ಸಾರಾಂಶ
ನಗರದ ಐತಿಹಾಸಿಕ ಪ್ರಸಿದ್ಧ ಹಿರೇಜಂತಗಲ್‌ನ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿಯ ಜಾತ್ರೆ ಪ್ರಾರಂಭವಾಗಿದ್ದು, ಫೆ.4ರಂದು ರಥ ಸಪ್ತಮಿಯಂದು ರಥೋತ್ಸವ ಜರುಗಲಿದೆ.
ಶಿಲ್ಪಕಲೆಯಿಂದ ನಿರ್ಮಿತ ಹಿರೇಜಂತಗಲ್‌ನ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇಗುಲ
ರಾಮಮೂತಿ೯ ನವಲಿಕನ್ನಡಪ್ರಭ ವಾರ್ತೆ ಗಂಗಾವತಿ
ನಗರದ ಐತಿಹಾಸಿಕ ಪ್ರಸಿದ್ಧ ಹಿರೇಜಂತಗಲ್‌ನ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿಯ ಜಾತ್ರೆ ಪ್ರಾರಂಭವಾಗಿದ್ದು, ಫೆ.4ರಂದು ರಥ ಸಪ್ತಮಿಯಂದು ರಥೋತ್ಸವ ಜರುಗಲಿದೆ. ಸಂಜೆ 5 ಗಂಟೆಗೆ ಜರುಗುವ ಮಹಾರಥೋತ್ಸವಕ್ಕೆ ಸಹಸ್ರಾರು ಭಕ್ತರು ಆಗಮಿಸಿ ದರ್ಶನ ಪಡೆಯಲಿದ್ದಾರೆ.ಇತಿಹಾಸ:
ಗಂಗಾವತಿ ನಗರ ವಾಣಿಜ್ಯ ಕೇಂದ್ರವಾಗಿದ್ದರೂ ಸಹ ಜಾತ್ರೆ, ಧಾರ್ಮಿಕ ಸಮಾರಂಭಗಳು, ಕಲೆ ಸಂಸ್ಕೃತಿಯ ತವರು ಎನಿಸಿಕೊಂಡಿದೆ. ನಗರಕ್ಕೆ ಹೊಂದಿಕೊಂಡಿರುವ ಹಿರೇಜಂತಗಲ್‌ನ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಾಲಯ ಐತಿಹಾಸಿಕ ಪ್ರಸಿದ್ಧಿ ಪಡೆದಿದೆ. ಚಿಕ್ಕಜಂತಗಲ್‌ನಲ್ಲಿರುವ ಶಾಸನವೊಂದರಲ್ಲಿ 17ನೇ ಶತಮಾನದ ವಿಜಯನಗರ ಕಾಲದ ಕೆಲವು ಪ್ರಮುಖ ದೇವಾಲಯಗಳಿದ್ದು, ಈ ಸಂದರ್ಭದಲ್ಲಿ ನಿರ್ಮಾಣವಾಗಿರಬಹುದೆಂದು ಉಲ್ಲೇಖ ಇದೆ. ಆಂಜನೇಯ ದೇವಾಲಯದಲ್ಲಿರುವ ಕ್ರಿಶ 1544 ರ ಕಾಲದ ಸದಾಶಿವರಾಯನ ಶಾಸನ ಮತ್ತು ಬಳ್ಳಾರಿ ತಾಲೂಕಿನ ಚಿಟಕನಹಾಳದಲ್ಲಿರುವ ಕ್ರಿಶ 1535 ರ ಕಾಲದ ಅಚ್ಯುತ ದೇವರಾಯನ ಶಾಸನಗಳಲ್ಲಿ ಈ ದೇವಾಲಯದ ಉಲ್ಲೇಖ ಇದೆ.ವಿಜಯಯನಗರ ವಾಸ್ತುಶೈಲಿ ಹಂಪೆಯ ದೇವಾಲಯಗಳನ್ನು ನೆನಪಿಸುತ್ತದೆ. ಈ ದೇವಸ್ಥಾನಕ್ಕೆ ಎರಡು ಮಹಾದ್ವಾರ ಮಂಟಪಗಳು ಮುಖ ಮಂಟಪ, ಸಭಾ ಮಂಟಪಗಳಿವೆ. ಎರಡು ಗರ್ಭಗೃಹಗಳಿವೆ. ವಿರೂಪಾಕ್ಷೇಶ್ವರ ಸ್ವಾಮಿ ಮತ್ತು ಪಂಪಾಂಬಿಕೆ ದೇವಾಲಯಗಳಿವೆ.
ಗರ್ಭಗೃಹದ ಮಧ್ಯ ಭಾಗದಲ್ಲಿರುವ ವಿರೂಪಾಕ್ಷೇಶ್ವರ ಪೀಠ ಸಹಿತ ಇರುವ ಲಿಂಗದ ಪಾಣಿವಟ್ಟಲೂ (ಜಲಹರಿ) ಇದೆ. ದ್ರಾವಿಡ ಮಾದರಿಯ ಏಕತಲದ ಗಾರೆ ಪ್ರತಿಮೆಗಳಿದ್ದು, ಬಹುಮಟ್ಟಿಗೆ ಶಿಥಿಲವಾಗಿವೆ.ಈ ಗ್ರಾಮದಲ್ಲಿ ಬೆಟ್ಟದ ವೀರಭದ್ರೇಶ್ವರ ದೇವಾಲಯ ಮುಡ್ಡಾಣೇಶ್ವರ ಮತ್ತು ಆಂಜನೇಯ ದೇವಸ್ಥಾನ ಇದೆ. ವಿರೂಪಾಪುರದಲ್ಲಿ ಸುಂದರ ಪುರಾತನ ಶಿಲ್ಪಕಲೆಯ ಮುಕ್ಕಣ್ಣೇಶ್ವರ ದೇವಾಲಯ ಇದೆ.
ಹಿರೇಜಂತಗಲ್‌ನ ಪ್ರಸನ್ನ ವಿರೂಪಾಕ್ಷೇಶ್ವರ ದೇಗುಲ ವಿಜಯನಗರ ಕಾಲದ್ದಾಗಿದ್ದು, ಪ್ರಸಿದ್ಧಿ ಪಡೆದಿದೆ. ಜಾತ್ರೆ ಸಂಭ್ರಮದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ ಎಂದು ಹಿರೇಜಂತಗಲ್ ನ ಶ್ರೀದೇವಿ ಇಂಡಸ್ಟ್ರೀಜ್ ಮಾಲೀಕ ಜೆ. ನಾಗರಾಜ್ ತಿಳಿಸಿದ್ದಾರೆ.