ವಿಶ್ವ ಪಾರಂಪರಿಕ ತಾಣದಲ್ಲಿ ಜರುಗಿದ ಮೂರು ದಿನಗಳ ಉತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದ ಜನರು ಸಾಂಸ್ಕೃತಿಕ ವೇದಿಕೆಗಳ ಮುಂದೆ ಜಮಾಯಿಸಿ ಜನೋತ್ಸವದ ವಾತಾವರಣ ಇಮ್ಮಡಿಗೊಳಿಸಿದರು.

ಮಂಜುನಾಥ ಕೆ.ಎಂ.

ಹಂಪಿ: ಸಾಂಸ್ಕೃತಿಕ ಕಾರ್ಯಕ್ರಮಗಳು, ವಿದ್ಯುದೀಪಾಲಂಕಾರದಿಂದ ಲಕ್ಷಾಂತರ ಜನರ ಕಣ್ಮನ ಸೆಳೆದಿದ್ದ ಐತಿಹಾಸಿಕ ಹಂಪಿ ಉತ್ಸವಕ್ಕೆ ಭಾನುವಾರ ರಾತ್ರಿ ವರ್ಣರಂಜಿತ ತೆರೆ ಬಿತ್ತು.

ವಿಶ್ವ ಪಾರಂಪರಿಕ ತಾಣದಲ್ಲಿ ಜರುಗಿದ ಮೂರು ದಿನಗಳ ಉತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದ ಜನರು ಸಾಂಸ್ಕೃತಿಕ ವೇದಿಕೆಗಳ ಮುಂದೆ ಜಮಾಯಿಸಿ ಜನೋತ್ಸವದ ವಾತಾವರಣ ಇಮ್ಮಡಿಗೊಳಿಸಿದರು.

ಸಾಹಸ ಕ್ರೀಡೆಗಳು, ಎತ್ತುಗಳ ಸ್ಪರ್ಧೆ, ಫಲಪುಷ್ಪ ಪ್ರದರ್ಶನ, ಬೋಟಿಂಗ್‌, ಮತ್ಸ್ಯಮೇಳ, ವಸ್ತು ಪ್ರದರ್ಶನಗಳಲ್ಲಿ ಜನರು ಪಾಲ್ಗೊಂಡು ಉತ್ಸವದ ಸಡಗರದಲ್ಲಿ ಮಿಂದೆದ್ದರು. ವಿರೂಪಾಕ್ಷೇಶ್ವರ ದೇವಸ್ಥಾನ ಆವರಣದಲ್ಲಿ ಮೂರು ದಿನಗಳ ಕಾಲ ಜರುಗಿದ ವಿಚಾರ ಸಂಕಿರಣ, ಕವಿಗೋಷ್ಠಿಗಳಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ಕವಿ, ಸಾಹಿತಿ, ಲೇಖಕರು ಭಾಗವಹಿಸಿದ್ದರು.

ಉತ್ಸವದಲ್ಲಿ ಇದೇ ಮೊದಲ ಬಾರಿಗೆ ಡ್ರೋನ್‌ ಶೋ ಹಮ್ಮಿಕೊಳ್ಳಲಾಗಿತ್ತು. ಹಂಪಿಯ ಪ್ರಮುಖ ಸ್ಮಾರಕಗಳು ಜತೆಗೆ ಮುಖ್ಯಮಂತ್ರಿಗಳು, ಸಚಿವರು, ಸರ್ಕಾರದ ಗ್ಯಾರಂಟಿ ಯೋಜನೆಗಳು ಕೂಡ ಡ್ರೋನ್‌ ಶೋದಲ್ಲಿ ಅನಾವರಣಗೊಂಡವು. ಮೂರು ದಿನಗಳ ಉತ್ಸವದಲ್ಲಿ ಸುಮಾರು ಮೂರು ಲಕ್ಷ ಜನ ಭಾಗವಹಿಸಿರಬಹುದು ಎಂದು ಅಂದಾಜಿಸಲಾಗಿದೆ. ಜನ ಭಾಗವಹಿಸುವಿಕೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚು ಸೀಮಿತಗೊಂಡಿತ್ತು ಎಂಬುದು ಗಮನಾರ್ಹ.

ವಿರೂಪಾಕ್ಷೇಶ್ವರ ದೇವಸ್ಥಾನ, ವಿಜಯ ವಿಠ್ಠಲ ದೇವಸ್ಥಾನ, ಕಡಲೆಕಾಳು, ಸಾಸಿವೆ ಕಾಳು, ಬಜಾರ್‌ ಹಿಲ್ಸ್‌, ರಾಣಿ ಸ್ನಾನಗೃಹ, ವಿಷ್ಣು ದೇವಾಲಯ ಸೇರಿ ಹಂಪಿಯ ನಾನಾ ಸ್ಮಾರಕಗಳ ಸುತ್ತ ಮೂರು ದಿನಗಳು ಜನಜಂಗುಳಿ ಕಂಡುಬಂತು. ಉತ್ಸವದ ಮೂರನೇ ದಿನವಾದ ಭಾನುವಾರ ಮಹಾಶಿವರಾತ್ರಿಯಾಗಿದ್ದರಿಂದ ಉತ್ಸವಕ್ಕೆಂದು ಆಗಮಿಸಿದ್ದ ಜನರು ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಬಳಿಕ ಉತ್ಸವದ ಮಳಿಗೆಗಳ ಕಡೆ ಧಾವಿಸಿದರು.

