ಜೆಎಸ್ಎಸ್ ಚಿತ್ರಕಲಾ ಶಿಬಿರಕ್ಕೆ 15ರ ಸಂಭ್ರಮ

| Published : Apr 20 2024, 01:31 AM IST

ಜೆಎಸ್ಎಸ್ ಚಿತ್ರಕಲಾ ಶಿಬಿರಕ್ಕೆ 15ರ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಶಿಬಿರವು ಮೂರು ವಿಭಾಗಗಳಲ್ಲಿ ಅಂದರೆ 1-4, 5-7, 8-11 ರವರೆಗಿನ ತರಗತಿ ವಿದ್ಯಾರ್ಥಿಗಳಿಗೆ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ನಡೆಯುತ್ತಿದೆ. ಶಾಲೆಯ ಆವರಣದಲ್ಲಿ ಬೆಳೆದ ಬಹಳ ದೊಡ್ಡದಾದ ಮರದ ನೆರಳಿನಲ್ಲಿ ಚಿತ್ರಕಲಾ ಶಿಕ್ಷಕರು ಕುಳಿತು ಮಕ್ಕಳಿಗೆ ಚಿತ್ರ ಬಿಡಿಸುವುದನ್ನು ಹೇಳಿಕೊಡುವರು.

ಕನ್ನಡಪ್ರಭ ವಾರ್ತೆ ಮೈಸೂರು

ಬೇಸಿಗೆ ಬಂತೆಂದರೆ ಸಾಕು ಮೈಸೂರು ನಗರದ ಎಲ್ಲೆಲ್ಲೂ ಶಿಬಿರಗಳೇ! ಮಕ್ಕಳು ಬೇಸಿಗೆಯ ಬಿಸಿಲ ಬೇಗೆಯ ನಡುವೆ ತಂಪಾಗಿ ಅವರವರ ಆಸಕ್ತಿಗೆ ಅನುಗುಣವಾಗಿ ಅವರಲ್ಲಿ ವಿಶೇಷವಾಗಿ ಅಡಗಿರುವಂಥ ಕಲೆಯನ್ನು ಬೆಳೆಸಿಕೊಳ್ಳಲು ಪೋಷಕರು ಮಕ್ಕಳನ್ನು ಶಿಬಿರಗಳಿಗೆ ಸೇರಿಸುತ್ತಾರೆ.

ನಗರದ ರಾಮಾನುಜ ರಸ್ತೆಯ ಜೆಎಸ್ಎಸ್ ಬಾಲಜಗತ್ ಆವರಣದಲ್ಲಿ ಚಿತ್ರಕಲಾ ಶಿಬಿರ ನಡೆಯುತ್ತದೆ.

ಈ ಶಿಬಿರಕ್ಕೆ ನಗರದ ವಿವಿಧ ಬಡಾವಣೆಗಳಿಂದ ವಿದ್ಯಾರ್ಥಿಗಳು ಬರುತ್ತಿರುವುದು ವಿಶೇಷ. ಏ. 3 ರಂದು ಪ್ರಾರಂಭವಾದ ಚಿತ್ರಕಲಾ ಶಿಬಿರ ಏ.22 ರಂದು ಮುಕ್ತಾಯವಾಗುತ್ತದೆ.

ಶಿಬಿರವು ಮೂರು ವಿಭಾಗಗಳಲ್ಲಿ ಅಂದರೆ 1-4, 5-7, 8-11 ರವರೆಗಿನ ತರಗತಿ ವಿದ್ಯಾರ್ಥಿಗಳಿಗೆ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ನಡೆಯುತ್ತಿದೆ. ಶಾಲೆಯ ಆವರಣದಲ್ಲಿ ಬೆಳೆದ ಬಹಳ ದೊಡ್ಡದಾದ ಮರದ ನೆರಳಿನಲ್ಲಿ ಚಿತ್ರಕಲಾ ಶಿಕ್ಷಕರು ಕುಳಿತು ಮಕ್ಕಳಿಗೆ ಚಿತ್ರ ಬಿಡಿಸುವುದನ್ನು ಹೇಳಿಕೊಡುವರು. ಮಕ್ಕಳೂ ಕೂಡ ಶಿಕ್ಷಕರ ಮಾರ್ಗದರ್ಶನದಂತೆ ಚಿತ್ರಗಳನ್ನು ತದೇಕ ಚಿತ್ತದಿಂದ ಬಿಡಿಸಿ ನಂತರ ಬಣ್ಣಗಳನ್ನು ತುಂಬಿ ಸಂಭ್ರಮಸುವ ಖುಷಿ ನೋಡಿಯೇ ಸಂತಸಪಡಬೇಕು. ಈ ಶಿಬಿರದಲ್ಲಿ ಚಿತ್ರಬಿಡಿಸುವ ವೇಳೆ ಪೆನ್ಸಿಲ್ ಬಳಕೆ, ಬ್ರಷ್ ಗಳ ಬಳಕೆಯ ವಿಶೇಷತೆಯನ್ನು ಮಕ್ಕಳಿಗೆ ತಿಳಿಸಿಕೊಡಲಾಗುತ್ತಿದೆ.

