ಸಾರಾಂಶ
- ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀ ಮಾಹಿತಿ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಮಾ.10 ಮತ್ತು 11ರಂದು ಹೊನ್ನಾಳಿ ಹಿರೇಕಲ್ಮಠದಲ್ಲಿ ಲಿಂ. ಶ್ರೀಮೃತ್ಯುಂಜಯ ಶಿವಾಚಾರ್ಯ ಮಹಾಸ್ವಾಮೀಜಿ 55ನೇ ವಾರ್ಷಿಕ ಪುಣ್ಯಾರಾಧನೆ ಹಾಗೂ ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ 10ನೇ ವಾರ್ಷಿಕ ಸಂಸ್ಮರಣೆ ಕಾರ್ಯಕ್ರಮಗಳ ನಿಮಿತ್ತ ವಿಶೇಷ ಪೂಜಾ ಕೈಂಕರ್ಯಗಳು, ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಹಿರೇಕಲ್ಮಠ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.ಭಾನುವಾರ ಶ್ರೀಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಮಾ.10ರಂದು ಬೆಳಗ್ಗೆ 9.20ಕ್ಕೆ ಶ್ರೀ ಜಗದ್ಗುರು ಪಂಚಾಚಾರ್ಯ ಧರ್ಮ ಧ್ವಜಾರೋಹಣವನ್ನು ಕೋಣಂದೂರು ಮಠದ ಪಟ್ಟದ ಅಭಿನಯ ಸಿದ್ದವೀರ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೆರವೇರಿಸಲಿದ್ದಾರೆ ಎಂದು ಹೇಳಿದರು.
ಸಂಜೆ 7 ಗಂಟೆಗೆ ಶ್ರೀ ಚನ್ನಪ್ಪಸ್ವಾಮಿ ಜನಕಲ್ಯಾಣ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಖ್ಯಾತ ಸಾಹಿತಿ ಲಿಂ.ಎಚ್. ತಿಪ್ಪೇರುದ್ರಸ್ವಾಮಿ ಮತ್ತು ಲಿಂ.ಶ್ರೀ ಎಚ್.ಎನ್. ಷಡಾಕ್ಷರ ಶಾಸ್ತ್ರಿ ಭಾವಿಕೆರೆ ದತ್ತಿ ಉಪನ್ಯಾಸ ಕಾರ್ಯಕ್ರಮಗಳು ಜರುಗಲಿವೆ. ಹೊನ್ನಾಳಿ ಹಿರೇಕಲ್ಮಠದ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಮೈಸೂರು ಬನ್ನಿಕೊಪ್ಪ ಮಠದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ವಿವಿಧ ಮಠಗಳ ಮಠಾಧೀಶರು ಉಪಸ್ಥಿತರಿರುವರು ಎಂದರು.ಶಿಕ್ಷಕರಾದ ಜಯಶೀಲ ಗಂಗಾಧರ ಸ್ವಾಮಿ, ಡಾ.ಪ್ರತಿಮಾ ನಿಜಗುಣ ಶಿವಯೋಗಿ ಸ್ವಾಮಿ ದತ್ತಿ ಉಪನ್ಯಾಸ ನೀಡಲಿದ್ದಾರೆ. ಮಾ.11ರಂದು ಬೆಳಗ್ಗೆ 8.30 ಗಂಟೆಗೆ ಲಿಂ.ಗುರುಗಳ ಕತೃ ಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ಜರುಗಲಿದೆ. ನಂತರ 10.30 ಗಂಟೆಗೆ ಧರ್ಮ ಸಭೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಜರುಗಲಿವೆ. ಸಾನಿಧ್ಯವನ್ನು ಹಿರೇಕಲ್ಮಠ ಸ್ವಾಮೀಜಿ ವಹಿಸಲಿದ್ದಾರೆ. ಮುಷ್ಟೂರು ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ ಮಠಾಧೀಶರು ಇರುವರು ಎಂದು ತಿಳಿಸಿದರು.
ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಡಾ. ಡಿ.ಬಿ. ಗಂಗಪ್ಪ, ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಗಣ್ಯರು ಭಾಗವಹಿಸಲಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ ಚಂದ್ರಶೇಖರ ಶಿವಾಚಾರ್ಯ ಶ್ರೀ ಪ್ರಶಸ್ತಿಯನ್ನು ಮುಂಡರಗಿ ತಾ. ಕೂರ್ಲಹಳ್ಳಿಯ ನಾಗಪ್ಪ ಗಂಗಪ್ಪ ಮಜ್ಜಿಗೆ ಅವರಿಗೆ ಪ್ರದಾನ ಮಾಡಲಾಗುವುದು. ಸಾಮೂಹಿಕ ವಿವಾಹದ ವಧು-ವರರಿಗೆ ಉಡುಗೊರೆ ಸೇವೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ವಿವರಿಸಿದರು.
ಶ್ರೀಮಠದ ಏಜೆಂಟ್ ಎಂ.ಪಿ.ಎಂ. ಚನ್ನಬಸಯ್ಯ ಇತರರು ಇದ್ದರು.- - - -2ಎಚ್.ಎಲ್.ಐ1:
ಹೊನ್ನಾಳಿಯಲ್ಲಿ ಹಿರೇಕಲ್ಮಠ ಶ್ರೀಗಳ ಸಮ್ಮುಖ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗೊಳಿಸಲಾಯಿತು.