ಭದ್ರಾ ಡ್ಯಾಂನಿಂದ ಅಚ್ಚುಕಟ್ಟು ಜಿಲ್ಲೆಗಳ ವ್ಯಾಪ್ತಿಯ ಎಲ್ಲ ಹಂತದ ನಾಲೆಗಳಲ್ಲಿ ತುಂಬಿರುವ ಹೂಳು, ಕಳೆಗಿಡಗಳ ತೆರವಿಗೆ ಪ್ರತಿ ಕ್ಷೇತ್ರದ ಶಾಸಕರು ಒಂದೆರೆಡು ದಿನ ಅಧಿಕಾರಿಗಳೊಂದಿಗೆ ನಾಲೆಗಳನ್ನು ವೀಕ್ಷಿಸಿ, ನಾಲೆಗಳ ಹೂಳೆತ್ತಲು ಸರ್ಕಾರದ ಮೇಲೆ ಒತ್ತಡ ಹೇರಲಿ ಎಂದು ಭದ್ರಾ ಯೋಜನೆ ನೀರಾವರಿ ಸಲಹಾ ಸಮಿತಿ (ರೈತ ಪ್ರತಿನಿಧಿ) ಸದಸ್ಯ ತೇಜಸ್ವಿ ವಿ. ಪಟೇಲ್ ಒತ್ತಾಯಿಸಿದ್ದಾರೆ.

- ಭದ್ರಾ ನಾಲೆ ಹೂಳೆತ್ತಿಸುವ ಜೊತೆ ಭದ್ರಾ ಮೇಲ್ದಂಡೆಗೆ ಹನಿ ನೀರಾವರಿ ಜಾಲಕ್ಕೆ ಕೇಂದ್ರ-ರಾಜ್ಯದ ಅನುದಾನಕ್ಕೆ ಒತ್ತಾಯಿಸಲಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ಡ್ಯಾಂನಿಂದ ಅಚ್ಚುಕಟ್ಟು ಜಿಲ್ಲೆಗಳ ವ್ಯಾಪ್ತಿಯ ಎಲ್ಲ ಹಂತದ ನಾಲೆಗಳಲ್ಲಿ ತುಂಬಿರುವ ಹೂಳು, ಕಳೆಗಿಡಗಳ ತೆರವಿಗೆ ಪ್ರತಿ ಕ್ಷೇತ್ರದ ಶಾಸಕರು ಒಂದೆರೆಡು ದಿನ ಅಧಿಕಾರಿಗಳೊಂದಿಗೆ ನಾಲೆಗಳನ್ನು ವೀಕ್ಷಿಸಿ, ನಾಲೆಗಳ ಹೂಳೆತ್ತಲು ಸರ್ಕಾರದ ಮೇಲೆ ಒತ್ತಡ ಹೇರಲಿ ಎಂದು ಭದ್ರಾ ಯೋಜನೆ ನೀರಾವರಿ ಸಲಹಾ ಸಮಿತಿ (ರೈತ ಪ್ರತಿನಿಧಿ) ಸದಸ್ಯ ತೇಜಸ್ವಿ ವಿ. ಪಟೇಲ್ ಒತ್ತಾಯಿಸಿದ್ದಾರೆ.

ನಗರದಲ್ಲಿ ಬುಧ‍ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಡ್ಯಾಂನಿಂದ ಸೆ.18ರಿಂದ ಅ.2 ರವರೆಗೆ ನೀರು ಹರಿಸಿದ ವೇಳೆ ಶೇ.90ರಷ್ಟು ಅಚ್ಚುಕಟ್ಟು ಪ್ರದೇಶಕ್ಕೆ ನೀರು ತಲುಪುವಲ್ಲಿ ಹಲವಾರು ತಿಂಗಳ ವೇತನವಿಲ್ಲದಿದ್ದರೂ ದುಡಿದ ಎಂಜಿನಿಯರ್‌ಗಳು, ಸೌಡಿಗಳ ಪಾತ್ರ ದೊಡ್ಡದಾಗಿದ್ದು, ಅಚ್ಚುಕಟ್ಟು ವ್ಯಾಪ್ತಿಯ ಕ್ಷೇತ್ರಗಳ ಶಾಸಕರು ತಮ್ಮ ಭಾಗದ ನಾಲೆಗಳಲ್ಲಿ ಒಂದೆರೆಡು ದಿನ ಸುತ್ತಾಡಿ, ನಾಲೆ ಹೂಳೆತ್ತಿಸಲು ಸರ್ಕಾರದ ಮೇಲೆ ಒತ್ತಡ ಹೇರಲಿ ಎಂದರು.

