ಶಿವಮೊಗ್ಗಕ್ಕೆ ಇಂದು ಯುದ್ಧ ತರಬೇತಿ ವಿಮಾನ

| Published : Aug 04 2025, 12:15 AM IST

ಶಿವಮೊಗ್ಗಕ್ಕೆ ಇಂದು ಯುದ್ಧ ತರಬೇತಿ ವಿಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದ ಬಿ.ವೈ.ರಾಘವೇಂದ್ರ ಅವರ ಅವಿರತ ಪ್ರಯತ್ನದ ಫಲವಾಗಿ ಕಿರಣ ಎಮ್.ಕೆ-1 ನಿಷ್ಕ್ರಿಯ ಯುದ್ಧ ತರಬೇತಿ ವಿಮಾನ ಆ.4 ರಂದು ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದೆ.

ಶಿವಮೊಗ್ಗ: ಸಂಸದ ಬಿ.ವೈ.ರಾಘವೇಂದ್ರ ಅವರ ಅವಿರತ ಪ್ರಯತ್ನದ ಫಲವಾಗಿ ಕಿರಣ ಎಮ್.ಕೆ-1 ನಿಷ್ಕ್ರಿಯ ಯುದ್ಧ ತರಬೇತಿ ವಿಮಾನ ಆ.4 ರಂದು ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದೆ.

ಇಂತಹ ನಿಷ್ಕ್ರಿಯಗೊಂಡ ಯುದ್ಧ ವಿಮಾನವನ್ನು ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್‌ನಲ್ಲಿ ''''''''ಯುದ್ಧ ಪಾರಿತೋಷಕ'''''''' ರೂಪದಲ್ಲಿ ಇರಿಸಿ, ಯುವಜನತೆಗೆ ಯುದ್ಧದ ಇತಿಹಾಸ, ನಮ್ಮ ದೇಶದ ಸಶಸ್ತ್ರ ಪಡೆಗಳ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯು ಕ್ರಮ ವಹಿಸಲಿದೆ. ಹೀಗೆ ವಿತರಿಸಲಾದ ''''''''ಯುದ್ಧ ಪಾರಿತೋಷಕಗಳನ್ನು ಸಶಸ್ತ್ರ ಪಡೆಗಳ ಶಿಸ್ತು-ವ್ಯವಸ್ಥೆಗೆ ಧಕ್ಕೆಯಾಗದಂತೆ, ಅಭಿಮಾನ-ಗೌರವದೊಂದಿಗೆ ಅತ್ಯಂತ ಜತನದಿಂದ ಕಾಪಾಡಬೇಕಾದ ಹೊಣೆಗಾರಿಕೆ ಸ್ವೀಕರಿಸಿದ ಸಂಸ್ಥೆಗಳದ್ದಾಗಿರುತ್ತದೆ.

ಭಾರತೀಯ ವಾಯುಪಡೆಯಲ್ಲಿ ಯುದ್ಧದಲ್ಲಿ ಬಳಕೆಯಾದ ಮತ್ತು ವಾಯುಪಡೆಯ ಯೋಧರಿಗೆ ತರಬೇತಿ ನೀಡಲು ಬಳಸಲಾಗುವ ಯುದ್ಧ ತರಬೇತಿ ವಿಮಾನಗಳನ್ನು ನಿಗದಿತ ಅವಧಿಗನುಗುಣವಾಗಿ ನಿಷ್ಕ್ರಿಯಗೊಳಿಸಲಾಗುತ್ತದೆ. ನಿಷ್ಕ್ರಿಯಗೊಳಿಸಲಾದ ಅಂತಹ ವಿಮಾನಗಳನ್ನು ಗುಜರಿಗೆ ಹಾಕದೇ, ಭಾರತ ದೇಶದ ಹೆಮ್ಮೆ-ಸ್ವಾಭಿಮಾನದ ಪ್ರತೀಕವಾದ ಅವುಗಳ ಗೌರವವನ್ನು ಕಾಪಾಡುವ ದೃಷ್ಟಿಯಿಂದ ಆಸಕ್ತ ಸರ್ಕಾರಿ, ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಖಾಸಗಿ ಸಂಘ ಸಂಸ್ಥೆಗಳಿಗೆ ''''''''ಯುದ್ಧ ಪಾರಿತೋಷಕ'''''''' ಎಂದು ಭಾರತೀಯ ವಾಯುಪಡೆಯಿಂದ ವಿತರಿಸಲ್ಪಡುತ್ತವೆ.

