ಸಾರಾಂಶ
ಚಾಲನೆ । ಬ್ಯಾಂಕ್ ಮುಖ್ಯಾಧಿಕಾರಿ ಎಂ.ಇಂದೂ ಮಾಹಿತಿ । ಕಂದಾಯ, ಇನ್ನಿತರ ತೆರಿಗೆ ಪಾವತಿಗೆ ಅನುಕೂಲ
ಕನ್ನಡಪ್ರಭ ವಾರ್ತೆ ಬೇಲೂರುಸಾರ್ವಜನಿಕರಿಗೆ ಕಂದಾಯ ಕಟ್ಟಲು ಅನುಕೂಲಕ್ಕಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಔಟ್‌ಲೆಟ್ ಕೌಂಟರ್ ಅನ್ನು ತೆರೆಯಲಾಗಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಮುಖ್ಯಾಧಿಕಾರಿ ಎಂ.ಇಂದೂ ತಿಳಿಸಿದರು.
ಪುರಸಭೆ ಕಚೇರಿಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದಲ್ಲಿ ಪುರಸಭೆಯಲ್ಲಿ ಕಂದಾಯ ತೆರಿಗೆ ಹಾಗೂ ಇನ್ನಿತರ ತೆರಿಗೆ ಪಾವತಿಗೆ ಅನುಕೂಲ ಕಲ್ಪಿಸಲು ಬ್ಯಾಂಕ್ ಕೌಂಟರ್ ತೆರಯುವ ನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.‘ಪುರಸಭೆ ವ್ಯಾಪ್ತಿಯಲ್ಲಿ ಬರುವಂತಹ ಕಂದಾಯ ತೆರಿಗೆ ಪಾವತಿ ಮಾಡಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಇದರಿಂದ ಆಸ್ತಿತೆರಿಗೆ ಕಟ್ಟಡ ಪರವಾನಗಿ ಮಳಿಗೆ ಬಾಡಿಗೆ ಹಾಗೂ ಪುರಸಭೆಗೆ ಸೇರಿದ ಇನ್ನಿತರ ತೆರಿಗೆಗಳನ್ನು ಪಾವತಿ ಮಾಡಲು ಸಾರ್ವಜನಿಕರು ಕಚೇರಿಗೆ ಹಾಗೂ ಬ್ಯಾಂಕಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಡಾವಣೆಗಳು ೩೮೩೨, ವಾಣಿಜ್ಯ ಉದ್ದೇಶಕ್ಕಾಗಿ ೧೫೪೫, ಖಾಲಿ ನಿವೇಶನಗಳು, ಇತರೆ ನಿವೇಶನಗಳು ೨೧೬೬ ಇವೆ. ಕಳೆದ ಸಾರಿ ೧ ಕೋಟಿ ೯೯ ಲಕ್ಷ ರು. ತೆರಿಗೆ ಹಣ ಬಂದಿದ್ದು ಇನ್ನು ಬಾಕಿ ೫ ಲಕ್ಷ ರು. ಇದೆ. ಈ ಬಾರಿ ವಸೂಲಾತಿ ಮಾಡಲಾಗುವುದು. ಏ.೧ ರಿಂದ ೩೦ ರೊಳಗೆ ತೆರಿಗೆ ಹಣ ಪಾವತಿಸುವ ಪ್ರತಿಯೊಬ್ಬರಿಗೂ ಶೇಕಡ ೫ ವಿನಾಯಿತಿ ನೀಡಲಾಗುವುದು. ನಂತರ ಮೇ ತಿಂಗಳಲ್ಲಿ ಬಡ್ಡಿ ರಹಿತವಾಗಿ ಆಸ್ತಿ ತೆರಿಗೆಗೆ ಅವಕಾಶ ಕಲ್ಪಿಸಲಾಗುವುದು. ನಂತರ ಬರುವವರಿಗೆ ಶೇ.೨ ಬಡ್ಡಿ ಹಾಕಲಾಗುವುದು. ಈ ಅನ್ವಯ ೨೦೨೪-೨೫ನೇ ಸಾಲಿನವರೆಗೂ ಇದು ಅನ್ವಯಿಸುತ್ತದೆ. ೨೦೨೩-೨೪ರಲ್ಲಿ ಬಾಕಿ ಉಳಿಸಿಕೊಂಡಿರುವವರಿಗೆ ಬಡ್ಡಿ ಸಮೇತ ವಸೂಲಿ ಮಾಡಲಾಗುವುದು. ಆ ವಾರ್ಡ್‌ಗಳಿಗೆ ಸೀಮಿತವಾಗಿ ಮೂರು ಕೌಂಟರ್ ತೆರದಿದ್ದು ೬ ಜನ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಹಾಗೂ ಸದಸ್ಯರ ಸಹಕಾರದಿಂದ ಶೇಕಡ ೧೦೦ ರಷ್ಟು ತೆರಿಗೆ ಪಾವತಿಯನ್ನು ಪಡೆಯುತ್ತೇವೆ ಎಂದು ತಿಳಿಸಿದರು.