ಬಹುತೇಕ ಎಲ್ಲ ಹಂತದ ನಾಲೆಗಳಲ್ಲೂ ಹೂಳು ತುಂಬಿದ್ದು, ಈ ಕಾರಣಕ್ಕೆ ಈಚೆಗೆ ನಾಲೆಗೆ ನೀರು ಬಿಟ್ಟಾಗ ಸುಮಾರು 1 ಟಿಎಂಸಿನಷ್ಟು ನೀರು ವ್ಯರ್ಥವಾಗಿದೆ. ಹೂಳೆತ್ತಿಸಿದ್ದರೆ ಅದೇ 1 ಟಿಎಂಸಿ ನೀರು ಸಹ ಅಚ್ಚುಕಟ್ಟು ಕೊನೆಯ ಭಾಗದ ರೈತರಿಗೂ ಸಿಗುತ್ತಿಲ್ಲು. ದಾವಣಗೆರೆ ಜಿಲ್ಲೆಯಲ್ಲಿ ತಮ್ಮ ಕ್ಷೇತ್ರದಲ್ಲಿ ಭದ್ರಾ ಅಚ್ಚುಕಟ್ಟು ಹೊಂದಿರುವ ಶಾಸಕರು ತಮ್ಮ ವ್ಯಾಪ್ತಿಯ ನಾಲೆಗಳಲ್ಲಿ ಎಂಜಿನಿಯರ್‌ಗಳ ಸಮೇತ ಸುತ್ತಾಡಿ, ನಾಲೆಗಳ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸಲಿ ಎಂದು ತಿಳಿಸಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಮಂಜೂರಾದ ನೀರಿನಲ್ಲಿ 6-7 ಟಿಎಂಸಿ ನೀರಿನಲ್ಲಿ ಕೆರೆಗಳನ್ನು ತುಂಬಿಸುವುದಾದರೆ ಉಳಿಯುವ 21ರಿಂದ 22 ಟಿಎಂಸಿ ನೀರು ಹನಿ ನೀರಾವರಿ ಜಾಲದ ಮೂಲಕ ಕೃಷಿ ಭೂಮಿಗೆ ಒದಗಿಸುವುದರಿಂದ ಚಿತ್ರದುರ್ಗ ಜಿಲ್ಲೆಯ ಜನಪ್ರತಿನಿಧಿಗಳೂ ಭದ್ರಾ ನೀರಿಗೆ ಒತ್ತಾಯಿಸುವ ಜೊತೆಗೆ ತಮ್ಮ ಭಾಗದಲ್ಲಿ ಹನಿ ನೀರಾವರಿ ಜಾಲ ರೂಪಿಸಲು ಕೇಂದ್ರ, ರಾಜ್ಯ ಸರ್ಕಾರಗಳಿಗೆ ಅನುದಾನಕ್ಕೆ ಒತ್ತಾಯಿಸಬಹುದು. ಮೇಲ್ದಂಡೆ ವ್ಯಾಪ್ತಿಯ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಲಿ ಎಂದು ಸಲಹೆ ನೀಡಿದರು.

