುವರ್ಣ ಆರುಂಡಿ, ಭಾರತಿ ಪಾಟೀಲ್‌, ಅಶೋಕ್ ಜೀರೆ, ರಾಘವೇಂದ್ರ, ಶಂಕರ ಮೇಟಿ ಇದ್ದರು.