ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಿಮ್ ನಿಮ್ ವಯಸ್ಸಿನ ಸಂಗಾತಿಗಳ ನೀವೇ ಹುಡ್ಕಂಡು ನೇರವಾಗಿ ನಮ್ ಬಳಿಗೆ ಬನ್ನಿ. ಮುದುವೆ ಮಾಡ್ಕಂಡು ದಂಪತಿಗಳಾಗಿ ಖುಷಿಯಿಂದ ತೆರಳಿ.ಬಸವಕೇಂದ್ರ ಮುರುಘಾ ಮಠದಲ್ಲಿ ಪ್ರತಿ ತಿಂಗಳು 5ನೇ ತಾರೀಕು ನಡೆಯುವ ಸರಳ ಸಾಮೂಹಿಕ ವಿವಾಹಗಳ ಟ್ಯಾಗ್ ಲೈನ್ ಇದು. ಒಂದು ರೀತಿಯಲ್ಲಿ ಮುರುಘಾಮಠ ಆದರ್ಶ ಮದುವೆಗಳಿಗೆ ನೀಡುತ್ತಿರುವ ಗ್ಯಾರಂಟಿ ಇದು. ಕಳೆದ 36 ವರ್ಷಗಳಿಂದ ಪ್ರತಿತಿಂಗಳು ಇಲ್ಲಿ ನಿರಂತರವಾಗಿ ಮದುವೆಗಳು ನಡೆದಿವೆ. ತಾವು ಮದುವೆಯಾಗಿ ತಮ್ಮ ಮಕ್ಕಳ ಮದುವೆಗಳನ್ನು ಇಲ್ಲಿಯೇ ಮಾಡಿದ ಉದಾಹರಣೆಗಳಿವೆ.
ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ ಆದರ್ಶ ಮೆರೆಯುವ ಇಂತಹ ಸರಳ ಸಾಮೂಹಿಕ ಮದುವೆಗಳಿಂದಾಗಿ ಮುರುಘಾಮಠ ಶ್ರೀ ಸಾಮಾನ್ಯರ ನೂರಾರು ಕೋಟಿ ರು. ಉಳಿತಾಯ ಮಾಡಿದೆ. ಮದುವೆಗಳಿಗಾಗಿ ಮಾಡುವ ವೆಚ್ಚವನ್ನು ಹಾಗೆಯೇ ಇಡಿಗಂಟಾಗಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಬಳಸಿಕೊಳ್ಳಿ ಎಂಬ ಸಂದೇಶಗಳನ್ನು ರವಾನಿಸಿದೆ. ಆಷಾಡ ಕಾಲದಲ್ಲಿಯೂ ಇಲ್ಲಿ ಮದುವೆಗಳಾಗಿರುವುದು ವಿಶೇಷ.ಭಾನುವಾರ ನಡೆದ 36ನೇ ವರ್ಷದ 4ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 21 ಜೋಡಿಗಳು ದಾಂಪತ್ಯಕ್ಕೆ ಅಡಿ ಇಟ್ಟರು. ಇದರಲ್ಲಿ ನಾಲ್ಕು ಅಂತರ್ಜಾತಿ ಮದುವೆಯಾಗಿರುವುದು ವಿಶೇಷ.
ಸಾಮೂಹಿಕ ವಿವಾಹದಲ್ಲಿ ನೂತನ ವಧೂವರರ ಮೇಲೆ ಪುಷ್ಪವೃಷ್ಠಿಗೈದು ಶುಭ ಹಾರೈಸಿ ಮಾತನಾಡಿದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ಇಂತಹ ಮದುವೆಗಳು ಸಾರ್ವತ್ರಿಕ ಹಾಗೂ ವ್ಯಾಪಕಗೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಸಮಾಜದಲ್ಲಿ ಪ್ರತಿನಿತ್ಯ ನಿರುದ್ಯೋಗ, ಹಸಿವು, ಬಡತನದಿಂದ ಅಸಂಖ್ಯಾತರು ನರಳುತ್ತಿದ್ದಾರೆ. ಅದ್ಧೂರಿ ವಿವಾಹಗಳಿಂದ ಸಾಕಷ್ಟು ತಂದೆ-ತಾಯಿಯರು ಸಾಲಗಾರರಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಇದರ ನಡುವೆ ಮುರುಘಾಮಠವು 36 ವರ್ಷಗಳಿಂದ ನಿರಂತರ ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು ನಡೆಸಿಕೊಂಡು ಬರುತ್ತಿದೆ. ಹಲವಾರು ಅಂತರ್ಜಾತಿ ವಿವಾಹಗಳಿಗೆ ಸಾಕ್ಷಿಯಾಗಿದೆ.