ಈ ಬಾರಿಯ ಉತ್ಸವದಲ್ಲಿ ೬ ವೇದಿಕೆಗಳನ್ನು ನಿರ್ಮಿಸಲಾಗಿತ್ತು. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು ಎಂಬ ದೃಷ್ಟಿಯಿಂದ ಬಳ್ಳಾರಿ-ವಿಜಯನಗರ ಜಿಲ್ಲೆಗಳ ನೂರಾರು ಕಲಾವಿದರಿಗೆ ಉತ್ಸವದಲ್ಲಿ ಕಾರ‍್ಯಕ್ರಮ ನೀಡಲು ಅವಕಾಶ ನೀಡಲಾಗಿತ್ತು. ಚಿತ್ರನಟರು, ಟಿವಿ ಕಲಾವಿದರ ಕಾರ‍್ಯಕ್ರಮಗಳನ್ನು ಮುಖ್ಯವೇದಿಕೆಗೆ ಸೀಮಿತಗೊಳಿಸಲಾಗಿತ್ತು. ಹೀಗಾಗಿ ಮುಖ್ಯವೇದಿಕೆಯತ್ತ ಹೆಚ್ಚಿನ ಸಂಖ್ಯೆಯ ಜನರು ಆಗಮಿಸಿದ್ದರಿಂದ ಜನಸ್ತೋಮ ಕಂಡು ಬಂತು. ನಟ ಶಿವರಾಜ್‌ ಕುಮಾರ್‌, ಗೋಲ್ಡನ್‌ ಸ್ಟಾರ್‌ ಗಣೇಶ್‌, ಡಾರ್ಲಿಂಗ್‌ ಕೃಷ್ಣ, ಮಿಲನಾ ನಾಗರಾಜ್‌, ನಟಿ ಸಪ್ತಮಿಗೌಡ, ಸಂಜನಾ ಆನಂದ್‌, ಹಾಸ್ಯ ಕಲಾವಿದ ಗಿಲ್ಲಿ, ಕಿರುತೆರೆ ನಟಿ ಕಾವ್ಯಾ, ಖ್ಯಾತ ಗಾಯಕ ಹರಿಹರನ್‌ ಸೇರಿದಂತೆ ಅನೇಕ ಪ್ರಮುಖ ಕಲಾವಿದರು ಉತ್ಸವದ ಕಾರ‍್ಯಕ್ರಮದಲ್ಲಿ ಪಾಲ್ಗೊಂಡು ಪ್ರೇಕ್ಷಕರನ್ನು ರಂಜಿಸಿದರು. ಮೂರು ದಿನಗಳ ಉತ್ಸವಕ್ಕೆ ಬಂದ ಜನರನ್ನು ನಿಯಂತ್ರಿಸಲು ಪೊಲೀಸರು ಹೆಣಗಾಡಿದರು.

ಹಂಪಿ ಅಭಿವೃದ್ಧಿ ಕ್ರಮ: ಶಾಸಕ ಗವಿಯಪ್ಪ

ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶಾಸಕ ಎಚ್.ಆರ್. ಗವಿಯಪ್ಪ, ಹಂಪಿ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು. ಕಮಲಾಪುರ ಕೆರೆಯ ಸುತ್ತ ರಿಂಗ್ ರಸ್ತೆ ನಿರ್ಮಿಸಿ, ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ನಿರ್ಮಿಸಲಾಗುವುದು. ಕೆರೆಯ ಸುಂದರೀಕರಣಗೊಳಿಸಲಾಗುವುದು. ಆಕರ್ಷಕ ಪ್ರವಾಸೋದ್ಯಮ ತಾಣವನ್ನಾಗಿಸಲು ಬೇಕಾದ ಎಲ್ಲ ಸೌಕರ‍್ಯಗಳನ್ನು ಕಲ್ಪಿಸಲು ಈಗಾಗಲೇ ಕ್ರಮ ವಹಿಸಲಾಗಿದೆ. ₹೧೦ ಕೋಟಿ ವೆಚ್ಚದಲ್ಲಿ ಫುಡ್ ಕೋರ್ಟ್‌ ನಿರ್ಮಿಸಲು ಈಗಾಗಲೇ ಸರ್ಕಾರದ ಅನುಮೋದನೆ ಪಡೆಯಲಾಗಿದೆ. ಹಂಪಿ ಪರಿಸರದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಯೋಜನೆ ರೂಪಿಸಿ ಕೋರಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ ಮಾತನಾಡಿ, ನಮ್ಮ ತಂದೆ ಎಂ.ಪಿ. ಪ್ರಕಾಶ್ ಅವರ ಜತೆ ಉತ್ಸವ ನೋಡಲು ಬರುತ್ತಿದೆ. ಪ್ರಕಾಶ್ ಅವರು ಹಂಪಿ ಉತ್ಸವದಲ್ಲಿ ವಿದೇಶಿ ಕಲಾವಿದರನ್ನು ಕರೆಸಿ, ವಿವಿಧ ಕಲಾ ಪ್ರಕಾರಗಳನ್ನು ಪರಿಚಯಿಸುವ ಕೆಲಸ ಮಾಡುತ್ತಿದ್ದರು. ಮೈಸೂರು ದಸರಾದಂತೆಯೇ ಹಂಪಿ ಉತ್ಸವ ಅರ್ಥಪೂರ್ಣವಾಗಿ ಆಚರಿಸಲು ಸಾಕಷ್ಟು ಶ್ರಮಿಸುತ್ತಿದ್ದರು. ಉತ್ಸವ ನಿರಂತರವಾಗಿ ನಡೆದುಕೊಂಡು ಬರುತ್ತಿದ್ದು, ವಿಜಯನಗರ ಕಾಲದ ಗತವೈಭವ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಎಸ್ಪಿ ಎಸ್. ಜಾಹ್ನವಿ, ಜಿಪಂ ಸಿಇಒ ಅಕ್ರಮ ಷಾ, ಎಡಿಸಿ ಬಾಲಕೃಷ್ಣಪ್ಪ ಮತ್ತಿತರರಿದ್ದರು.