ಬ್ಯಾಂಕಿನ ವ್ಯವಸ್ಥಾಪಕ ಆನಂದ್ ಮಾತನಾಡಿ, ‘ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಮ್ಮ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು ಬೆಳಿಗ್ಗೆ ೧೦ ರಿಂದ ಸಂಜೆ ೪ ಗಂಟೆಯ ತನಕ ಇಲ್ಲಿ ಹಣವನ್ನು ಕಟ್ಟಿಸಿಕೊಳ್ಳಲಾಗುವುದು. ಅಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಆನ್‌ಲೈನ್‌ನಲ್ಲೂ ಸಹ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗುವುದು’ ಎಂದು ಮಾಹಿತಿ ನೀಡಿದರು.ಸಾರ್ವಜನಿಕರ ಮೆಚ್ಚುಗೆ:
ಪುರಸಭೆಯಲ್ಲಿ ಈ ರೀತಿಯ ವಿನೂತನ ಕಾರ್ಯಕ್ರಮ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗಿದ್ದು ಇಲ್ಲಿ ಕಚೇರಿಗೆ ಪ್ರತಿ ನಿತ್ಯ ಅಲೆಯುವ ಬದಲು ಒಂದೇ ದಿನ ಆಸ್ತಿ ತೆರಿಗೆಯನ್ನು ಇಲ್ಲಿಯೇ ಪಾವತಿಸುವ ಮೂಲಕ ಸಮಯ ಉಳಿಸುವ ಕೆಲಸ ಮಾಡಿದೆ. ಇಲ್ಲಿನ ಹಿರಿಯ ನಾಗರಿಕರಿಗೂ ತುಂಬಾ ಅನುಕೂಲವಾಗಿದೆ ಎಂದು ಸೌಭಾಗ್ಯ ಆಂತೋಣಿ ಪುರಸಭೆಗೆ ಅಭಿನಂದನೆ ಸಲ್ಲಿಸಿದರು.ಆರೋಗ್ಯ ನಿರೀಕ್ಷಕರಾದ ಲೋಹಿತ್, ಸಿಬ್ಬಂದಿ ಪ್ರತೀಕ್ಷಾ, ಮೊನೇಶ್, ಪೃಥ್ವಿ, ಸಲ್ಮಾನ್, ಸಂಜಯ್ ಸೇರಿದಂತೆ ಇತರರು ಹಾಜರಿದ್ದರು.
ಬೇಲೂರು ಪುರಸಭೆಯಲ್ಲಿ ಕಂದಾಯ ತೆರಿಗೆ ಹಾಗೂ ಇನ್ನಿತರ ತೆರಿಗೆ ಪಾವತಿ ಮಾಡಲು ಬ್ಯಾಂಕ್ ಕೌಂಟರ್ ತೆರಯುವ ನೂತನ ಕಾರ್ಯಕ್ರಮಕ್ಕೆ ಎಚ್‌ಡಿಎಫ್‌ಸಿ ಬ್ಯಾಂಕ್ ಮುಖ್ಯಾಧಿಕಾರಿ ಎಂ.ಇಂದೂ ಚಾಲನೆ ನೀಡಿದರು.