ದಸರಾ ಆನೆಗಳಿಗೆ ಬಣ್ಣ ಬಣ್ಣದ ಸಿಂಗಾರ: ಕಾಲುಗಳಿಗೆ ಗೆಜ್ಜೆ

| Published : Oct 13 2024, 01:01 AM IST

ದಸರಾ ಆನೆಗಳಿಗೆ ಬಣ್ಣ ಬಣ್ಣದ ಸಿಂಗಾರ: ಕಾಲುಗಳಿಗೆ ಗೆಜ್ಜೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಸಾಗುವ ಆನೆಗಳನ್ನು ನೋಡುವುದೇ ಒಂದು ರೀತಿಯ ಸೊಗಸು. ಇಂತಹ ಆನೆಗಳನ್ನು ಕಲಾವಿದರು ಬಣ್ಣಗಳಿಂದ ಸಿಂಗಾರ ಮಾಡುತ್ತಾರೆ. ಇದರಿಂದಾಗಿಯೇ ರಾಜಮಾರ್ಗದಲ್ಲಿ ಸಾಗುವ ಆನೆಗಳು ಬಣ್ಣ ಬಣ್ಣದ ಚಿತ್ತಾರಗಳಿಂದಲೂ ಗಮನ ಸೆಳೆಯುತ್ತವೆ.

ಬಿ. ಶೇಖರ್‌ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಸಾಗುವ ಆನೆಗಳನ್ನು ನೋಡುವುದೇ ಒಂದು ರೀತಿಯ ಸೊಗಸು. ಇಂತಹ ಆನೆಗಳನ್ನು ಕಲಾವಿದರು ಬಣ್ಣಗಳಿಂದ ಸಿಂಗಾರ ಮಾಡುತ್ತಾರೆ. ಇದರಿಂದಾಗಿಯೇ ರಾಜಮಾರ್ಗದಲ್ಲಿ ಸಾಗುವ ಆನೆಗಳು ಬಣ್ಣ ಬಣ್ಣದ ಚಿತ್ತಾರಗಳಿಂದಲೂ ಗಮನ ಸೆಳೆಯುತ್ತವೆ.

ದಸರಾ ಆನೆಗಳಿಗೆ ಮೈಸೂರು ಅರಮನೆ ಆವರಣದ ಆನೆ ಬಿಡಾರದಲ್ಲಿ ಶನಿವಾರ ಮುಂಜಾನೆಯಿಂದಲೇ ಕಲಾವಿದರ ತಂಡವು ಅಲಂಕಾರ ಮಾಡುವ ಮೂಲಕ ಸಿದ್ಧಗೊಳಿಸಿದ್ದರು.

ಕಾಡಿನಿಂದ ಆಗಮಿಸಿದ್ದ 14 ಆನೆಗಳ ಪೈಕಿ 11 ಆನೆಗಳು ಮಾತ್ರ ಈ ಬಾರಿಯ ಜಂಬೂಸವಾರಿಯಲ್ಲಿ ಸಾಗಿದವು. ಹೀಗಾಗಿ, 11 ಆನೆಗಳಿಗೆ ವಿವಿಧ ಬಣ್ಣಗಳಿಂದ ಸೊಂಡಲು, ಕಿವಿ, ಕಣ್ಣು, ಕಾಲುಗಳ ಮೇಲೆ ಅಲಂಕಾರ ಮಾಡಲಾಗಿತ್ತು.

