ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ ಬಾಲಗಂಗಾಧರ ತಿಲಕ್ ವಿನಾಯಕ ವಿಸರ್ಜನಾ ಸಮಿತಿ ವಿನಾಯಕೋತ್ಸವ ಅದ್ಧೂರಿಯಿಂದ ನಡೆದಿದ್ದು, ಬಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳ ಮುಖಂಡರು ಚಾಲನೆ ನೀಡಿದರೆ, ಜಿಲ್ಲಾಸ್ಪತ್ರೆ ವೃತ್ತದಲ್ಲಿ ಅಖಂಡ ಭಾರತ ವಿನಾಯಕ ಸಭಾ ವತಿಯಿಂದ ಶಾಶ್ವತ ಶುದ್ಧ ಕುಡಿಯುವ ನೀರಿಗಾಗಿ ಆಗ್ರಹಿಸಿ ಗಣೇಶನಿಗೆ ವಿಶೇಷ ಪೂಜೆ ನಡೆಸಲಾಯಿತು.ಭಜರಂಗದಳ ಸಂಘಟನೆಯ ಯುವಕರು, ಬಾಲಗಂಗಾಧರ ತಿಲಕ್ ವಿನಾಯಕ ವಿಸರ್ಜನಾ ಸಮಿತಿ ನೇತೃತ್ವದಲ್ಲಿ ನಗರದ ಗಾಂಧಿವನದಲ್ಲಿ ಧರ್ಮರಕ್ಷಣೆ, ಸೌಹಾರ್ದತೆಯ ತಿರುಮಲ ಬಾಲಾಜಿ ಗಣಪನ ಬೃಹತ್ ಮೂರ್ತಿಯನ್ನಿಟ್ಟು, ಜತೆಯಲ್ಲಿ ಒಂದು ಕಡೆ ನೃತ್ಯ ಗಣಪ, ಮತ್ತೊಂದುಕಡೆ ಸಿಂಹಾಸನಾರೂಢ ಗಣಪನನ್ನಿಟ್ಟು ಪೂಜಿಸಿದರು.ಈ ವೇಳೆ ಬಜರಂಗದಳ ತಿಲಕ್ ವಿನಾಯಕ ವಿಸರ್ಜನಾ ಸಮಿತಿ ಮೂಲಕ ಗಣೇಶೋತ್ಸವ ಆಚರಿಸುತ್ತಿದ್ದು, ಗಾಂಧಿವನದಲ್ಲಿ ಭಜರಂಗದಳದ ಬಾಲಾಜಿ, ಬಾಬು, ಡಿ.ಆರ್.ನಾಗರಾಜ್, ಸತ್ಯನಾರಾಯಣ ಜ್ಯುವೆಲರ್‍ಸ್ ವೆಂಕಟೇಶ್, ಬಿಆರ್‌ಎಂ ಸಂತೋಷ್, ಮಂಜುನಾಥ್, ವಿಶ್ವನಾಥ್, ರವಿ, ಶ್ರೀಧರ್,ವಿಶು, ಸಾಯಿಮೌಳಿ, ದನ್ನು, ದೀಪು, ವಿಶಾಕ, ನಾಗೇಶ್, ಕನಕೇಶ್,ಭವಾನಿ, ಸಂಜಯ್,ಯಶ್ವಂತ್, ವಿನಯ್,ಗೋಪಿ ಮತ್ತಿತರರು ನೇತೃತ್ವ ವಹಿಸಿದ್ದರು. ವಿಸರ್ಜನೆಗೆ ಯುವರಾಜ್ ಕುಮಾರ್
ಇಡೀ ನಗರ ಮತ್ತು ವಿವಿಧೆಡೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣಪನ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆ ಸೆ.೯ರ ಸೋಮವಾರ ಮಧ್ಯಾಹ್ನ ೧೨ ಗಂಟೆಗೆ ನಡೆಯಲಿದ್ದು, ಮೆರವಣಿಗೆಗೆ ನಟ ಯುವರಾಜ್‌ಕುಮಾರ್ ಚಾಲನೆ ನೀಡಲಿದ್ದಾರೆ ಎಂದು ಬಜರಂಗದಳ ಮುಖಂಡ ಬಾಲಾಜಿ ತಿಳಿಸಿದರು. ನಗರದ ಎಸ್‌ಎನ್‌ಆರ್ ಆಸ್ಪತ್ರೆ ವೃತ್ತದಲ್ಲಿ ಅಖಂಡ ಭಾರತ ವಿನಾಯಕ ಮಹಾಸಭಾ ವತಿಯಿಂದ ವಿಶಿಷ್ಟ ರೀತಿಯಲ್ಲಿ ಗಣೇಶೋತ್ಸವ ಆಚರಿಸಿದ್ದು, ಶಾಶ್ವತ ಶುದ್ಧ ಕುಡಿಯುವ ನೀರಿಗಾಗಿ ಆಗ್ರಹಿಸಿ ೧೧ನೇ ವರ್ಷದ ಅದ್ದೂರಿ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.ಈ ಬಾರಿ ಕುದುರೆ ಸಾರೋಟ್‌ನಲ್ಲಿ ಕುಳಿತ ಗಣಪನಬೃಹತ್ ಮೂರ್ತಿಗಳನ್ನು ಇಲ್ಲಿ ಪ್ರತಿಷ್ಟಾಪಿಸಿದ್ದು, ನೋಡಲು ಬಂದ ಜನಸಾಗರಕ್ಕೆ ಇಡೀ ದಿನ ಪ್ರಸಾದ ವಿತರಿಸಲಾಯಿತು. ಬಿಜೆಪಿ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷ ಓಂಶಕ್ತಿ ಚಲಪತಿ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಿಜೆಪಿಮುಖಂಡರಾದ ಸಾಮಾ ಬಾಬು, ನಾಮಾಲ ಮಂಜು ಮತ್ತಿತರರು ಪಾಲ್ಗೊಂಡಿದ್ದರು.