ಮಳೆಗಾದಲ್ಲಿ ಭದ್ರಾ ನಾಲೆಗೆ ನೀರು ಹರಿಸಲು ಅನುಕೂಲ ಇಲ್ಲದಿದ್ದಾಗ ಸೂಳೆಕೆರೆ ಹಳ್ಳ, ಶ್ಯಾಗಲೆ ಹಳ್ಳ, ಕೋಗಲೂರು ಹಳ್ಳ ಮತ್ತಿತರೆ ಹಳ್ಳಗಳನ್ನು ಸೇರಿದಂತೆ ದೇವರ ಬೆಳಕೆರೆ ಕೆರೆಗೆ ನೀರು ನೀಡಬಲ್ಲ ಕೊಪ್ಪ ಗೇಟ್ ಮೂಲಕ ನೀರು ಹರಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಿಕೊಳ್ಳುವುದು ಒಳ್ಳೆಯದು. ಈ ಅವಕಾಶ ಅನಿವಾರ್ಯದ ಸಂದರ್ಭ ವಿಶೇಷವಾಗಿ ಹಳ್ಳಿಗಳಿಗೆಂದೇ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ನಾಲೆಗಳಿಗೆ ನೀರು ಹರಿಸುವ ವೇಳೆ ಹಳ್ಳಕ್ಕೆ ನೀರು ಬಿಡಬಾರದು ಎಂದು ಹೇಳಿದರು.

ಬೆಂಗಳೂರಿನ ವಿಕಾಸ ಸೌಧದಲ್ಲಿ ಆ.18ರಂದು ನಡೆದ ಭದ್ರಾ ಐಸಿಸಿ ಸಭೆಯಲ್ಲೇ ತೀವ್ರ ಮಳೆ ಕೊರತೆಯಿಂದ ಈ ಸಲ ಮಳೆಗಾಲದಲ್ಲಿ ನೀರು ಹರಿಸುವುದಿಲ್ಲವೆಂಬ ತೀರ್ಮಾನ ಪ್ರಕಟಿಸಿದ್ದರೆ ಸೆಪ್ಟಂಬರ್‌ನಿಂದ ಡಿಸೆಂಬರ್‌ನಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ಆಗಬಹುದಾದ ಪರಿಣಾ ಊಹಿಸಿ, ಸಭೆಯಲ್ಲಿ ಚರ್ಚಿಸಲು ಅವಕಾಶ‍ವಾಗಿದ್ದರೆ ಬಹುಶಃ ಐಸಿಸಿ ತೀರ್ಮಾನದಲ್ಲಿ ಮಾರ್ಪಾಡು ಆಗುತ್ತಿತ್ತು. ಆಗ ಜಿಲ್ಲೆಯಲ್ಲಿ ನೀರಿಗಾಗಿ ಇಷ್ಟೊಂದು ಹಾಹಾಕಾರ ಆಗುತ್ತಿರಲಿಲ್ಲ. ಐಸಿಸಿ ಮುಂದಿನ ಪರಿಸ್ಥಿತಿಗಳನ್ನು ಅಂದಾಡಿಸುವಲ್ಲೇ ವಿಫಲವಾಯಿತು ಎಂದು ಐಸಿಸಿ ಸದಸ್ಯನಾಗಿ ಒಪ್ಪುತ್ತೇನೆ ಎಂದು ತೇಜಸ್ವಿ ವಿ. ಪಟೇಲ್‌ ತಿಳಿಸಿದರು.

ರೈತ ಮುಖಂಡರಾದ ಅರೇಹಳ್ಳಿ ಕೆ.ಜಿ.ಆರ್. ನಾಯ್ಕ, ಚಿಕ್ಕ ಕುರುಬರಹಳ್ಳಿಯ ಸದಾನಂದ ಗೌಡ, ಕೆ. ಶೆಟ್ಟಿಹಳ್ಳಿಯ ಮಹಾರುದ್ರಯ್ಯ, ತಿಮ್ಮೇನಹಳ್ಳಿ ಗಂಗಾಧರ, ಮುಕ್ತೇನಹಳ್ಳಿ ಸತೀಶ ಗೌಡ, ನಾಗರಸನಹಳ್ಳಿ ಬಾಬಜ್ಜ, ಕಣಿವೆಬಿಳಜಿ ಅಣ್ಣೋಜಿರಾವ್‌, ಕವಳಿ ತಾಂಡಾದ ಶಶಿಕುಮಾರ, ಕಾರಿಗನೂರು ಕೊಂಪೇರ್ ಬಸವರಾಜಪ್ಪ, ಜಿ.ಸಿ.ಮಂಜುನಾಥ ಇತರರು ಇದ್ದರು.

