ಇಂದಿನಿಂದ ಶ್ರೀಶೈಲ ಪೀಠದ ಲಿಂಗೈಕ್ಯ ಶ್ರೀಗಳ ಸ್ಮರಣೋತ್ಸವ

| Published : Oct 24 2025, 01:00 AM IST

ಇಂದಿನಿಂದ ಶ್ರೀಶೈಲ ಪೀಠದ ಲಿಂಗೈಕ್ಯ ಶ್ರೀಗಳ ಸ್ಮರಣೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಶೈಲ ಪೀಠದ ಲಿಂಗೈಕ್ಯ ಶ್ರೀ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಕ 39ನೇ ವಾರ್ಷಿಕ ಸ್ಮರಣೋತ್ಸವ ಹಾಗೂ ಲಿಂಗೈಕ್ಯ ಶ್ರೀ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ 14ನೇ ವರ್ಷದ ಪುಣ್ಯಾರಾಧನೆ, ಜನಜಾಗೃತಿ ಧರ್ಮ ಸಮ್ಮೇಳನ ಅ.24ರಿಂದ 2 ದಿನಗಳ ಕಾಲ ನಗರದಲ್ಲಿ ನಡೆಯಲಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.

- ಜನಜಾಗೃತಿ ಧರ್ಮ ಸಮ್ಮೇಳನ: ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾಹಿತಿ । ವಿವಿಧ ಗಣ್ಯರು ಉಪಸ್ಥಿತಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಶ್ರೀಶೈಲ ಪೀಠದ ಲಿಂಗೈಕ್ಯ ಶ್ರೀ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಕ 39ನೇ ವಾರ್ಷಿಕ ಸ್ಮರಣೋತ್ಸವ ಹಾಗೂ ಲಿಂಗೈಕ್ಯ ಶ್ರೀ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ 14ನೇ ವರ್ಷದ ಪುಣ್ಯಾರಾಧನೆ, ಜನಜಾಗೃತಿ ಧರ್ಮ ಸಮ್ಮೇಳನ ಅ.24ರಿಂದ 2 ದಿನಗಳ ಕಾಲ ನಗರದಲ್ಲಿ ನಡೆಯಲಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.24ರಿಂದ ವಿನೋಬ ನಗರದ ಶ್ರೀಶೈಲ ಮಠದಲ್ಲಿ ಇಷ್ಟಲಿಂಗ ಪೂಜೆ ನಡೆಯಲಿದೆ. ಭಾವೈಕ್ಯ, ಜನಜಾಗೃತಿ ಮತ್ತು ಧರ್ಮ ಸಮ್ಮೇಳನ ವಿನೋಬ ನಗರದ ದಾವಣಗೆರೆ-ಹರಿಹರ ಅರ್ಬನ್ ಕೋ-ಆಪ್ ಬ್ಯಾಂಕ್ ಸಮುದಾಯ ಭವನದಲ್ಲಿ ನಡೆಯಲಿದೆ ಎಂದರು.

24ರಂದು ಬೆಳಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಶ್ರೀಶೈಲ ಮಠದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯರ ಧ್ವಜಾರೋಹಣ ನೆರವೇರಿಸುವರು. ಅನಂತರ ಬೆಳಗ್ಗೆ 8.30 ಗಂಟೆಗೆ ಶ್ರೀಶೈಲ ಶ್ರೀಗಳಿಂದ ಇಷ್ಟಲಿಂಗ ಪೂಜೆ ನಡೆಯಲಿದೆ. ಅ.25ರ ಬೆಳಗ್ಗೆ 5ರಿಂದ ಶಿವದೀಕ್ಷಾ ಕಾರ್ಯಕ್ರಮಗಳು ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಅಂಬಿಕಾ ನಗರದ ಶ್ರೀ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಜಮಖಂಡಿ ಕಲ್ಯಾಣ ಮಠದ ಗೌರಿಶಂಕರ ಶ್ರೀ, ಮಣಕೂರಿನ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕೋಣಂದೂರಿನ ಶ್ರೀಪತಿ ಪಂಡಿತಾರಾಧ್ಯ ಶ್ರೀಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಹೇಳಿದರು.

ಅಕ್ಕಿಆಲೂರಿನ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಲಕ್ಷ್ಮೀಪುರದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಚನ್ನಗಿರಿ ಹಿರೇಮಠದ ಕೇದಾರಲಿಂಗ ಶ್ರೀ ಶಿವಶಾಂತವೀರ ಸ್ವಾಮೀಜಿ, ಚನ್ನಗಿರಿ ವಿರಕ್ತ ಮಠದ ಡಾ.ಬಸವ ಜಯಚಂದ್ರ ಸ್ವಾಮೀಜಿ, ತಾವರಕೆರೆ ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ, ಹರಪನಹಳ್ಳಿ ತೆಗ್ಗಿನಮಠದ ಶ್ರೀ ವರ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ಬಸವಾಪಟ್ಟಣ ಗವಿಮಠದ ಶ್ರೀ ಶಿವಕುಮಾರ ಹಾಲಶಂಕರ ಸ್ವಾಮೀಜಿ, ಕೋಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ಶ್ರೀ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.

