ಸಾರಾಂಶ
ಸಂಕ್ರಾಂತಿ ನಿಮಿತ್ತ ಬಳ್ಳಾರಿ ಅಧಿದೇವತೆ ಶ್ರೀಕನಕ ದುರ್ಗಮ್ಮ ದೇವಸ್ಥಾನ, ಕೋಟೆ ಮಲ್ಲೇಶ್ವರಸ್ವಾಮಿ ದೇವಸ್ಥಾನ ಸೇರಿದಂತೆ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಜರುಗಿದವು.
ಬಳ್ಳಾರಿ: ಸುಗ್ಗಿಯ ಹಬ್ಬವಾದ ಮಕರ ಸಂಕ್ರಾಂತಿ ಜಿಲ್ಲಾದ್ಯಂತ ಸಡಗರ ಸಂಭ್ರಮದಿಂದ ಜರುಗಿತು.
ಹಬ್ಬದ ಹಿನ್ನೆಲೆಯಲ್ಲಿ ತುಂಗಾಭದ್ರಾ ಕಾಲುವೆ ಮತ್ತು ವೇದವತಿ ನದಿಯಲ್ಲಿ ಜನರು ಪುಣ್ಯ ಸ್ನಾನ ಮಾಡಿದರು. ಬಳಿಕ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದುಕೊಂಡರು. ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಸೇಹ್ನಿತರೊಂದಿಗೆ ಎಳ್ಳು, ಬೆಲ್ಲ ಹಂಚಿಕೊಂಡು, ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ದೃಶ್ಯಗಳು ಕಂಡು ಬಂದವು.ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮ ದೇವಸ್ಥಾನ, ಕೋಟೆ ಮಲ್ಲೇಶ್ವರಸ್ವಾಮಿ ದೇವಸ್ಥಾನ ಸೇರಿದಂತೆ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಜರುಗಿದವು. ಬೆಳಗ್ಗೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು. ಸಂಕ್ರಾಂತಿ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ವಿಶೇಷ ಅರ್ಚನೆ ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಸೂರ್ಯನು ಮಕರ ರಾಶಿಗೆ ತೆರಳುವುದೆಂದರೆ ಉತ್ತರಾಯಣ ಪರ್ವ ಕಾಲ ಪ್ರಾರಂಭವಾಯಿತು ಎಂಬುವುದು ಜನರ ನಂಬಿಕೆಯಾಗಿದೆ. ಈ ಪುಣ್ಯಕಾಲದಲ್ಲಿ ದೇವರ ದರ್ಶನದಿಂದ ಒಳಿತಾಗುತ್ತದೆ ಎಂಬ ಭಾವನೆಯೊಂದಿಗೆ ಜನರು ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡು ಬಂತು.ಮನ ಸೆಳೆದ ರಂಗೋಲಿಯ ಚಿತ್ತಾರ
ಮಕರ ಸಂಕ್ರಾತಿ ಹಬ್ಬದ ಹಿನ್ನೆಲೆ ಜನರು ಸೋಮವಾರ ರಾತ್ರಿಯೇ ಮನೆಯ ಅಂಗಳವನ್ನು ಸ್ವಚ್ಛಗೊಳಿಸಿ, ಚುಕ್ಕೆ ರಂಗೋಲಿ ಬಿಡಿಸಿದ್ದರು. ಸಾಂಪ್ರಾದಯಿಕ ಬಣ್ಣ ಬಣ್ಣದ ರಂಗೋಲಿ ಚಿತ್ರಗಳು ಹೆಚ್ಚಾಗಿ ಕಂಡುಬಂದವು. ನಗರದ ನಾನಾ ಕಡೆಗಳಲ್ಲಿ ರಂಗೋಲಿ ಸ್ಪರ್ಧೆ ನಡೆದವು. ಮಹಿಳೆಯರು ಬಗೆ ಬಗೆಯ ರಂಗೋಲಿ ಚಿತ್ತಾರಗಳನ್ನು ಅರಳಿಸಿದರು. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ಸಹ ವಿತರಿಸಲಾಯಿತು. ಸೋಮವಾರ ರಾತ್ರಿಯಿಂದಲೇ ಮನೆಯ ಮುಂದೆ ರಂಗೋಲಿ ಹಾಕುವ ಕೆಲಸದಲ್ಲಿ ಮಹಿಳೆಯರು ನಿರತರಾಗಿದ್ದರು. ತಡರಾತ್ರಿ ವರೆಗೆ ನಗರದ ಓಣಿ ಓಣಿಗಳಲ್ಲಿ ರಂಗೋಲಿಗೆ ಬಣ್ಣದ ತುಂಬಿದ ಮಹಿಳೆಯರು, ಹಬ್ಬದ ಸಡಗರವನ್ನು ಇಮ್ಮಡಿಸಿದರು.ಗ್ರಾಮೀಣ ಭಾಗದಲ್ಲಿ ಹಬ್ಬದ ಸಂಭ್ರಮ
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲೂ ಸಂಕ್ರಾಂತಿ ಹಬ್ಬದ ಸಡಗರ ಕಂಡು ಬಂತು. ಕೃಷಿಕರು ಎತ್ತುಗಳಿಗೆ ವಿಶೇಷವಾಗಿ ಅಲಂಕರಿಸಿ ಪೂಜೆ ಸಲ್ಲಿಸಿದರು. ಸಂಜೆ ಗ್ರಾಮೀಣ ಕ್ರೀಡಾಕೂಟಗಳು ನಡೆದವು. ಯುವಕರು ಹಾಗೂ ಮಹಿಳೆಯರು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದರು. ಸಂಜೆ ಗಾಳಿಪಟ ಹಾರಿಸುವ ಸ್ಪರ್ಧೆಗಳು ನಡೆದವು. ಮಕ್ಕಳು ಹಾಗೂ ಮಹಿಳೆಯರು ಗಾಳಿಪಟ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ವಿವಿಧ ದೇವಸ್ಥಾನಗಳಲ್ಲಿ ಸಂಕ್ರಾಂತಿ ದೀಪೋತ್ಸವ ಕಾರ್ಯಕ್ರಮ ಜರುಗಿದವು.ಸೂರ್ಯನು ಮಕರರಾಶಿಯನ್ನು ಪ್ರವೇಶಿಸುವ ದಿನವಾದ ಮಕರ ಸಂಕ್ರಾಂತಿ ದಿನ ಅತ್ಯಂತ ಶುಭದಾಯಕ ದಿನ ಎಂದೇ ಭಾವಿಸಲಾಗುತ್ತಿದ್ದು, ಈ ದಿನದಂದು ಮಾಡುವ ದಾನಕ್ಕೆ ಹೆಚ್ಚಿನ ಮಹತ್ವವಿದೆ. ಧನುರ್ಮಾಸ ಮುಕ್ತಾಯಗೊಂಡಿದ್ದರಿಂದ ಶುಭ ಕಾರ್ಯಗಳಿಗೆ ಸಂಕ್ರಾಂತಿ ದಿನದಂದು ಚಾಲನೆ ಸಿಗಲಿದೆ.