ಯುದ್ಧ ವಿಮಾನವು ನಿಷ್ಕ್ರಿಯಗೊಂಡಿದ್ದರೂ, ಅದನ್ನು ಮಂಜೂರಾತಿ ಪಡೆಯುವಲ್ಲಿ ಅತೀವವಾದ ಹೋರಾಟ-ಪರಿಶ್ರಮ ಇದೆ. ಇಂಥಹ ಒಂದು ಯುದ್ಧ ಪಾರಿತೋಷಕವು ಶಿವಮೊಗ್ಗ ನಗರದಲ್ಲಿ ಸ್ಥಾಪನೆಯಾಗುವುದೇ ಒಂದು ಗರ್ವ-ಅಭಿಮಾನ ಮತ್ತು ಹೆಮ್ಮೆಯ ಸಂಗತಿ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ನಮ್ಮ ಯುವಸಮುದಾಯದ ಆಸಕ್ತಿ ಕೆರಳಿಸಲು. ಕುತೂಹಲ ಮೂಡಿಸಲು ಇದು ನೆರವಾಗುತ್ತದೆ. ಈ ಮಹತ್ಕಾರ್ಯದಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ಮಾಜಿ ಸೈನಿಕರ ಸಂಘಟನೆಗಳು ಮತ್ತು ಜನಪ್ರತಿನಿಧಿಗಳು ಸಹಕರಿಸಿದ್ದಾರೆ. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಅಧಿಕಾರಿಗಳು ವಾಯುಪಡೆಯ ಉನ್ನತಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಮಂಜೂರಾತಿಗೆ ಕೈಜೋಡಿಸಿದ್ದಾರೆ. ಮಹಾನಗರ ಪಾಲಿಕೆಯ ಆಯುಕ್ತರು ನಿಷ್ಕ್ರಿಯ ಯುದ್ಧ ವಿಮಾನದ ಸ್ಥಾಪನೆಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದಾರೆ. ವಿಮಾನದ ವಿವರ :

ಕಿರಣ ಎಂ.ಕೆ-1 ಯುದ್ಧ ತರಬೇತಿ ವಿಮಾನವು 10.6 ಮೀಟರ್ ಉದ್ದವಿದ್ದು, ರೆಕ್ಕೆಗಳ ಅಗಲ 10.7 ಮೀಟರ್ ಇದೆ. ಬಾಲವು 3.9 ಮೀಟರ್ ಇದ್ದು, ಗಾಲಿಗಳ ತಳಪಾಯವು 3.9 ಮೀಟರ್ ಇದೆ. 3.635 ಮೀಟರ್ ಎತ್ತರದ ಈ ವಿಮಾನವು ತೈಲ ಭರ್ತಿಯಾದ ನಂತರ 3488 ಕೆಜಿ ತೂಕವನ್ನು ಹೊಂದಿದೆ.

ಎರಡು ಆಸನಗಳನ್ನು ಹೊಂದಿರುವ ಈ ಯುದ್ಧ ತರಬೇತಿ ವಿಮಾನವು ಒಂದೇ ಒಂದು ನಿಮಿಷದಲ್ಲಿ ಗರಿಷ್ಠ 4082 ಅಡಿಗಳಷ್ಟು ಎತ್ತರವನ್ನು ತಲುಪುತ್ತದೆ. ಇಂಟರ್ಮೀಡಿಯಟ್ ಜೆಟ್ ಟ್ರೇನರ್ ಇದಾಗಿದ್ದು, ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್‌ನಿಂದ ಮಾರ್ಚ್ 1964ರಲ್ಲಿ ನಿರ್ಮಿಸಲ್ಪಟ್ಟಿದ್ದು ಫೆಬ್ರುವರಿ 2023ರಲ್ಲಿ ನಿವೃತ್ತಿಗೊಳಿಸಲ್ಪಟ್ಟಿದೆ. ಗಂಟೆಗೆ 695 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಈ ವಿಮಾನವು 19 ನಿಮಿಷಗಳಲ್ಲಿ 3000 ಅಡಿಗಳಿಂದ 30000 ಅಡಿಗಳಷ್ಟು ಎತ್ತರಕ್ಕೆ ಕ್ರಮಿಸುವ ಸಾಮರ್ಥ್ಯ ಹೊಂದಿದೆ.ಭಾರತೀಯ ವಾಯುಪಡೆಯಲ್ಲಿ ಯುದ್ಧದಲ್ಲಿ ಬಳಕೆಯಾದ ಮತ್ತು ವಾಯುಪಡೆಯ ಯೋಧರಿಗೆ ತರಬೇತಿ ನೀಡಲು ಬಳಸಲಾಗುವ ಯುದ್ಧ ತರಬೇತಿ ವಿಮಾನವನ್ನು ಶಿವಮೊಗ್ಗಕ್ಕೆ ನೀಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಸಂಸದ ಬಿ.ವೈ.ರಾಘವೇಂದ್ರ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.