ಆದಿವಾಸಿ, ಅಲೆಮಾರಿ ಸಮುದಾಯಗಳಿಗೆ ಒಂದು ತಿಂಗಳ ಒಳಗಾಗಿ ಆಯೋಗ ರಚಿಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಆದಿವಾಸಿ, ಅಲೆಮಾರಿ ಸಮುದಾಯಗಳಿಗೆ ಒಂದು ತಿಂಗಳ ಒಳಗಾಗಿ ಆಯೋಗ ರಚಿಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ. ನಗರದ ವಸಂತನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ‘ವಿಶ್ವ ಆದಿವಾಸಿ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ತನ್ನ ಪ್ರಣಾಳಿಕೆಯಲ್ಲಿ ನುಡಿದಂತೆ ಆಯೋಗವನ್ನು ರಚಿಸಿ, ಆದಿವಾಸಿಗಳ, ಅಲೆಮಾರಿಗಳ ಮೂಲ ಬದುಕಿಗೆ ಶಕ್ತಿ ತುಂಬಲು ಹಾಗೂ ಈ ಸಮುದಾಯಗಳ ಹಿತರಕ್ಷಣೆ ಮಾಡಲು ಸರ್ಕಾರ ಬದ್ಧವಾಗಿದೆ. ಆದಿವಾಸಿಗಳಿಗಾಗಿ ಉದ್ಯೋಗ, ಅನ್ನ, ಜಮೀನು ಸೇರಿ ಸರ್ಕಾರ ಈಗ ನೀಡುತ್ತಿರುವ ಎಲ್ಲಾ ಗ್ಯಾರಂಟಿಗಳನ್ನು ಮುಂದುವರಿಸಲಿದೆ ಎಂದರು.
ಆದಿವಾಸಿಗಳು ಮೂಲತತ್ವ, ಬದುಕಿನ ಆದರ್ಶ, ಮೂಲ ಸಿದ್ಧಾಂತವನ್ನು ಬಿಡಬೇಡಿ, ಆಗ ನಿಮಗೆ ಹೆಚ್ಚಿನ ಗೌರವವಿದೆ. ಮಕ್ಕಳಿಗೆ ಶಿಕ್ಷಣ ಕೊಡಿಸಿ, ಸರ್ಕಾರದ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಮುಂದೆ ಬನ್ನಿ, ಈಗಾಗಲೇ ಕಂದಾಯ ಗ್ರಾಮಗಳಿಗೆ ಹಟ್ಟಿ, ಕಾಡು ಹಾದಿಯಲ್ಲಿರುವ ಕಾಲೋನಿಗಳಿಗೆ ಹಕ್ಕುಪತ್ರ ನೀಡಿದ್ದೇವೆ. ಈಗಾಗಲೇ ಅರಣ್ಯಹಕ್ಕು ಕಾಯ್ದೆಯಡಿ ಜಮೀನು ಕೊಟ್ಟಿದ್ದೇವೆ. ನೊಂದು ಬೆಂದಿರುವವರಿಗೆ ಬೆಂಬಲ ಕೊಡಬೇಕಾಗಿರುವುದೇ ಸರ್ಕಾರದ ಕರ್ತವ್ಯ. ಮಾನವ ಧರ್ಮಕ್ಕೆ ಜಯವಾಗಲಿ ಎಂದರು.ಆದಿವಾಸಿಗಳು ಭಾಗ್ಯಂವತರು:
ಆಧುನಿಕತೆ ಹೆಚ್ಚಿದಂತೆ ಆದಿವಾಸಿಗಳು ನಗರಕ್ಕೆ ವಲಸೆ ಬರುವುದು ಹೆಚ್ಚುತ್ತಿದೆ. ಅದನ್ನು ಬೇಡ ಎನ್ನಲು ಆಗುವುದಿಲ್ಲ. ಆದರೆ, ಆದಿವಾಸಿಗಳು ಪ್ರಕೃತಿಯನ್ನು ಪ್ರೀತಿಸುವವರು, ಪ್ರಕೃತಿಯಲ್ಲೇ ಜೀವಿಸುವವರು, ಆದಿವಾಸಿಗಳಂಥ ಭಾಗ್ಯವಂಥರು ಯಾರೂ ಇಲ್ಲ. ಎಲ್ಲರಿಗೂ ಆ ಭಾಗ್ಯ ಸಿಗುವುದಿಲ್ಲ. ಎಲ್ಲರೂ ಮೂಲ ಆದಿವಾಸಿಗಳೇ, ವಿದ್ಯಾವಂತರಾಗಿ, ಪ್ರಜ್ಞಾವಂತರಾಗಿ ಎಷ್ಟೇ ನಗರವಾಸಿಗಳಾದರೂ ಈಗ ಎರಡು ಎಕರೆ ಜಮೀನು ಖರೀದಿಸಿ ನಗರವಾಸಿಗಳು ಫಾರ್ಮ್ ಹೌಸ್ ಕಟ್ಟಿಕೊಂಡು ಮೂಲ ಹಸಿರಿನೊಂದಿಗೆ ಜೀವಿಸಲು ಹೋಗುತ್ತಿದ್ದಾರೆ. ಆದ್ದರಿಂದ ಆದಿವಾಸಿಗಳು ನಾವೆಲ್ಲ ಕಾಡಿನಲ್ಲಿದ್ದೇವೆ ಎಂದು ಅಂದುಕೊಳ್ಳುವುದು ಬೇಡ. ಮೂಲಬದುಕಿನಿಂದ ದೂರ ಹೋಗಬೇಡಿ, ರೂಟ್ ಇದ್ದರೆ ಫ್ರೂಟ್, ಬೇರು ಇದ್ದರೆ ಮಾತ್ರ ಮರ ಇರಲು ಸಾಧ್ಯ ಎಂದರು.ನಗರ ವಿದ್ಯಾರ್ಥಿಗಳಿಗೆ ಸಿಎಂ ಕಾರ್ಯಕ್ರಮ:
ಬೆಂಗಳೂರು ನಗರ ಸೇರಿ ರಾಜ್ಯದ ವಿವಿಧ ನಗರಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮೂರು ದಿನ ಹಳ್ಳಿಗಳಿಗೆ ತೆರಳಿ ರೈತನ ಬದುಕಿನ ಬಗ್ಗೆ ತಿಳಿಯಲು ಹೇಳಿದ್ದೇನೆ. ಗ್ರಾಮೀಣ ಭಾಗಕ್ಕೆ ತೆರಳಿ ಅಲ್ಲಿ ರೈತ ಹಾಲು ಕರೆಯುವುದು, ಭತ್ತ, ತರಕಾರಿ ಹೇಗೆ ಬೆಳೆಯುತ್ತಾರೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು. ಹೀಗಾಗಿ ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಲು ತಿಳಿಸಿದ್ದೇನೆ. ಆಗ ಮಾತ್ರ ನಗರದಲ್ಲಿರುವ ವಿದ್ಯಾರ್ಥಿಗಳಿಗೂ ರೈತರ, ಕಾಡಿನಲ್ಲಿರುವವರ ಜೀವನ ಅರ್ಥವಾಗುತ್ತದೆ ಎಂದರು.