ಇಂದು ನಾಲ್ಕು ಜೋಡಿಗಳು ಅಂತರ್ಜಾತಿ ವಿವಾಹ ಆಗುತ್ತಿದ್ದಾರೆ. ಅವರು ಕೂಡ ಮುಂದೆ ತಮ್ಮ ಮಕ್ಕಳಿಗೆ ಬಂಧುಗಳಿಗೆ ಅದ್ಧೂರಿ ವಿವಾಹಗಳಿಗೆ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ ಸರಳ ಸಾಮೂಹಿಕ ವಿವಾಹಗಳಿಗೆ ಪ್ರೇರಣೆಯಾಗಬೇಕೆಂದರು.ಸಾನ್ನಿಧ್ಯ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಜಾಗತಿಕವಾಗಿ ಇಂದು ಜಗತ್ತು ತಲ್ಲಣಿಸುತ್ತಿದೆ. ಎಲ್ಲೋ ನಡೆಯುವ ಯುದ್ಧದ ಬಿಸಿ ಭಾರತಕ್ಕೂ ತಟ್ಟಿದೆ. ಅದೇ ರೀತಿ ಸಂಸಾರದ ಜೀವನದಲ್ಲಿ ಗಂಡ-ಹೆಂಡತಿಯರ ನಡುವಿನ ಜಗಳ ಇಡೀ ಸಂಸಾರವನ್ನು ಅಷ್ಟೇ ಅಲ್ಲ ತಮ್ಮ ತಮ್ಮ ಬಂಧುಗಳ ನಡುವಿನ ಸಂಬಂಧಕ್ಕೂ ಆತಂಕವನ್ನು ಉಂಟುಮಾಡುತ್ತದೆ. ಸತಿ-ಪತಿಗಳ ಮಾತು ಮುತ್ತಿನಂತೆ ಇರಬೇಕು ಎಂದರು.
ಬಸವಣ್ಣನವರು ಅಯ್ಯಾ ಎಂದರೆ ಸ್ವರ್ಗ ಎಂದಿದ್ದಾರೆ. ನಮ್ಮ ಮಾತಿನಲ್ಲಿ ಪ್ರೀತಿ ಇರಬೇಕು. ವ್ಯವಹಾರ ಇರಬಾರದು.ಈ ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು. ಸತಿ-ಪತಿಗಳು ಪರಸ್ಪರ ಗೌರವದಿಂದ ಬಾಳಬೇಕು. ಹಾಗಿದ್ದಾಗ ಜೀವನದ ಸಾಕ್ಷಾತ್ಕಾರವಾಗುತ್ತದೆ. ತಮ್ಮ ಕುಟುಂಬ, ಜಗತ್ತನ್ನು ಪ್ರೀತಿಸುವಂತವರಾಗಬೇಕು ಎಂದರು.
ಚಿತ್ರದುರ್ಗ ಉಪ ವಿಭಾಗಾಧಿಕಾರಿ ಡಾ.ಕಾಂತರಾಜ್ ಮಾತನಾಡಿ, ಶ್ರೀ ಮಠವು ನಿರಂತರವಾಗಿ 36 ವರ್ಷಗಳಿಂದ 20 ಸಾವಿರ ದಂಪತಿಗಳ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿದೆ. ದಾಂಪತ್ಯ ಜೀವನ ಎರಡು ಮನಸ್ಸುಗಳ ನಡುವೆ ನಡೆಯುವಂತದ್ದು. ಎರಡು ಕುಟುಂಬಗಳನ್ನು ಕೂಡಿಸುವಂತದ್ದು. ಇಂದು ಸಾಕಷ್ಟು ಸಂಸಾರಗಳು ದೂರ ದೂರ ಆಗುತ್ತಿವೆ. ಹಾಗಾಗಿ ಸತಿಪತಿಗಳು ತಮ್ಮೊಳಗಿನ ಅಹಂಕಾರವನ್ನು ಕಳೆದು ಪ್ರೀತಿ, ವಿಶ್ವಾಸದ ಮೂಲಕ ಜೀವನ ನಡೆಸುವಂತಾಗಬೇಕು. ಇಬ್ಬರ ನಡುವೆ ಪರಸ್ಪರ ಸಹಕಾರ ಇರಬೇಕು. ಆಗಿದ್ದಾಗ ಮಾತ್ರ ಸಂಸಾರದಲ್ಲಿ ಸುಖ ಸಂತೋಷವನ್ನು ಕಾಣಲು ಸಾಧ್ಯ ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಚಿತ್ರದುರ್ಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ಶ್ರೀಮಠವು ಬಸವಾದಿ ಶರಣರ ಆದರ್ಶಗಳನ್ನು ಪಾಲಿಸಿಕೊಂಡು ಬಂದಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಜನಪರ ಕಲ್ಯಾಣ ಕಾರ್ಯಗಳನ್ನು ಆಯೋಜಿಸುತ್ತ ಬಂದಿದೆ. ಸಮಾಜದಲ್ಲಿ ವರ್ಣ, ವರ್ಗ, ಜಾತಿ ಅಸಮಾನತೆಯನ್ನು ತೊಡೆದುಹಾಕಿ ಸಮಾನತೆಯನ್ನು ಸಾರುವಂತಹ ಕೆಲಸಗಳನ್ನು ಮಾಡುತ್ತಿದೆ. ನಮ್ಮೊಳಗಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಶ್ರೀಮಠ ಒಂದು ಪ್ರಯೋಗಶಾಲೆಯಾಗಿದೆ ಎಂದರು. ಶ್ರಿ ಬಸವ ಮುರುಘೇಂದ್ರ ಸ್ವಾಮಿಗಳು, ಪೈಲ್ವಾನ್ ತಿಪ್ಪೇಸ್ವಾಮಿ, ಕಣಿವೆ ಮಾರಮ್ಮ ವೇದಿಕೆಯ ತಿಪ್ಪೇಸ್ವಾಮಿ, ಕವಿ ಗಂಗಾಧರಪ್ಪ, ಸಮಾಜಸೇವಕ ಲಿಂಗರಾಜ್ ಮೊದಲಾದವರಿದ್ದರು. ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಗಿರೀಶಾಚಾರ‍್ಯ ಸ್ವಾಗತಿಸಿದರು. ಟಿ.ಪಿ ಜ್ಞಾನಮೂರ್ತಿ ನಿರೂಪಿಸಿ ವಂದಿಸಿದರು.