ಸಾರಾಂಶ
ವಿಟಿಯು ವತಿಯಿಂದ ಸಂಶೋಧನೆ ಮತ್ತು ಆಡಳಿತಾತ್ಮಕ ಅಭಿವೃದ್ಧಿಗೆ ಮಹತ್ವ ನೀಡಲಾಗುತ್ತಿದೆ. ಉತ್ತಮ ದೂರದೃಷ್ಟಿಯುಳ್ಳವರ ನೇತೃತ್ವದಲ್ಲಿ ನಾಲ್ಕು ಸಂಶೋಧನಾ ಕ್ಲಸ್ಟರ್ಆರಂಭಿಸಲಾಗುವುದು. ಕಂಪ್ಯೂಟರ್ಸೈನ್ಸ್, ಮೆಕಾನಿಕಲ್, ಸಿವಿಲ್, ಎಲೆಕ್ಟ್ರಾನಿಕ್ ವಿಭಾಗದಲ್ಲಿ ಕ್ಲಸ್ಟರ್ ಆರಂಭವಾಗಲಿದ್ದು, ಜೂ. 15ರಂದು ಅನುಮತಿ ದೊರೆಯಲಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ದೇಶದಲ್ಲಿ ಮೊದಲ ಬಾರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯು ಬೆಗಳೂರು ಪ್ರಾದೇಶಿಕ ಕಚೇರಿಯಲ್ಲಿ ಉನ್ನತ ಮಟ್ಟದ ಟೆಲಿಕಾಂ ಸೆಂಟರ್ ಆಫ್ ಎಕ್ಸಲೆನ್ಸ್ ಆರಂಭಿಸಿದೆ.ವಿವಿಯಿಂದ ಕೆಲವೊಂದಷ್ಟು ಕೆಲಸ ಬಾಕಿ ಇದೆ. ಅದು ಪೂರ್ಣಗೊಂಡರೆ ಜೂನ್ 24ರಂದು ಆರಂಭವಾಗಲಿದೆ ಎಂದು ವಿಟಿಯು ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ತಿಳಿಸಿದರು.
ಸಾತಗಳ್ಳಿಯ ವಿಟಿಯು ಪ್ರಾದೇಶಿಕ ಕಚೇರಿಯಲ್ಲಿ ಶನಿವಾರ ಕುವೆಂಪು ಮಲ್ಟಿಮೀಡಿಯಾ ಸೆಂಟರ್ ಹಾಗೂ ಭೌತಶಾಸ್ತ್ರ, ರಸಾಯನಶಾಸ್ತ್ರ, ಎಂಬಿಎ ವಿಭಾಗದ ಡಿಜಿಟಲ್ ಮಾರ್ಕೆಟಿಂಗ್ ಪ್ರಯೋಗಾಲಯಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿಟಿಯು ವತಿಯಿಂದ ಸಂಶೋಧನೆ ಮತ್ತು ಆಡಳಿತಾತ್ಮಕ ಅಭಿವೃದ್ಧಿಗೆ ಮಹತ್ವ ನೀಡಲಾಗುತ್ತಿದೆ. ಉತ್ತಮ ದೂರದೃಷ್ಟಿಯುಳ್ಳವರ ನೇತೃತ್ವದಲ್ಲಿ ನಾಲ್ಕು ಸಂಶೋಧನಾ ಕ್ಲಸ್ಟರ್ಆರಂಭಿಸಲಾಗುವುದು. ಕಂಪ್ಯೂಟರ್ಸೈನ್ಸ್, ಮೆಕಾನಿಕಲ್, ಸಿವಿಲ್, ಎಲೆಕ್ಟ್ರಾನಿಕ್ ವಿಭಾಗದಲ್ಲಿ ಕ್ಲಸ್ಟರ್ ಆರಂಭವಾಗಲಿದ್ದು, ಜೂ. 15ರಂದು ಅನುಮತಿ ದೊರೆಯಲಿದೆ ಎಂದು ಅವರು ಹೇಳಿದರು.
ಇದಕ್ಕೆ ತಲಾ 25 ಲಕ್ಷ ಮೂಲಧನ ನೀಡಲಾಗುವುದು. ಸಂಶೋಧನಾ ಗುಣಮಟ್ಟ ಹೆಚ್ಚಿಸಲು ವಿವಿಧ ಕ್ಷೇತ್ರಗಳ 10 ಮಂದಿ ಪರಿಣತರತಂಡ ರಚಿಸಲಾಗಿದೆ. ನಾನು ಅಧಿಕಾರವಹಿಸಿಕೊಂಡ ಒಂದೂವರೆ ವರ್ಷದ ಅವಧಿಯಲ್ಲಿ 2,500 ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ ನೀಡಲಾಗಿದೆ. ಸಂಶೋಧನೆ ಇನ್ನಷ್ಟು ತೀವ್ರಗತಿಯಲ್ಲಿ ಸಾಗಬೇಕು. ವಿವಿ ಆಡಳಿತಾತ್ಮಕ ವಿಚಾರದಲ್ಲಿಯೂ ಬಹಳಷ್ಟು ಮುಂಚೂಣಿಯಲ್ಲಿದ್ದು, ಪ್ರಾಯೋಗಿಕ ಪರೀಕ್ಷೆ ಮುಗಿದ 2 ಗಂಟೆಯಲ್ಲೇ ಫಲಿತಾಂಶ ನೀಡುತ್ತಿದ್ದೇವೆ ಎಂದರು.ವಿದ್ಯಾರ್ಥಿಗಳು ವಾಟ್ಸ್ ಆಪ್ನಲ್ಲಿಯೇ ಫಲಿತಾಂಶ ನೋಡಬಹುದು. ವಿವಿಯು ಎಂಜಿನಿಯರಿಂಗ್ ಕಾಲೇಜುಗಳ ಪೈಕಿ 52ನೇ ಸ್ಥಾನ, ವಿವಿಗಳ ಪೈಕಿ 63, ಮ್ಯಾನೇಜ್ ಮೆಂಟ್ ಅಧ್ಯಯನದಲ್ಲಿ 95, ಒಟ್ಟಾರೆ ರ್ಯಾಂಕಿಂಗ್ ನಲ್ಲಿ 93ನೇ ಸ್ಥಾನದಲ್ಲಿದೆ. ಈ ವರ್ಷ ಎಂಜಿನಿಯರಿಂಗ್ವಿಭಾಗದಲ್ಲಿ 30ರೊಳಗೆ ರ್ಯಾಂಕಿಂಗ್ ತರುವ ಉದ್ದೇಶ ಹೊಂದಿದ್ದೇವೆ ಎಂದರು.
ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ವಿಟಿಯು ಕುಲಸಚಿವ ಬಿ.ಇ. ರಂಗಸ್ವಾಮಿ, ಪರೀಕ್ಷಾಂಗ ಕುಲಸಚಿವ ಟಿ.ಎಸ್. ಶ್ರೀನಿವಾಸ, ಹಣಕಾಸು ಅಧಿಕಾರಿ ಎಂ.ಎ. ಸಪ್ನಾ, ಪ್ರಾದೇಶಿಕ ಕಚೇರಿ ನಿರ್ದೇಶಕ ಟಿ.ಪಿ. ರೇಣುಕಾಮೂರ್ತಿ ಇದ್ದರು.