ನುಡಿ ಜಾತ್ರೆಗೆ ವಾಣಿಜ್ಯ ನಗರಿ ಸನ್ನದ್ಧ

| Published : Feb 11 2024, 01:54 AM IST / Updated: Feb 11 2024, 04:22 PM IST

13th District Kannada Sahitya Sammelna

ಸಾರಾಂಶ

13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಾಣಿಜ್ಯ ನಗರಿ ಸನ್ನದ್ಧವಾಗಿದ್ದು, ನುಡಿ ಜಾತ್ರೆಯ ಸಂಭ್ರಮಾಚರಣೆಗೆ ಕಳೆಗಟ್ಟಿದೆ.

ಬಸವರಾಜ ಸರೂರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಾಣಿಜ್ಯ ನಗರಿ ಸನ್ನದ್ಧವಾಗಿದ್ದು, ನುಡಿ ಜಾತ್ರೆಯ ಸಂಭ್ರಮಾಚರಣೆಗೆ ಕಳೆಗಟ್ಟಿದೆ. ಕಳೆದ ವರ್ಷ ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಜರುಗಿದ ರಾಜ್ಯ ಸಮ್ಮೇಳನದ ಗುಂಗಿನಲ್ಲಿಯೇ ನಗರದಲ್ಲಿ ಜಿಲ್ಲಾ ಸಮ್ಮೇಳನ ನಡೆಸಲಾಗುತ್ತಿದ್ದು ಬರದ ನಡುವೆಯೂ ಸ್ಥಳೀಯ ಜನತೆ ಇದಕ್ಕೆ ಸಹಕಾರ ನೀಡುತ್ತಿದ್ದಾರೆ.

ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಫೆ. 11ರಂದು ಬೆಳಗ್ಗೆ 7.30ಕ್ಕೆ ರಾಷ್ಟ್ರಧ್ವಜ, ಪರಿಷತ್ ಧ್ವಜ, ನಾಡ ಧ್ವಜಗಳ ಆರೋಹಣ ನೆರವೇರಿಸಲಾಗುವುದು. 

ನಂತರ ಸಿದ್ಧೇಶ್ವರ ದೇವಸ್ಥಾನದ ಬಳಿಯಿಂದ ಅಲಂಕರಿಸಿದ ವಾಹನದಲ್ಲಿ ಸಮ್ಮೇಳನಾಧ್ಯಕ್ಷ ಜೆ.ಎಂ. ಮಠದ ಅವರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಮ್ಮೇಳನ ನಡೆಯಲಿರುವ ಸ್ಥಳಕ್ಕೆ ಬಂದು ಸೇರಲಿದೆ. 

ಮೆರವಣಿಗೆ ಸಾಗಿ ಬರುವ ದಾರಿಯುದ್ದಕ್ಕೂ ಕನ್ನಡ ನುಡಿ ಮುತ್ತುಗಳು, ಸಮ್ಮೇಳನಾಧ್ಯಕ್ಷರದು ಸೇರಿದಂತೆ ಕನ್ನಡದ ಗಾದೆ ಮಾತುಗಳ ಕುರಿತು ಉದ್ಘೋಷಣೆ ಮಾಡುತ್ತಾ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತದೆ. ಡೊಳ್ಳು, ಜಾಂಜ್, ಹಲಗೆ,ವೀರಗಾಸೆ ಮುಂತಾದ ಕಲಾ ತಂಡಗಳ ಪ್ರದರ್ಶನ ಹಾಗೂ ಆರ್ಕೆಸ್ಟ್ರಾ ಮೆರವಣಿಗೆಗೆ ರಂಗು ತರಲಿವೆ.

ಎಲ್ಲೆಡೆ ಹಳದಿ ಮತ್ತು ಕೆಂಪು ಬಣ್ಣಗಳ ಬಂಟಿಂಗ್ಸ್: ನಗರದ ಪ್ರಮುಖ ಸರ್ಕಲ್‌ಗಳಲ್ಲಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಾಗಿ ಬರುವ ದಾರಿಯುದ್ದಕ್ಕೂ ನಾಡಧ್ವಜದ ಪ್ರತೀಕವಾದ ಹಳದಿ ಮತ್ತು ಕೆಂಪು ಬಣ್ಣಗಳ ಬಂಟಿಂಗ್ಸ್‌ಗಳನ್ನು ಹಾಕಲಾಗಿದೆ.

