ಸಾರಾಂಶ
ಬೆಂಗಳೂರು : ಸಿಇಟಿ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೊದಲ ಸುತ್ತಿನ ಸೀಟು ಹಂಚಿಕೆ ನಡೆಸಿದ ನಂತರವೇ ಕಾಮೆಡ್-ಕೆ ಸೀಟು ಹಂಚಿಕೆ ಪ್ರಕ್ರಿಯೆ ಆರಂಭಿಸಬೇಕೆಂಬ ಸಲಹೆಗೆ ಕಾಮೆಡ್-ಕೆಯವರು ಒಪ್ಪಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ। ಎಂ.ಸಿ.ಸುಧಾಕರ್ ಹೇಳಿದರು.
ನಗರದ ಉನ್ನತ ಶಿಕ್ಷಣ ಪರಿಷತ್ ಕಚೇರಿಯಲ್ಲಿ ಕೆಇಎ ಮೊಬೈಲ್ ಆಪ್ ಬಿಡುಗಡೆ ಬಳಿಕ ಸಿಇಟಿ ಫಲಿತಾಂಶ, ಕೌನ್ಸೆಲಿಂಗ್ ಪ್ರಕ್ರಿಯೆ ಕುರಿತ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿ, ಸಿಇಟಿ ಫಲಿತಾಂಶ ಸಿದ್ಧವಾಗಿದೆ. ಆದರೆ ಸಿಬಿಎಸ್‌ಇ, ಕೃಷಿ ಪ್ರಾಯೋಗಿಕ ಪರೀಕ್ಷೆ, ದ್ವಿತೀಯ ಪಿಯು-2 ಪರೀಕ್ಷೆಗಳ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ಆ ಫಲಿತಾಂಶಗಳು ಪ್ರಕಟವಾದ ಕೂಡಲೇ ಸಿಇಟಿ ಫಲಿತಾಂಶ ನೀಡಲಾಗುವುದು. ಇನ್ನು, ಕೆಇಎ ಮೊದಲ ಸುತ್ತಿನ ಸೀಟು ಹಂಚಿಕೆ ನಂತರವೇ ಕಾಮೆಡ್-ಕೆ ಸೀಟು ಹಂಚಿಕೆ ಪ್ರಕ್ರಿಯೆ ಆರಂಭಿಸಬೇಕು ಎನ್ನುವ ಸಲಹೆಗೆ ಕಾಮೆಡ್-ಕೆ ಒಪ್ಪಿಗೆ ಸೂಚಿಸಿದೆ. ಹಾಗಾಗಿ ಸಿಇಟಿ ಅಭ್ಯರ್ಥಿಗಳಿಗೆ ಯಾವುದೇ ಗೊಂದಲ, ಸಮಸ್ಯೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನಿಡುವ ವಿವಿಧ ರೀತಿಯ ಕೌಶಲ ಆಧಾರಿತ ತರಬೇತಿಗೆ ಹೆಚ್ಚುವರಿ ಶುಲ್ಕ ವಸೂಲಿಗೆ ಹಿಂದಿನ ಸರ್ಕಾರ ಅವಕಾಶ ನೀಡಿದ್ದು, ಅದನ್ನು ಮುಂದಿನ ವರ್ಷ ಪರಿಷ್ಕರಿಸಲಾಗುವುದು. ಅದೇ ರೀತಿ ಸರ್ಕಾರಿ ಮತ್ತು ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಭರ್ತಿಯಾಗದೆ ಉಳಿಯುವ ಅನೇಕ ವಿಭಾಗಗಳ ಎಂಜಿನಿಯರಿಂಗ್ ಸೀಟುಗಳ ಶುಲ್ಕ ಕಡಿಮೆ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ. ಪರಿಶೀಲಿಸಿ ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು ಎಂದು ಸಚಿವರು ತಿಳಿಸಿದರು.-ಬಾಕ್ಸ್-
ಸೀಟ್ ಬ್ಲಾಕಿಂಗ್ ತನಿಖೆ: ಪೊಲೀಸ್
ಆಯುಕ್ತರಿಂದ ಶೀಘ್ರ ಮಾಹಿತಿ
ಕಳೆದ ವರ್ಷದ ಸಿಇಟಿ ಸೀಟ್ ಬ್ಲಾಕಿಂಗ್ ಪ್ರಕರಣದಲ್ಲಿ ಕಾಲೇಜುಗಳ ಪಾತ್ರದ ಬಗ್ಗೆ ಸದ್ಯದಲ್ಲೇ ಪೊಲೀಸ್ ಆಯುಕ್ತರನ್ನು ಕರೆಸಿ ಹೆಚ್ಚುವರಿ ಮಾಹಿತಿ ಪಡೆಯಲಾಗುವುದು ಎಂದು ಸಚಿವ ಡಾ। ಸುಧಾಕರ್ ತಿಳಿಸಿದರು.
ಸೀಟ್ ಬ್ಲಾಕಿಂಗ್ ಪ್ರಕರಣ ಬಗ್ಗೆ ಪೊಲೀಸರು ತನಿಖೆ ನಡೆಸಿ ಕಿಂಗ್‌ಪಿನ್‌ಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಇದರಲ್ಲಿ ಕಾಲೇಜುಗಳ ಪಾತ್ರವಿದೆಯಾ ಎಂಬುದು ತನಿಖೆಯಿಂದಲೇ ಹೊರಬರಬೇಕು. ಆದರೆ, ಈ ಬಗ್ಗೆ ಪೊಲೀಸರು ಯಾವುದೇ ಮಾತಿಯನ್ನು ಇದುವರೆಗೆ ನೀಡಿಲ್ಲ. ಆ ನಿಟ್ಟಿನಲ್ಲಿ ತನಿಖೆ ಯಾಕೆ ವಿಳಂಬ ಆಗಿದೆ ಎಂದು ಪೊಲೀಸ್ ಆಯುಕ್ತರಿಂದ ಮಾಹಿತಿ ಪಡೆಯಲಾಗುವುದು ಎಂದರು.