- - -

(ಬಾಕ್ಸ್‌)

* ಭದ್ರಾ ನೀರು ರೈತ ಹೋರಾಟಕ್ಕೆ ಸಿಕ್ಕ ಫಲ

- ಕ್ರೆಡಿಟ್ ಪಡೆದ ರಾಜಕಾರಣಿಗಳಿಗೆ ಟಾಂಗ್ ನೀಡಿದ ತೇಜಸ್ವಿ ಪಟೇಲ್‌

ದಾವಣಗೆರೆ: ಭದ್ರಾ ಡ್ಯಾಂನಿಂದ ಮಳೆಗಾಲದ ಬೆಳೆಗೆ ನಾಲೆಗಳಿಗೆ ಸರ್ಕಾರವು ನೀರನ್ನು ಹರಿಸಿದ್ದರೆ ನಾವ್ಯಾರೂ ಟ್ರ್ಯಾಕ್ಟರ್ ಸಮೇತ ದಾವಣಗೆರೆಗೆ ಬಂದು ಹೋರಾಡುತ್ತಿರಲಿಲ್ಲ. ಆದರೆ, ನಮ್ಮ ರೈತರ ಹೋರಾಟದ ಶ್ರೇಯವನ್ನು ಯಾರು ಯಾರೋ ಪಡೆಯಲು ಯತ್ನಿಸಿದರು. ನಮ್ಮ ರಾಜಕಾರಣಿಗಳಿಗೆ ಕ್ರೆಡಿಟ್ ಬೇಕು, ರೈತರಾದ ನಮಗೆ ನೀರು ಬರಬೇಕು ಎಂದು ಭದ್ರಾ ಯೋಜನೆ ನೀರಾವರಿ ಸಲಹಾ ಸಮಿತಿ (ರೈತ ಪ್ರತಿನಿಧಿ) ಸದಸ್ಯ ತೇಜಸ್ವಿ ವಿ. ಪಟೇಲ್ ಮಾರ್ಮಿಕವಾಗಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣಿಗಳ ಸೋಷಿಯಲ್ ಮೀಡಿಯಾದಲ್ಲಿ ಹರಿದಷ್ಟು ನೀರೇನಾದರೂ ಒಂದು ವೇಳೆ ನಾಲೆಗಳಲ್ಲಿಯೇ ಹರಿದಿದ್ದರೆ ನಾವ್ಯಾರೂ ಟ್ರ್ಯಾಕ್ಟರ್ ಸಮೇತ ಬಂದು ಹೋರಾಡುವ ಪ್ರಮೇಯವೇ ಇರುತ್ತಿರಲಿಲ್ಲ. ನಮ್ಮ ಹೋರಾಟ ಹಾಗೂ ಮಳೆ ಆಗಿದ್ದರಿಂದ ಅಡಕೆ ಸೇರಿದಂತೆ ತೋಟದ ಬೆಳೆಗಲು, ಇತರೆ ಬೆಳೆಗಳು ಉಳಿದವು. ನಮ್ಮ ರೈತರ ಹೋರಾಟದ ಯಶಸ್ಸಿನ ಕ್ರೆಡಿಟ್ ರಾಜಕಾರಣಿಗಳಿಗೆ ಬೇಕು, ನಮ್ಮ ರೈತರಿಗೆ ನಾಲೆಗೆ ನೀರು ಹರಿಯಬೇಕು ಅಷ್ಟೇ ಎಂದರು.