ಪ್ರತಿ ಮಕ್ಕಳಲ್ಲಿಯೂ ಸಹಜವಾಗಿ ಚಿತ್ರಬಿಡಿಸುವ ಗುಣ ಇದ್ದೇ ಇರುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ತಿಳಿಸಿ ಕೊಟ್ಟರೆ ಚಿತ್ರಗಳು ಇನ್ನೂ ಚೆನ್ನಾಗಿ ಮೂಡಿಬರುವುದರಲ್ಲಿ ಸಂದೇಹವಿಲ್ಲ. ಅದನ್ನು ಶಿಬಿರದಲ್ಲಿ 8 ಜನ ಶಿಕ್ಷಕರು ಹೇಳಿಕೊಡುತ್ತಿರುವುದು ವಿಶೇಷ. ಈ ಶಿಬಿರದಲ್ಲಿ ಚಿತ್ರಕಲೆ, ಗ್ಲಾಸ್ ಪೇಂಟಿಂಗ್, ಎಂಬೊಜಿಂಗ್, ಮೊಮೊರಿ ಚಿತ್ರ, ಡಿಸೈನ್, ನೇಚರ್ ಚಿತ್ರ, ಆಕರ್ಷಕ ಪೆನ್ ಸ್ಟ್ಯಾಂಡ್, ಹೂದಾನಿಗಳಿಗೆ ಬಣ್ಣ ತುಂಬುವುದನ್ನು ಹೇಳಿಕೊಡಲಾಗುತ್ತಿದೆ.

ಶಿಬಿರದಲ್ಲಿ ಒಂದು ದಿನ ಪ್ರಕೃತಿ ಚಿತ್ರ ಬಿಡಿಸುವ ಸಲುವಾಗಿ ಸೋಮನಾಥಪುರ, ಮುಡುಕುತೊರೆ, ಸುತ್ತೂರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಲಾಗುವುದು. ಒಟ್ಟು 8 ಜನ ಶಿಕ್ಷಕರ ನೇತೃತ್ವದಲ್ಲಿ ನಡೆಯುತ್ತಿರುವ ಶಿಬಿರದ ಸಮಾರೋಪ ಸಮಾರಂಭವು ಏ. 22ರಂದು ಬೆಳಗ್ಗೆ 10.30ಕ್ಕೆ ರಾಜೇಂದ್ರ ಭವನದಲ್ಲಿ ನಡೆಯಲಿದೆ. ಅಂದು ಮಕ್ಕಳು ಶಿಬಿರದಲ್ಲಿ ಬಿಡಿಸಿದ ಚಿತ್ರಗಳನ್ನು ಪ್ರದರ್ಶನಕ್ಕೆ ಇರಿಸಲಾಗುವುದು. ಜೊತೆಗೆ ಪ್ರತಿ ವಿಭಾಗದಲ್ಲೂ ಉತ್ತಮವಾಗಿ ಚಿತ್ರಿಸಿದ 3 ಚಿತ್ರಗಳಿಗೆ ನಗದು ಬಹುಮಾನ ನೀಡಿ ಕಲೆಗೆ ಉತ್ತೇಜನ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ. ಹಾಗೂ ಇಲ್ಲಿಯವರೆಗೆ ಸುಮಾರು 900 ಮಕ್ಕಳು ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿ ತರಬೇತಿ ಪಡೆದಿರುವುದು ವಿಶೇಷ.

ಕಳೆದ 14 ವರ್ಷಗಳಿಂದಲೂ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಆಶಯದಂತೆ ಜೆಎಸ್ಎಸ್ ಮಹಾವಿದ್ಯಾಪೀಠದ ವತಿಯಿಂದ ಬೇಸಿಗೆ ಚಿತ್ರಕಲಾ ಶಿಬಿರವು ಯಶಸ್ವಿಯಾಗಿ ನಡೆಯುತ್ತಿದೆ. ನಗರದಲ್ಲಿ ಕೇವಲ ಚಿತ್ರಕಲೆಗಾಗಿ ಮೀಸಲಿರುವ ಏಕೈಕ ಶಿಬಿರ ಇದಾಗಿದ್ದು, ಈಗ 15 ವರ್ಷಗಳನ್ನು ಪೂರೈಸುತ್ತಿದೆ.

- ಎಸ್.ಎಂ. ಜಂಬುಕೇಶ್ವರ, ಹಿರಿಯ ಕಲಾವಿದರು ಹಾಗೂ ಶಿಬಿರದ ಸಂಚಾಲಕರು.