ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಶಾಂತಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಸಚಿವ ದಿ.ಕೆ.ಎನ್.ನಾಗೇಗೌಡರ 21ನೇ ವರ್ಷದ ಪುಣ್ಯಸ್ಮರಣೆ ಹಾಗೂ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಫೆ.5ರಂದು ಬೆಳಗ್ಗೆ 11 ಗಂಟೆಗೆ ಶಾಂತಿ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆ ಕಾರ್ಯದರ್ಶಿ ಎಂ.ಎಚ್.ಕೆಂಪಯ್ಯ ತಿಳಿಸಿದರು.ಪಟ್ಟಣದ ಶಾಂತಿ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕೆಂಬ ಆಕಾಂಕ್ಷೆಯೊಂದಿಗೆ ಕೆ.ಎನ್.ನಾಗೇಗೌಡರು 1970ರಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿ ದೀಪವಾಗಿದ್ದರು ಎಂದರು.
ಶಾಸಕರಾಗಿ ಆಯ್ಕೆಯಾಗಿ ಪಶು ಸಂಗೋಪನಾ ಸಚಿವರಾಗಿ ಹೈನುಗಾರಿಕೆಗೆ ಹೊಸ ರೂಪ ಕೊಟ್ಟಿದ್ದರು. ದಿ.ಕೆ.ಎನ್. ನಾಗೇಗೌಡರು ದೈಹಿಕವಾಗಿ ನಮ್ಮ ಜೊತೆಗೆ ಇಲ್ಲದಿದ್ದರೂ ಸಾವಿರಾರು ಜನರ ಮನಸ್ಸಿನಲ್ಲಿ ಸಾಧನೆಯ ಮೂಲಕ ಶಾಶ್ವತವಾಗಿ ಉಳಿದಿದ್ದಾರೆ ಎಂದರು.ಶಾಂತಿ ಶಿಕ್ಷಣ ಸಂಸ್ಥೆ ಹಾಗೂ ಶಾಂತಿ ಸೇವಾ ಟ್ರಸ್ಟ್‌ನಿಂದ ದಿ.ನಾಗೇಗೌಡರ 21ನೇ ಪುಣ್ಯಸ್ಮರಣೆಯನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಉದ್ಘಾಟಿಸುವರು. ಶಾಂತಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಎಂ.ಕೆ.ನಾಗಮಣಿ ನಾಗೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಪಶುಸಂಗೋಪನೆ ಪ್ರಗತಿಪರ ರೈತ ತಂಡಸನಹಳ್ಳಿ ಸಂಜಯ್ ಅವರನ್ನು ಅಭಿನಂದಿಸಿ ಸಮಾಜ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಜೊತೆಗೆ ಬಡ ರೈತರೊಬ್ಬರಿಗೆ ಉಚಿತವಾಗಿ ಹಸು ವಿತರಿಸಲಾಗುವುದು ಎಂದರು.
ಶಾಂತಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಪುಟ್ಟರಾಜು ಮಾತನಾಡಿ, ದಿ.ಕೆ.ಎನ್.ನಾಗೇಗೌಡರ ಪುಣ್ಯಸ್ಮರಣೆ ಅಂಗವಾಗಿ ಫೆ.3ರಂದು ಪದವಿ ಪೂರ್ವ ಕಾಲೇಜು ಹಂತದ ತಾಲೂಕು ಮಟ್ಟದ ಚರ್ಚಾ ಸ್ಪರ್ಧೆ, ಪ್ರೌಢಶಾಲಾ ವಿಭಾಗ ಹಂತದ ಜಾನಪದ ಗೀತೆ ಸ್ಪರ್ಧೆ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಹೆಸರನ್ನು ನೋಂದಾಣಿಸಿಕೊಳ್ಳಬಹುದು ಎಂದರು.ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ಫೆ.5ರಂದು ನಡೆಯಲಿರುವ ಪುಣ್ಯ ಸ್ಮರಣೆಯಲ್ಲಿ ಪ್ರಶಸ್ತಿ ನೀಡಲಾಗುವುದು. ಮುಂದಿನ ವರ್ಷ ರೈತರಿಗೆ ಉಚಿತವಾಗಿ ಹಸು ನೀಡುವ ಜೊತೆಗೆ ಹೊಲಿಗೆ ಯಂತ್ರವನ್ನು ಕೂಡ ನೀಡಲಾಗುವುದು ಎಂದರು.
ಕ್ರೀಡಾ ಚಟುವಟಿಕೆ ಸಮಾರೋಪ ಸಮಾರಂಭ:ಶಾಂತಿ ಪದವಿ ಪೂರ್ವ ಕಾಲೇಜು ವತಿಯಿಂದ ಕೆ.ಎನ್.ನಾಗೇಗೌಡರ ಜನ್ಮ ದಿನಾಚರಣೆ ಹಾಗೂ 2024-25ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಫೆ.1ರಂದು ಬೆಳಗ್ಗೆ 11ಗಂಟೆಗೆ ಶಾಂತಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಪ್ರಾಂಶುಪಾಲರಾದ ಸಿ.ಅನಿತಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲರಾದ ಜಿ.ವೇದಮೂರ್ತಿ ಇದ್ದರು.