ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಾಗಿ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಗುತ್ತಿಗೆದಾರ ಕಂಪನಿ ಸರ್ಕಾರಕ್ಕೆ ೮೦೦ ಕೋಟಿ ರು. ಕಮಿಷನ್ ನೀಡಿದೆ. ಹಾಗಾಗಿ ಯೋಜನೆ ಪರಿಸರಕ್ಕೆ ಮಾರಕವೆಂದು ಗೊತ್ತಿದ್ದರೂ ಹಣದ ಆಸೆಗಾಗಿ ಯೋಜನೆಯ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹೆಚ್.ಹಾಲಪ್ಪ ಆರೋಪಿಸಿದ್ದಾರೆ.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಹಿಂದೆ ಕಾಂಟ್ರ್ಯಾಕ್ಟರ್ ಲಾಬಿ, ಮಣ್ಣು, ಮರಳು ಲಾಬಿ ವಿಜೃಂಭಿಸುತ್ತಿದೆ. ಯೋಜನೆಯಿಂದ ಅಪಾರ ಪ್ರಮಾಣದ ಹಾನಿಯಾಗುತ್ತಿದ್ದರೂ, ಕ್ಷೇತ್ರದ ಶಾಸಕರು ಯೋಜನೆಗೆ ಬೆಂಬಲ ಸೂಚಿಸಿದ್ದು ದುರದೃಷ್ಟಕರ ಎಂದರು.
ಈ ಯೋಜನೆ ಅವೈಜ್ಞಾನಿಕವಾಗಿದ್ದು, ೨ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದನೆಗೆ ೨೫೦೦ ಮೆ.ವ್ಯಾ. ವಿದ್ಯುತ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಿದ್ಯುತ್ ಉತ್ಪಾದನೆಗೆ ಬೇಕಾದ ಹೆಚ್ಚುವರಿ ೫೦೦ ಮೆ.ವ್ಯಾ. ವಿದ್ಯುತ್ ಎಲ್ಲಿಂದ ಖರೀದಿಸುತ್ತಾರೆ. ಎರಡೂವರೆ ಸಾವಿರ ಮೆ.ವ್ಯಾ. ವಿದ್ಯುತ್ ಹರಿಸಲು ತಂತಿಗಳನ್ನು ಅಳವಡಿಸುವ ಸಂದರ್ಭದಲ್ಲಿ ನಾಶವಾಗುವ ಕಾಡಿನ ಪ್ರಮಾಣ ಹಾಗೂ ಜನವಸತಿ ಪ್ರದೇಶ ಎಷ್ಟು ಎಂಬಿತ್ಯಾದಿ ಪ್ರಶ್ನೆಗಳಿಗೆ ಕೆಪಿಸಿಯವರು ಉತ್ತರ ಕೊಡುತ್ತಿಲ್ಲ ಎಂದು ದೂರಿದರು.ಯೋಜನೆ ಕುರಿತಂತೆ ನಾನು ಕೆಪಿಸಿಯವರಿಗೆ ಮಾಹಿತಿ ಕೇಳಿದ್ದೇನೆ. ಅದನ್ನು ಕೊಡದೆ ಸಬೂಬು ಹೇಳುತ್ತಿದ್ದಾರೆ. ಲಿಂಗನಮಕ್ಕಿ ಆಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಮುಳುಗಡೆಯಾದವರಿಗೆ ಈತನಕ ಸಾಮಾಜಿಕ ನ್ಯಾಯ ನೀಡಿಲ್ಲ. ಈಗ ಇನ್ನೊಂದು ಯೋಜನೆ ಹೆಸರಿನಲ್ಲಿ ಮುಳುಗಡೆ ಮಾಡಲು ಮುಂದಾಗಿದ್ದಾರೆ. ವಿದ್ಯುತ್ ಉತ್ಪಾದನೆಗೆ ಸಾಕಷ್ಟು ಪರ್ಯಾಯ ಮಾರ್ಗಗಳಿವೆ. ಪಾವಗಡದಲ್ಲಿ ಇನ್ನಷ್ಟು ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಲು ಸರ್ಕಾರ ಮುಂದಾಗಬೇಕು. ಆದರೆ ಪರಿಸರನಾಶ ಮಾಡಿ, ಮಳೆಕಾಡು ಹಾಳುಗೆಡವಿ ಭೂಗರ್ಭ ವಿದ್ಯುತ್ ಉತ್ಪಾದನೆ ಹೆಸರಿನಲ್ಲಿ ಜೋಗದ ಗುಡ್ಡವನ್ನು ಶಿಥಿಲಗೊಳಿಸುವ ಪ್ರಯತ್ನ ಸಲ್ಲದು ಎಂದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಆ. ೨೫ರಂದು ಹಮ್ಮಿಕೊಂಡಿರುವ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಸಾರ್ವಜನಿಕರು, ಪರಿಸರಾಸಕ್ತರು, ವಿವಿಧ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು. ಈ ಸಂಬಂಧ ಆ.೨೪ರಂದು ಬಂಗಾರಮಕ್ಕಿಯಲ್ಲಿ ಸಮಾಲೋಚನಾ ಸಭೆ ಕರೆಯಲಾಗಿದ್ದು, ಅಲ್ಲಿಯೂ ನಾನು ಪಾಲ್ಗೊಳ್ಳುತ್ತಿದ್ದೇನೆ. ಯೋಜನೆಯಿಂದ ಪರಿಸರದ ಮೇಲಿನ ಪರಿಣಾಮ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುತ್ತದೆ ಎಂದು ತಿಳಿಸಿದರು.ಬಿಜೆಪಿ ಪ್ರಮುಖರಾದ ದೇವೇಂದ್ರಪ್ಪ, ಗಣೇಶಪ್ರಸಾದ್, ಮೈತ್ರಿ ಪಾಟೀಲ್, ರಮೇಶ್ ಎಚ್.ಎಸ್., ಸುಜಯ್, ಬಿ.ಟಿ.ರವೀಂದ್ರ, ಸತೀಶ್ ಕೆ., ಗೋಪಾಲ ಇನ್ನಿತರರು ಹಾಜರಿದ್ದರು.