ಬಳ್ಳಾರಿ: ತಾಲೂಕಿನ ಕುಡಿತಿನಿ ಬಳಿಯ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಬಿಟಿಪಿಎಸ್‌), ಕರ್ನಾಟಕ ವಿದ್ಯುತ್ ನಿಗಮ, ಬಿಟಿಪಿಎಸ್ ಬಸವ ಬಳಗ ಸಹಯೋಗದಲ್ಲಿ ವಿಶ್ವಗುರು ಜಗಜ್ಯೋತಿ ಬಸವೇಶ್ವರರ 893ನೇ ಜಯಂತಿ ಕಾರ್ಯಕ್ರಮ ಆಯೋಜಿಸಲಾಯಿತು.

ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲೇಖಕ ಸಿದ್ಧರಾಮ ಕಲ್ಮಠ ಬಸವಾದಿ ಶರಣರು ನಾಡಿಗೆ ನೀಡಿದ ದಾಸೋಹ ಪರಂಪರೆಯ ಕೊಡುಗೆ ಹಾಗೂ ಕಾಯಕ ತತ್ವ ಕುರಿತು ತಿಳಿಸಿದರು.

ಪ್ರಜಾಪ್ರಭುತ್ವ ಕಲ್ಪನೆಗೆ ಪ್ರೇರಣೆ ನೀಡಿದ 12ನೇ ಶತಮಾನದ ಜನತಾ ಪಾರ್ಲಿಮೆಂಟ್ ಅನುಭವ ಮಂಟಪವಾಗಿತ್ತು. ಅರಮನೆ- ಗುರುಮನೆಯಲ್ಲಿ ಬಂಧನಕ್ಕೊಳಗಾಗಿದ್ದ ಸರಸ್ವತಿಯನ್ನು ಬಿಡುಗಡೆಗೊಳಿಸಿ, ಗುಡಿಸಲಿನಲ್ಲೂ ಜ್ಞಾನದ ಹಣತೆ ಹಚ್ಚಿದವರು ಜಗಜ್ಯೋತಿ ಬಸವಣ್ಣನವರು. ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿ ಸಾಮಾಜಿಕ ಪರಿವರ್ತನೆ ಬಯಸಿ ಜಾತ್ಯತೀತ ಸಮಾಜಕ್ಕೆ ನಾಂದಿ ಹಾಡಿದ ಅವರ ವಿಚಾರಗಳು ನಿತ್ಯ ನೂತನವಾಗಿವೆ. ವಚನ ರಚನೆಯ ಮೂಲಕ‌ ಕನ್ನಡ ಭಾಷೆಯನ್ನು ದೇವಭಾಷೆಯನ್ನಾಗಿ ಮಾಡಿ ಆತ್ಮೋದ್ಧಾರದ ದಾರಿ ಕಂಡುಕೊಂಡ ಬಸವಾದಿ ಶರಣರು, ಕಾಯಕ ದಾಸೋಹ ಪರಿಕಲ್ಪನೆ ಮೂಲಕ ಸತ್ಯ ಶುದ್ಧ ಕಾಯಕಕ್ಕೆ ಪ್ರಾಧಾನ್ಯತೆ ನೀಡಿದರು. ಆಚಾರ ವಿಚಾರಗಳ ಸಮನ್ವಯದಿಂದ ದಯೆಯೇ ಧರ್ಮದ ಮೂಲವೆಂದು ಸಾರಿ ಸನ್ಮಾರ್ಗದಲ್ಲಿ ನಡೆಯಲು ದಾರಿ ತೋರಿದರು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಖೋತ್ಪನ್ನ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಆರ್.ಗಂಗಾಧರಯ್ಯ ಮಾತನಾಡಿ, ಕತ್ತಲಲಿದ್ದ ಜನರಿಗೆ ಬೆಳಕಿನ ಹಾದಿ ತೋರಿದ ಬಸವಣ್ಣನವರ ತತ್ವಗಳು ಸದಾ ಪ್ರಸ್ತುತವಾಗಿವೆ. ಕಾಯಕ ನಿಷ್ಠೆ, ಸಾಮಾಜಿಕ‌ ಸಮಾನತೆ, ಸ್ತ್ರೀ ಸಮಾನತೆ, ದಲಿತೋದ್ಧಾರಕಾಗಿ ಶ್ರಮಿಸಿದ ಶರಣರ ಚಿಂತನೆಗಳನ್ನು ನಾವು ಬದುಕಿನಲ್ಲಿ ಅನುಸರಿಸಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಬಿಟಿಪಿಎಸ್‌ನ ಮುಖ್ಯ ಅಭಿಯಂತರ ಮಲ್ಲಿಕಾರ್ಜುನ ಬಿ.ಮುಟಗಾರ್, ಮುಖ್ಯ ಅಭಿಯಂತರ ಎಚ್‌.ಅಶೋಕಕುಮಾರ್, ಪ್ರಧಾನ ಪ್ರಬಂಧಕ ಶಿವಲೀಲ್ ಜಿ.ನಾಯ್ಕ್, ಮುಖ್ಯ ಪ್ರಭಾರ ಅಭಿಯಂತರ ನರೇಂದ್ರ ರಾವ್ ಕುಲಕರ್ಣಿ, ಪ್ರಭಾರ ಉಪ ಪ್ರಧಾನ ಪ್ರಬಂಧಕ ರಾಮಪ್ಪ, ಬಸವ ಬಳಗದ ತಿಪ್ಪೇರುದ್ರಗೌಡ, ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಸವ ಬಳಗದ ಅಧ್ಯಕ್ಷ ಉಮೇಶ್‌ ರಮೇಶ್ ಪ್ರಾಸ್ತಾವಿಕ ಮಾತನಾಡಿದರು. ವಚನಗಳ ಕುರಿತು ಏರ್ಪಡಿಸಿದ್ದ ಅನೇಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹಿಂದೂಸ್ತಾನಿ ಗಾಯಕ ದೊಡ್ಡಬಸವ ಗವಾಯಿ ಡಿ.ಕಗ್ಗಲ್ ಮತ್ತು ತಂಡದವರು ವಚನ ಗಾಯನ ಪ್ರಸ್ತುತಪಡಿಸಿದರು.