24ರಂದು ಸಂಜೆ 6 ಗಂಟೆಗೆ ಭಾವೈಕ್ಯ, ಜನಜಾಗೃತಿ ಮತ್ತು ಧರ್ಮ ಸಮಾರಂಭವು ಬಾಳೇಹೊನ್ನೂರಿನ ರಂಭಾಪುರಿ ಪೀಠದ ಡಾ.ಪ್ರಸನ್ನರೇಣುಕಾ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು, ಶ್ರೀಶೈಲ ಮಹಾಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯಲಿದೆ. ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು. ಮುಷ್ಟೂರಿನ ರುದ್ರಮುನಿ ಶಿವಾಚಾರ್ಯ ಶ್ರೀಗಳು, ಮಹಾರಾಷ್ಟ್ರದ ಗುರುಸಿದ್ದ ಶಿವಾಚಾರ್ಯ ಶ್ರೀಗಳು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಧರ್ಮ ಸಮಾರಂಭ ಉದ್ಘಾಟಿಸುವರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಎನ್.ಎ. ಮುರುಗೇಶ, ಅಥಣಿ ಎಸ್.ವೀರಣ್ಣ, ದಿನೇಶ ಕೆ.ಶೆಟ್ಟಿ, ಎಸ್.ಜಿ.ಉಳುವಯ್ಯ, ಮಲ್ಲಿಕಾರ್ಜುನ ತ್ಯಾವಣಿಗೆ, ಡಿ.ಎಂ. ಹಾಲಸ್ವಾಮಿ, ಅಕ್ಕಿ ರಾಜು, ಡಾ.ಪಿ.ಎಂ.ವಿನಯಸ್ವಾಮಿ ಭಾಗವಹಿಸುವರು. ದೇವರ ಹಿಪ್ಪರಗಿಯ ಪ್ರೊ. ಸಿ.ಜಿ.ಮಠಪತಿ ಉಪನ್ಯಾಸ ನೀಡುವರು ಎಂದು ಹೇಳಿದರು.

25ರಂದು ಸಂಜೆ 6 ಗಂಟೆಗೆ ಶ್ರೀಶೈಲ, ರಂಭಾಪುರಿ ಪೀಠದ ಶ್ರೀಗಳು ಸಾನ್ನಿಧ್ಯದಲ್ಲಿ ರಾಮಘಟ್ಟದ ಶ್ರೀ ರೇವಣಸಿದ್ದ ಶಿವಾಚಾರ್ಯ ಶ್ರೀಗಳು, ಅವರಗೊಳ್ಳದ ಓಂಕಾರ ಶಿವಾಚಾರ್ಯ ಶ್ರೀಗಳು, ಹೆಬ್ಬಾಳು ವಿರಕ್ತ ಮಠದ ಮಹಾಂತ ರುದ್ರೇಶ್ವರ ಶ್ರೀಗಳು, ಬಸವನ ಬಾಗೇವಾಡಿಯ ಒಡೆಯರ್ ಶಿವಪ್ರಕಾಶ ಶಿವಾಚಾರ್ಯ ಶ್ರೀಗಳು ಉಪಸ್ಥಿತಿಯಲ್ಲಿ ಅಭಾವೀಮ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ. ಸಿದ್ದೇಶ್ವರ ಸಮಾರಂಭ ಉದ್ಘಾಟಿಸುವರು ಎಂದು ತಿಳಿಸಿದರು.

ಶಾಸಕ ಬಿ.ಪಿ.ಹರೀಶ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ, ಮಲೇಬೆನ್ನೂರು ಬಿ.ಚಿದಾನಂದಪ್ಪ, ದೇವರಮನಿ ಶಿವಕುಮಾರ, ಯಶವಂತರಾವ್ ಜಾಧವ್ ಇತರರು ಭಾಗವಹಿಸುವರು. ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಉಪನ್ಯಾಸ ನೀಡುವರು. 2 ದಿನಗಳ ಕಾಲ ಗುರುರಕ್ಷೆ, ಸಂಗೀತ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಭಕ್ತರು ಪಾಲ್ಗೊಳ್ಳುವಂತೆ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಶ್ರೀ ಮಠದ ಎಂ.ಬನ್ನಯ್ಯ ಸ್ವಾಮಿ, ದಾಕ್ಷಾಯಣಮ್ಮ, ಕೆ.ಎಂ. ಪರಮೇಶ್ವರಯ್ಯ, ಗುರುರಾಜ, ವಾಗೀಶಯ್ಯ ಆವರಗೊಳ್ಳ, ರಾಜಪ್ಪ ಮೇಷ್ಟ್ರು ಇತರರು ಇದ್ದರು.

- - -

(ಕೋಟ್‌)

* ವೀರಶೈವ ಲಿಂಗಾಯತ ಒಂದೇ: ಓಂಕಾರ ಶ್ರೀ

ವೀರಶೈವ ಲಿಂಗಾಯತ ಒಂದೇ ಎಂಬುದಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು, ಸಮಾಜದ ಹಿರಿಯರಾದ ಡಾ.ಶಾಮನೂರು ಶಿವಶಂಕರಪ್ಪ ಘಂಟಾಘೋಷವಾಗಿ ಸಾರಿದ್ದಾರೆ. ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರಂತೆ ನಾವೂ ಅದನ್ನೇ ಪ್ರತಿಪಾದಿಸುತ್ತಲೇ ಬಂದಿದ್ದೇವೆ. ಈ ಸಮಾಜದ ಅಖಂಡತೆ ಒಡೆದು ಹೋಗದಂತೆ ಕಾಪಾಡುವುದೇ ನಮ್ಮ ನಿಲುವಾಗಿದೆ. ಮಹಾಸಭಾ ನಿಲುವಿಗೆ ನಾವೆಲ್ಲರೂ ಬದ್ಧರಿದ್ದೇವೆ. ಧರ್ಮಸ್ವಾಸ್ಥ್ಯವನ್ನು ಎಲ್ಲರೂ ಒಂದಾಗಿ ಕಾಪಾಡಬೇಕು.

- ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಪುರವರ್ಗ ಮಠ, ಆವರಗೊಳ್ಳ.

- - -

-20ಕೆಡಿವಿಜಿ5: ದಾವಣಗೆರೆಯಲ್ಲಿ ಭಾನುವಾರ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.