ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣದ ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್‌ ನೇತೃತ್ವದಲ್ಲಿ ನಟ ಚಿಕ್ಕಣ್ಣ ಅವರನ್ನು ಸುಮಾರು ಎರಡು ತಾಸು ಅಧಿಕ ಸಮಯ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ.

ಬೆಂಗಳೂರು : ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣದ ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್‌ ನೇತೃತ್ವದಲ್ಲಿ ನಟ ಚಿಕ್ಕಣ್ಣ ಅವರನ್ನು ಸುಮಾರು ಎರಡು ತಾಸು ಅಧಿಕ ಸಮಯ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ. 

ಪ್ರಕರಣದಲ್ಲಿ ಚಿಕ್ಕಣ್ಣ ಅವರನ್ನು ಸಾಕ್ಷಿಯಾಗಿ ಪರಿಗಣಿಸಲು ಪೊಲೀಸರು ನಿರ್ಧರಿಸಿದ್ದಾರೆ.‘ಜೂ.8ರಂದು ನಟ ದರ್ಶನ್‌ ಅವರು ಕರೆ ಮಾಡಿ ಸ್ಟೋನಿ ಬ್ರೂಕ್‌ ಪಬ್‌ಗೆ ಊಟಕ್ಕೆ ಕರೆದಿದ್ದರು. ಹೀಗಾಗಿ ಅಂದು ಪಬ್‌ಗೆ ಬಂದು ಊಟ ಮಾಡಿ ಹೊರಟ್ಟಿದೆ. ರೇಣುಕಾಸ್ವಾಮಿ ಯಾರೆಂಬುದೇ ನನಗೆ ಗೊತ್ತಿಲ್ಲ. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ನಟ ಚಿಕ್ಕಣ್ಣ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಜೂ.8ರಂದು ರೇಣುಕಾಸ್ವಾಮಿ ಕೊಲೆಗೂ ಮುನ್ನ ರಾಜರಾಜೇಶ್ವರಿನಗರದ ಸ್ಟೋನಿ ಬ್ರೂಕ್‌ ಪಬ್‌ನಲ್ಲಿ ನಡೆದ ಪಾರ್ಟಿಯಲ್ಲಿ ನಟ ದರ್ಶನ್‌ ಜತೆಗೆ ನಟ ಚಿಕ್ಕಣ್ಣ ಅವರೂ ಭಾಗಿಯಾಗಿದ್ದ ವಿಚಾರ ಆರೋಪಿಗಳ ವಿಚಾರಣೆ ವೇಳೆ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ನಟ ಚಿಕ್ಕಣ್ಣಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್‌ ನೀಡಿದ್ದರು.ಸೋಮವಾರ ನಟ ದರ್ಶನ್‌ ಸೇರಿ ಕೆಲ ಆರೋಪಿಗಳನ್ನು ಪೊಲೀಸರು ಸ್ಟೋನಿ ಬ್ರೂಕ್‌ ಪಬ್‌ಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದರು. ಈ ವೇಳೆ ಹಾಸ್ಯ ನಟ ಚಿಕ್ಕಣ್ಣ ಅವರನ್ನು ಅಲ್ಲಿಗೆ ಕರೆಸಿಕೊಂಡು ಕೆಲ ಮಾಹಿತಿ ಪಡೆದರು. ಬಳಿಕ ಚಿಕ್ಕಣ್ಣ ಅವರನ್ನು ಪೊಲೀಸ್‌ ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿ ಹೇಳಿಕೆ ದಾಖಲಿಸಿದ್ದಾರೆ.