ಸಂಸ್ಕೃತ ಕಲಿಯಲು ನಂದೇಶ್ವರಕ್ಕೆ ಬರುವೆ: ಮ್ಯಾಕ್ಸ್ ಸ್ಟೆಪನ್

| Published : Jan 31 2025, 12:48 AM IST

ಸಂಸ್ಕೃತ ಕಲಿಯಲು ನಂದೇಶ್ವರಕ್ಕೆ ಬರುವೆ: ಮ್ಯಾಕ್ಸ್ ಸ್ಟೆಪನ್
Share this Article
  • FB
  • TW
  • Linkdin
  • Email

ಸಾರಾಂಶ

ಸಂಸ್ಕೃತ ಭಾಷೆ ಕಲಿಯಲು ಉತ್ಸುಕನಾಗಿದ್ದೇನೆ. ನಂದೇಶ್ವರ ಗ್ರಾಮದ ಶ್ರೀ ಸದ್ಗುರು ಡಾ ದುಂಡೇಶ್ವರ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಸಂಸ್ಕೃತ ಭಾಷೆ ಅಧ್ಯಯನ ಮಾಡುವೆ. ಅದಕ್ಕಾಗಿ ಡಿಸೆಂಬರ್ ತಿಂಗಳಲ್ಲಿ ನಂದೇಶ್ವರಕ್ಕೆ ಆಗಮಿಸುವೆ ಎಂದು ನೆದರ್ಲ್ಯಾಂಡ್ ದೇಶದ ದೈಹಿಕ ಶಿಕ್ಷಕ ಮ್ಯಾಕ್ಸ್ ಸ್ಟೆಪನ್ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ತಾಲೂಕಿನ ನಂದೇಶ್ವರ ಗ್ರಾಮದ ಮಧುರಖಂಡಿ ಕಮರಿಮಠಕ್ಕೆ ಭೇಟಿ ನೀಡಿ ಮಾತನಾಡಿ, ಗ್ರಾಮದಲ್ಲಿ ಚಿಕ್ಕವರಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರೂ ಸಂಸ್ಕೃತ ಭಾಷೆಯನ್ನು ಸರಳವಾಗಿ ಮಾತನಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕಮರಿಮಠದ ಡಾ.ದುಂಡೇಶ್ವರ ಸ್ವಾಮೀಜಿ ಅವರು ಸತತ ಪ್ರಯತ್ನದ ಫಲವಾಗಿ ಗ್ರಾಮದ ಎಲ್ಲರೂ ಸಂಸ್ಕೃತ ಭಾಷೆ ಕಲಿಯಲು ಪ್ರೇರಣೆ ನೀಡಿದ್ದಾರೆ. ಶ್ರೀಗಳು ನನಗೆ ನೀಡಿರುವ ಗ್ರಂಥಗಳನ್ನು ಅಧ್ಯಯನ ಮಾಡುತ್ತೇನೆ ಎಂದವರು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಸದ್ಗುರು ಡಾ.ದುಂಡೇಶ್ವರ ಸ್ವಾಮೀಜಿ ಮಾತನಾಡಿ, ಸಂಸ್ಕೃತ ಭಾಷೆಯನ್ನು ಯಾರೂ ಬೇಕಾದರೂ ಭಕ್ತಿ, ಶ್ರದ್ಧೆಯಿಂದ ಕಲಿಯ ಬಹುದಾಗಿದೆ. ನೆದರ್ಲ್ಯಾಂಡ್ ದೇಶದ ಯುವಕ ಸಂಸ್ಕೃತ ಭಾಷೆಯ ಮೇಲಿನ ಅಭಿಮಾನದಿಂದ ಗ್ರಾಮದ ಕಮರಿಮಠಕ್ಕೆ ಆಗಮಿಸಿದ್ದು, ಎಲ್ಲರಿಗೂ ಸ್ಫೂರ್ತಿ ನೀಡಿದೆ. ಇಂದು ವಿದೇಶಿಯರು ಸಹ ಸಂಸ್ಕೃತ, ವೇದ ಸಂಗೀತ ಕಲಿಯಲು ಭಾರತಕ್ಕೆ ಬರುತ್ತಿದ್ದು, ಭಾರತೀಯರು ದೇವ ಭಾಷೆಯಾದ ಸಂಸ್ಕೃತ ಕಲಿತು ಇತರರಿಗೂ ಕಲಿಸಬೇಕೆಂದರು.

ಈ ಸಂದರ್ಭದಲ್ಲಿ ಶ್ರೀ ಸದ್ಗುರು ಸಿದ್ದಲಿಂಗೇಶ್ವರ ಮಹಾಸ್ವಾಮಿಗಳ ಸಂಸ್ಕೃತ 5 ಪಾಠ ಶಾಲೆಗಳ ಅಧ್ಯಕ್ಷ ಪ್ರಭು ಪೂಜಾರಿ, ಸಂಸ್ಕೃತ ಭಾಷಾ ಸಂಪನ್ಮೂಲ ವ್ಯಕ್ತಿ ಆರತಿ ಖೋತ, ರಾಜು ಪೂಜಾರಿ, ರಾಹುಲ್‌ ಗಿರಡೆ, ಬಸವಶ್ರೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಿದಾನಂದ ಪಾಟೀಲ ಹಾಗೂ ಎಲ್ಲ ಸಂಸ್ಕೃತ ಪಾಠ ಶಾಲೆಗಳ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಇದ್ದರು.