ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಕಟೀಲು ಕ್ಷೇತ್ರವು ಭಕ್ತರ ಆರಾಧ್ಯ ಕೇಂದ್ರವಾಗಿದ್ದು ಇಂದು ವಿಶ್ವ ಮಟ್ಟದಲ್ಲಿ ಕ್ಷೇತ್ರ ಪ್ರಸಿದ್ಧಿಯನ್ನು ಪಡೆದಿದೆ. ಕಟೀಲು ಕ್ಷೇತ್ರಕ್ಕೆ ಕೀರ್ತಿಶೇಷ ಗೋಪಾಲಕೃಷ್ಣ ಆಸ್ರಣ್ಣರ ಕೊಡುಗೆ ಅಪಾರವಾದುದು ಎಂದು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ ಹೇಳಿದರು.ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ನಡೆದ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ದಿ. ಗೋಪಾಲಕೃಷ್ಣ ಆಸ್ರಣ್ಣ ಅರ್ಚಕ ಪ್ರಶಸ್ತಿಯನ್ನು ಉಡುಪಿಯ ಶ್ರೀ ಅನಂತೇಶ್ವರ ದೇವಸ್ಥಾನದ ಪ್ರಧಾನ ಆರ್ಚಕ ವೇದಮೂರ್ತಿ ಸಗ್ರಿ ವೇದವ್ಯಾಸ ಐತಾಳರಿಗೆ, ದಿ. ಗೋಪಾಲಕೃಷ್ಣ ಆಸ್ರಣ್ಣ ಮೊಕ್ತೇಸರ ಪ್ರಶಸ್ತಿಯನ್ನು ಮುಚ್ಚೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಮುಚ್ಚೂರು ಹರಿ ಭಟ್ ಅವರಿಗೆ ನೀಡಿ ಗೌರವಿಸಲಾಯಿತು. ದಿ. ಗೋಪಾಲಕೃಷ್ಣ ಆಸ್ರಣ್ಣ ಕಲಾವಿದ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ ಲಕ್ಷ್ಮಣ ಕೋಟ್ಯಾನ್ ಅವರಿಗೆ ಪ್ರದಾನ ಮಾಡಲಾಯಿತು. ವಿಶೇಷ ಪುರಸ್ಕಾರವನ್ನು ಧನಲಕ್ಷ್ಮೀ ಕ್ಯಾಶ್ಯೂ ಇಂಡಸ್ಟ್ರೀಸ್ ಮೂಡುಬಿದಿರೆಯ ಶ್ರೀಪತಿ ಭಟ್ ಅವರಿಗೆ ನೀಡಿ ಗೌರವಿಸಲಾಯಿತು.
ಸಾಂಸ್ಕೃತಿಕ ಕ್ಷೇತ್ರದ ಸಾಧಕರ ನೆಲೆಯಲ್ಲಿ ಆರಾಧನಾ ಭಟ್, ಕ್ರೀಡಾ ಕ್ಷೇತ್ರದಲ್ಲಿ ಬಡಗಎಕ್ಕಾರು ಸರ್ಕಾರಿ ಸಂಯುಕ್ತ ಪ್ರೌಢಶಾಲೆ, ಶಿಕ್ಷಣ ಕ್ಷೇತ್ರದಲ್ಲಿ ವಿದ್ವಾನ್ ರಾಧಾಕೃಷ್ಣ ಭಟ್ ಬೇಂಗ್ರೋಡಿ, ರಾಮ ಬಾಯರಿ, ಸುಬ್ರಹ್ಮಣ್ಯ ಭಟ್ (ಪಾಕ ಶಾಸ್ತ್ರ), ಕೃಷಿ ಕ್ಷೇತ್ರದಲ್ಲಿ ಎಕ್ಕಾರಿನ ಸಿರಿ ಕುರಲ್ ರೈತ ಉತ್ಪಾದಕರ ಸಂಸ್ಥೆ, ಗೋಸೇವೆಯಲ್ಲಿ ಕಿನ್ನಿಗೋಳಿ ಪಾಂಚಜನ್ಯ ಗೋ ಶಾಲೆ, ಅಂತಾರಾಷ್ಟ್ರೀಯ ಯೋಗ ಪಟು ಕುಮಾರಿ ಮೇಘಶ್ರೀ ಶೆಟ್ಟಿ, ದ.ಕ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ವಿದ್ಯಲತಾ ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.ಕಟೀಲು ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಕುಳಾಯಿ ಯಕ್ಷ ನಂದನದ ಸಂಚಾಲಕ ನ್ಯಾಯವಾದಿ ಸಂತೋಷ್ ಐತಾಳ್, ಮಾನಂಪಾಡಿ ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಪುರಂದರ ಶೆಟ್ಟಿಗಾರ್, ಲೀಲಾಕ್ಷ ಕರ್ಕೇರಾ, ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ, ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಕದ್ರಿ ನವನೀತ ಶೆಟ್ಟಿ, ಕೆ.ಪಿ. ಜಗದೀಶ್ ಅಧಿಕಾರಿ, ಗೋಪಾಲಕೃಷ್ಣ ಆಸ್ರಣ್ಣ, ಡಾ .ರಮ್ಯಾ ರವಿತೇಜ, ಗುರುಪ್ರಸಾದ್ ಭಟ್ ಕಟೀಲು ,ಅಶ್ವಥ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಲಕ್ಷ್ಮೀನಾರಾಯಣ ಆಸ್ರಣ್ಣ ಸ್ವಾಗತಿಸಿದರು.ಡಾ. ರಮ್ಯಾ ರವಿತೇಜ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಯಕ್ಷಗಾನ ಬಯಲಾಟ ನಡೆಯಿತು.