೧೦೦೦೧ ಕರಿಗಡುಬು ನಗರದ ಕೋಟೆಯ ಲಕ್ಷ್ಮೀ ಗಣಪತಿ ದೇವಾಲಯದಲ್ಲಿನ ಹತ್ತು ಸಾವಿರದ ಒಂದು ಕರಿಕಡುಬುಗಳಿಂದ ಗಣಪನನ್ನು ಅಲಂಕರಿಸಿದ್ದು, ವಿಶಿಷ್ಟ ರೀತಿಯಲ್ಲಿ ಪೂಜಾ ಕಾರ್ಯಕ್ರಮಗಳು ಇಲ್ಲಿ ನಡೆದವು. ಹತ್ತಾರು ಮಂದಿ ಕರಿಕಡುಬನ್ನು ಸಿದ್ದಪಡಿಸಿದ್ದು, ಕಡುಬುಗಳಿಂದಲೇ ಗಣಪನನ್ನು ಅಲಂಕರಿಸಲಾಗಿದೆ, ಇದನ್ನು ನೋಡಲು ನಗರದ ವಿವಿಧಬಡಾವಣೆಗಳಿಂದ ಸಾವಿರಾರು ಮಂದಿ ಆಗಮಿಸಿ ದರ್ಶನ ಪಡೆದರು.ನಗರದ ವಿವಿಧೆಡೆಗಳಲ್ಲಿ ವಿಶಿಷ್ಟ ರೀತಿಯ ಗಣಪನ ಮೂರ್ತಿಗಳನ್ನು ಪ್ರತಿಷ್ಟಾಪಿಸಿದ್ದು, ಕಿಲಾರಿಪೇಟೆಯಲ್ಲಿ ಕೃಷ್ಣವೇಷಧಾರಿ ಕೊಳಲು ಹಿಡಿದ ಗಣಪನನ್ನು ಪ್ರತಿಷ್ಟಾಪಿಸಲಾಗಿತ್ತು. ಧರ್ಮರಾಯನಗರದಲ್ಲಿ ಅಯ್ಯಪ್ಪ ಸ್ವಾಮಿ ಗಣಪನನ್ನು ಪ್ರತಿಷ್ಟಪಿಸಿದ್ದು, ನಗರದಲ್ಲಿ ಕಮಲದ ಮೇಲೆ ನಿಂತ ನಾಟ್ಯ ಗಣಪ,ಗೋಲ್ಡನ್ ಗಣಪ, ಕೈಲಾಸಹೊತ್ತ ಗಣಪ, ಶ್ರೀನಿವಾಸರೂಪಿ ಗಣಪ, ಅಯ್ಯಪ್ಪಸ್ವಾಮಿಯ ಗಣಪ ಸೇರಿದಂತೆ ವಿವಿಧ ರೂಪಗಳಲ್ಲಿ ಗಣಪಗಳನ್ನು ನಗರದ ಪ್ರತಿ ಬಡಾವಣೆಯಲ್ಲೂ ಪ್ರತಿಷ್ಟಾಪಿಸಲಾಗಿದ್ದು, ಎಲ್ಲಾ ಕಡೆಗಳಲ್ಲೂ ಗಣಪ ಮೂರ್ತಿಗಳು ವೈವಿಧ್ಯತೆಯಿಂದ ಗಮನ ಸೆಳೆಯುತ್ತಿವೆ.
ಗಣೇಶನ ವಿಸರ್ಜನೆಗೆ ನಗರಸಭೆ ಸಿದ್ಧತೆಗಣೇಶನ ವಿಸರ್ಜನೆಗೆ ಪ್ರತಿಬಾರಿಯಂತೆ ಈ ಬಾರಿಯೂ ನಗರಸಭೆ ಇಲ್ಲಿನ ಕೋಲಾರಮ್ಮ ಕೆರೆಯಲ್ಲಿ ನಿರ್ಮಿಸಿರುವ ಬೃಹತ್ ನೀರಿನ ಹೊಂಡದಲ್ಲಿ ವ್ಯವಸ್ಥೆ ಕಲ್ಪಿಸಿದ್ದು, ಬೃಹತ್ ಗಣಪನ ಮೂರ್ತಿಗಳ ವಿಸರ್ಜನೆಗೆ ಕ್ರೈನ್ ಅಳವಡಿಸಿದ್ದು, ನಗರದ ವಿವಿಧ ಬಡಾವಣೆಗಳಲ್ಲಿ ಇಟ್ಟ ಮೂರ್ತಿಗಳನ್ನು ಭಾನುವಾರವೇ ಕೆಲವು ಕಡೆಗಳಲ್ಲಿ ಭಾನುವಾರವೇ ವಿಸರ್ಜಿಸಲಾಯಿತು.