ಅಪಾರ ಸಂಖ್ಯೆಯಲ್ಲಿ ಟ್ರ್ಯಾಕ್ಟರ್‌ ರ್ಯಾಲಿ ಮೂಲಕ ತೆರಳಿ, ಸೂಳೆಕೆರೆ ಮತ್ತು ಶಿರಮಗೊಂಡನಹಳ್ಳಿ ಬಳಿ ಪ್ರತಿಭಟಿಸಿದ್ದು ನಾವು. ಹರಿಹರ, ಮಲೆಬೆನ್ನೂರು, ಭದ್ರಾ ವಿಭಾಗಗಳ ಎಲ್ಲಾ ರೈತರ ಒತ್ತಾಯ, ದಾವಣಗೆರೆ- ಶಿವಮೊಗ್ಗ ಜಿಲ್ಲಾಧಿಕಾರಿಗಳ ಮನವಿ, ಜಲ ಸಂಪನ್ಮೂಲ ಇಲಾಖೆ ಎಂಜಿನಿಯರ್‌ಗಳು ನೀಡಿದ ವಸ್ತುಸ್ಥಿತಿಯ ವರದಿ ಎಲ್ಲ ಸೇರಿಕೊಂಡು, ಭದ್ರಾ ಡ್ಯಾಂನಿಂದ ಸೆ.18ರಿಂದ ಅ.2 ರವರೆಗೆ ಭದ್ರಾ ಡ್ಯಾಂನಿಂದ ನಾಲೆಗೆ ನೀರು ಹರಿಸುವಂತಾಯಿತು. ನಮ್ಮ ಹೋರಾಟದಿಂದಲೇ ಭದ್ರಾ ಡ್ಯಾಂ ಗೇಟ್ ಸಹ ಎತ್ತಿದ್ದು. ಅದೇ ವೇಳೆ ದೇವರ ಕೃಪೆಯಿಂದ ಒಳ್ಳೆಯ ಮಳೆಯೂ ಆಯಿತು ಎಂದು ತಿಳಿಸಿದರು.

ಯಾವುದೇ ಸಂಘಟನೆ, ಹೋರಾಟಗಳಲ್ಲಿ ಜನ ಸೇರಿದಾಗ ಅಲ್ಲಿ ವೆಚ್ಚವಾಗುವ ಹಣ ಎಲ್ಲಿಂದ ಬರುತ್ತದೆಂಬುದನ್ನು ತಿಳಿದುಕೊಳ್ಳುವುದು ಅತಿ ಮುಖ್ಯ. ಟ್ರ್ಯಾಕ್ಟರ್‌ಗಳಿಗೆ ಆಯಾ ಮಾಲೀಕರೆ ಡೀಸೆಲ್ ಹಾಕಿಸಿಕೊಂಡು ಬಂದಿದ್ದರೆ, ಸೂಳೆಕೆರೆಯಲ್ಲಿ ಪ್ರತಿಭಟನೆ ನಡೆಸಿದ ವೇಳೆ ಉಪಾಹಾರದ ವೆಚ್ಚವನ್ನು ಕಾರಿಗನೂರು ಗ್ರಾಮಸ್ಥರು ನೋಡಿಕೊಂಡಿದ್ದರು. ಶಿರಮನಗೊಂಡನಹಳ್ಳಿ ಪ್ರತಿಭಟನೆ ವೇಳೆ ಉಪಾಹಾರ ವ್ಯವಸ್ಥೆಯನ್ನು ಕುಕ್ಕುವಾಡದ ಕಬ್ಬು ಬೆಳೆಗಾರರ ಸಂಘದಿಂದ ಮಾಡಲಾಗಿತ್ತು ಎಂದು ರೈತ ಹೋರಾಟದ ಯಶಸ್ಸಿನ ಫಲ ತಮ್ಮದೆಂದು ಕ್ರೆಡಿಟ್ ತೆಗೆದುಕೊಂಡ ರಾಜಕಾರಣಿಗಳಿಗೆ ತೇಜಸ್ವಿ ಪಟೇಲ್ ಟಾಂಗ್ ನೀಡಿದರು.

- - -

-7ಕೆಡಿವಿಜಿ1:

ದಾವಣಗೆರೆಯಲ್ಲಿ ಭದ್ರಾ ಯೋಜನೆ ನೀರಾವರಿ ಸಲಹಾ ಸಮಿತಿ (ರೈತ ಪ್ರತಿನಿಧಿ) ಸದಸ್ಯ ತೇಜಸ್ವಿ ವಿ.ಪಟೇಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.