ಕಲಾವಿದ ನಾಗಲಿಂಗಪ್ಪ ನೇತೃತ್ವದಲ್ಲಿ ಹುಣಸೂರು ಮೂಲದ ಒಟ್ಟು 8 ಕಲಾವಿದರು ದಸರಾ ಆನೆಗಳಿಗೆ ವಿಶೇಷ ಬಣ್ಣದ ಅಲಂಕಾರ ಮಾಡಿದರು. ಬಿಳಿ, ಹಳದಿ, ಹಸಿರು, ಕೆಂಪು, ಕೇಸರಿ ಸೇರಿದಂತೆ ವಿವಿಧ ಬಣ್ಣಗಳಿಂದ ಆನೆಗಳ ಕಿವಿಯ ಮೇಲೆ ಶಂಖ, ಚಕ್ರ, ಸೊಂಡಲಿನ ಮೇಲೆ ಗಂಡುಭೇರುಂಡ, ಹೂವು, ಎಲೆ, ಬಳ್ಳಿ, ದಂತದ ಹಿಂಭಾಗ ಗಿಳಿ, ಎಲೆ, ಕೆನ್ನೆಯ ಮೇಲೆ ಹೂವು, ಬಳ್ಳಿ, ಮೊಗ್ಗು, ಎಲೆ, ಕಾಲುಗಳ ಮೇಲೆ ಪಕ್ಷಿ, ಎಲೆ, ಹೂವು, ಮೊಗ್ಗು, ಬಳ್ಳಿ, ಆನೆಗಳ ಬಾಲದ ಗಾತ್ರಕ್ಕೆ ತಕ್ಕಂತೆ ಪಕ್ಷಿಚಿತ್ರ, ಹೂವು ಬಳ್ಳಿಗಳ ಅಲಂಕಾರ, ಆನೆಯ ಕಣ್ಣಿನ ಸುತ್ತಾ ಎಲೆ ಆಕೃತಿ, ಹಣೆಯ ಮೇಲೆ ನಾಮ ಮತ್ತು ಸುರುಳಿ ಚಿತ್ತಾರ ಬಿಡಿಸಿದ್ದರು.

ಬಣ್ಣದ ಅಲಂಕಾರ ಮುಗಿದ ಮೇಲೆ ಆನೆಗಳ ಕಾಲಿಗೆ ಗೆಜ್ಜೆ, ಕತ್ತಿಗೆ ಗಂಟೆ ಸರ, ಮಾವಿನ ಸರ, ಅರಳಿ ಎಲೆಯ ಸರ, ಚಿನ್ನ ಲೇಪಿತ ಹಣೆ ಪಟ್ಟಿ ಧರಿಸಿ ಸಿಂಗರಿಸಲಾಯಿತು. ಅಲ್ಲದೆ, ಪ್ರತಿ ಆನೆಗಳ ಮೇಲೆ ಗಾದಿ, ನಮ್ದಾ ಹಾಕಿ ಅವುಗಳ ಮೇಲೆ ವಿವಿಧ ವಿನ್ಯಾಸದ ಗಂಡುಭೇರುಂಡ ಚಿತ್ರಗಳಿರುವ ಜುಲಾ ಹೊದಿಸಲಾಯಿತು.

ಬಳಿಕ ಪ್ರತಿ ಆನೆಗಳ ಮೇಲೆ ಮಾವುತ, ವಿಶೇಷ ಮಾವುತ ಹಾಗೂ ಕಾವಾಡಿಗಳನ್ನು ನಿಯೋಜಿಸಲಾಗಿತ್ತು. ಸಮವಸ್ತ್ರ ತೊಟ್ಟ ಆನೆಗಳ ಮೇಲೆ ಕುಳಿತ ಮಾವುತರು ಆನೆಗಳನ್ನು ಮುನ್ನಡೆಸಿದರು. ವಿಶೇಷ ಮಾವುತರು ಕೆಂಪು, ಗುಲಾಬಿ ಬಣ್ಣದ ಛತ್ರಿಗಳನ್ನು ಹಿಡಿದು ಸಾಗಿದರು.

ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಆನೆಯ ಅಕ್ಕಪಕ್ಕದಲ್ಲಿ ಲಕ್ಷ್ಮಿ ಮತ್ತು ಹಿರಣ್ಯಾ ಕುಮ್ಕಿ ಆನೆಗಳು ಸಾಗಿದವು. ನಿಶಾನೆ ಆನೆಯಾಗಿ ಧನಂಜಯ, ನೌಫತ್ ಆನೆಯಾಗಿ ಗೋಪಿ, ಸಾಲಾನೆಯಾಗಿ ಪ್ರಶಾಂತ, ಸುಗ್ರೀವ, ಮಹೇಂದ್ರ, ಏಕಲವ್ಯ, ಕಂಜನ್, ಭೀಮ ಸಾಗಿದವು.