ತುಮಕೂರಿನಲ್ಲಿ ಶುಕ್ರವಾರದಿಂದ 22ರವರೆಗೆ ನಡೆಯಲಿರುವ ಹಿರಿಯ ಒಲಿಂಪಿಕ್ಸ್ ಎಂದು ಕರೆಯಲಾಗುವ ಕರ್ನಾಟಕ ಕ್ರೀಡಾಕೂಟ 2025-26ಕ್ಕೆ ವರ್ಣರಂಜಿತ ಅದ್ಧೂರಿ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರಿನಲ್ಲಿ ಶುಕ್ರವಾರದಿಂದ 22ರವರೆಗೆ ನಡೆಯಲಿರುವ ಹಿರಿಯ ಒಲಿಂಪಿಕ್ಸ್ ಎಂದು ಕರೆಯಲಾಗುವ ಕರ್ನಾಟಕ ಕ್ರೀಡಾಕೂಟ 2025-26ಕ್ಕೆ ವರ್ಣರಂಜಿತ ಅದ್ಧೂರಿ ಚಾಲನೆ ನೀಡಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ತುಮಕೂರು ಜಿಲ್ಲಾಡಳಿತದ ಸಹಯೋಗದಲ್ಲಿ ನಡೆಯಲಾಗುತ್ತಿರುವ ರಾಜ್ಯ ಮಟ್ಟದ ಈ ಕ್ರೀಡಾಕೂಟಕ್ಕೆ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭಾರಂಭದ ಘೋಷಣೆ ಮಾಡುವ ಮೂಲಕ ಚಾಲನೆ ನೀಡಿದರು.
ಕಳೆದ 1 ತಿಂಗಳಿನಿಂದ ಕರ್ನಾಟಕ ಕ್ರೀಡಾಕೂಟದ ಸಿದ್ಧತೆಗಳನ್ನು ನಡೆಸಿದ್ದ ತುಮಕೂರು ಜಿಲ್ಲಾಡಳಿತ 1 ವಾರಗಳ ಕಾಲ ನಡೆಯುವ ಕ್ರೀಡಾಕೂಟಕ್ಕಾಗಿ ಸಕಲ ಸಿದ್ಧತೆಗಳನ್ನು ನಡೆಸಿತು. ಸುಮಾರು 27 ಕ್ರೀಡೆಗಳು ಈ ಕ್ರೀಡಾಕೂಟದಲ್ಲಿ ನಡೆಯುತ್ತಿದ್ದು, 4,500 ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗಿರುವುದು ವಿಶೇಷ. ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣ, ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನ ಸೇರಿದಂತೆ ವಿವಿಧ ಕ್ರೀಡೆಗಳಿಗಾಗಿ ನಗರದ ವಿವಿಧ ಅಂಕಣಗಳನ್ನು ಸಜ್ಜುಗೊಳಿಸಲಾಗಿದ್ದು, ಶುಕ್ರವಾರದಿಂದಲೇ ಫುಟ್‌ಬಾಲ್, ಟೇಕ್ವಾಂಡೋ, ಕತ್ತಿವರಸೆ ಸೇರಿದಂತೆ ವಿವಿಧ ಕ್ರೀಡೆಗಳ ಮೂಲಕ ಕ್ರೀಡಾಕೂಟ ಆರಂಭವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಕ್ರೀಡಾಪಟುಗಳ ಸ್ವಾಗತಕ್ಕೆ ತುಮಕೂರು ನಗರ ಮಧುವಣಗಿತ್ತಿಯಂತೆ ಸಿಂಗಾರಗೊಂಡು ಗಮನ ಸೆಳೆಯುತ್ತಿದೆ. ರಾಜ ಬೀದಿಗಳು, ವೃತ್ತಗಳಲ್ಲಿ ವಿಶೇಷ ದೀಪಾಲಂಕಾರ, ವರ್ಣರಂಜಿತ ಬಾವುಟಗಳು, ಗಣ್ಯರಿಗೆ ಸ್ವಾಗತ ಕಮಾನುಗಳು ಹೀಗೆ ತುಮಕೂರು ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದ್ದು ವಿಶೇಷ ಗಮನ ಸೆಳೆಯಿತು. ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಕ್ರೀಡಾಪಟುಗಳು ಮಾನ್ಯ ಮುಖ್ಯಮಂತ್ರಿಗಳಿಗೆ ಗೌರವ ವಂದನೆ ಸಲ್ಲಿಸಿದರು. ಅಲ್ಲದೆ, ರಾಷ್ಟ್ರ ಮಟ್ಟದ ಕ್ರೀಡಾಪಟುಗಳು ಕ್ರೀಡಾ ಜ್ಯೋತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸುವ ಮೂಲಕ ಕರ್ನಾಟಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಕ್ರೀಡಾಪಟು ಕೃಷಿಕ್ ಅವರು ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು. ಕರ್ನಾಟಕದ ವಿವಿಧ ಜಾನಪದ ಕಲಾತಂಡಗಳು ಪಥಸಂಚಲನೆಯಲ್ಲಿ ಕ್ರೀಡಾಪಟುಗಳನ್ನು ಹಿಂಬಾಲಿಸಿದ್ದು ಪ್ರೇಕ್ಷಕರ ಗಮನ ಸೆಳೆಯಿತು. ಗುರುವಾರದವರೆಗೆ ತುಮಕೂರು ನಗರದಲ್ಲಿ ಕರ್ನಾಟಕ ಕ್ರೀಡಾಕೂಟದ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದ್ದು, ಜನವರಿ 22 ರಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.