ಸ್ವಾಗತ ಕಮಾನು: ನಗರದ ಪೊಸ್ಟ್ ಸರ್ಕಲ್ ಬಳಿ ಸ್ವಾಗತ ಕಮಾನು ನಿರ್ಮಿಸಲಾಗಿದ್ದು ಅದರಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ಅಳವಡಿಸಲಾಗಿದೆ.

ಭರ್ಜರಿ ಭೋಜನ: ಸಮ್ಮೇಳನದ ಮೊದಲ ದಿನ ಬೆಳಗ್ಗೆ ತಿಂಡಿ: ಉಪ್ಪಿಟ್ಟು, ಮಧ್ಯಾಹ್ನ ಊಟಕ್ಕೆ ಜೋಳದ ರೊಟ್ಟಿ, ಬದನೆಕಾಯಿ ಹಾಗೂ ಬೇಳೆ ಪಲ್ಯ, ಗೋದಿ ಹುಗ್ಗಿ, ಅನ್ನ, ಸಾರು, ಸಂಜೆ ಟೀ, ಬಿಸ್ಕಿಟ್

ಎರಡನೇ ದಿನ ಬೆಳಗ್ಗೆ ಬಿಸಿಬೇಳೆ ಬಾತ್, ಮಧ್ಯಾಹ್ನ ಚಪಾತಿ, ಹಿರೇಕಾಯಿ, ಹೆಸರುಕಾಳು ಪಲ್ಯ, ಹೆಸರು ಬೇಳೆ ಪಾಯಸ, ಅನ್ನ, ಸಾರು

ಪುಸ್ತಕಗಳ ಬಿಡುಗಡೆ: ಸಮ್ಮೇಳನದ ಮೊದಲ ದಿನ 9 ಪುಸ್ತಕ ಬಿಡುಗಡೆಯಾಗಲಿದ್ದು, ಅವು ಇಂತಿವೆ.

ಕಡೆಗಣ್ಣಲಿ ನೋಡದಿರೆನ್ನಯ್ಯ-ಹೇಳವನಕಟ್ಟಿ ಗಿರಿಯಮ್ಮ: ಡಾ. ಕೆ.ಎಚ್. ಮುಕ್ಕಣ್ಣನವರ, ಹೆಜ್ಜೆ ಹುಡುಕುವ ಹಾದಿ (ಸಂಶೋಧನೆ): ಡಾ. ಬಿ.ಎಂ. ಬೇವಿಮರದ, ಆಧುನಿಕ ವಚನ ಸ್ಪಂದನ: ಪ್ರೊ. ಎಚ್.ಎ. ಭಿಕ್ಷಾವರ್ತಿಮಠ, ಮಗ್ಗ ಮರೆತಾಗ (ನಾಟಕ): ವೆಂಕಟೇಶ ಈಡಿಗರ,

ನೀ ಬದುಕೇ (ಕವನ ಸಂಕಲನ): ಮೈಲಾರದ ಮಹೇಶ್ವರಪ್ಪ, ಶಿಕ್ಷಕ-ಅರಿವಿನ ಅಕ್ಷಯ ಪಾತ್ರೆ: ಶ್ರೀಕಾಂತ ಹುಲ್ಮನಿ, ಪ್ರೀತಿ ಬದುಕಾಗಲಿ (ಭಾವಗೀತೆಗಳು): ಪ್ರಶಾಂತ ದೈವಜ್ಞ, ಸಂದೀಪ-ಕಿರಣ: ಮಂಜುಳಾ ಹಿರೇಬಿದರಿ, ಪ್ರೇಮ ಪೂರ್ಣ ಪಥಿಕ: ಡಾ. ನಿಂಗಪ್ಪ ಚಳಗೇರಿ.