ಚುನಾವಣಾ ಅಕ್ರಮಗಳಾಗುತ್ತಿದ್ದರೂ ಆಯೋಗ ಮೌನ: ಬಿಎಸ್ಪಿ ಅಭ್ಯರ್ಥಿ ಚಿನ್ನಪ್ಪ ವೈ. ಚಿಕ್ಕಹಾಗಡೆ

| Published : Mar 26 2024, 01:19 AM IST

ಚುನಾವಣಾ ಅಕ್ರಮಗಳಾಗುತ್ತಿದ್ದರೂ ಆಯೋಗ ಮೌನ: ಬಿಎಸ್ಪಿ ಅಭ್ಯರ್ಥಿ ಚಿನ್ನಪ್ಪ ವೈ. ಚಿಕ್ಕಹಾಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಜನಪ್ರತಿನಿಧಿಯಾದವರು ತಾವು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟು ಮತ ಕೇಳಬೇಕು. ಇದನ್ನು ಬಿಟ್ಟು ಸೀರೆ, ಕುಕ್ಕರ್ ಹಂಚಿ ಮತ ಕೇಳಬಾರದು. ಇದು ಪ್ರಜಾಪ್ರಭುತ್ವದ ವಿರೋಧಿಯಾಗಲಿದೆ. ಈ ಅಕ್ರಮಗಳ ಬಗ್ಗೆ ಚುನಾವಣಾ ಆಯೋಗ ಗಮನಹರಿಸಬೇಕು.

ಕನ್ನಡಪ್ರಭ ವಾರ್ತೆ ರಾಮನಗರ

ಹಳ್ಳಿಗಳಲ್ಲಿ ಮತದಾರರಿಗೆ ಧಮಕಿ ಹಾಕುವ ಹಾಗೂ ಕುಕ್ಕರ್ , ಸೀರೆ ಹಂಚುವ ಕೆಲಸ ನಡೆಯುತ್ತಿದ್ದು, ಕ್ಷೇತ್ರದಾದ್ಯಂತ ಭಯದ ವಾತಾವರಣ ನಿರ್ಮಾಣವಾಗಿದೆ. ಇಷ್ಟಾದರೂ ಚುನಾವಣಾ ಆಯೋಗ ಮೌನ ವಹಿಸಿರುವುದು ಏಕೆಂದು ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಚಿನ್ನಪ್ಪ ವೈ.ಚಿಕ್ಕಹಾಗಡೆ ಪ್ರಶ್ನೆ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯುತ್ತಿರುವ ದಬ್ಬಾಳಿಕೆ, ದೌರ್ಜನ್ಯ ಹಾಗೂ ಆಮಿಷವೊಡ್ಡುತ್ತಿರುವದನ್ನು ನೋಡಿದರೆ ಪಾರದರ್ಶಕವಾಗಿ ಚುನಾವಣೆ ನಡೆಯುವ ಲಕ್ಷಣಗಳು ಕಾಣುತ್ತಿಲ್ಲ ಎಂದರು.

ಜನಪ್ರತಿನಿಧಿಯಾದವರು ತಾವು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟು ಮತ ಕೇಳಬೇಕು. ಇದನ್ನು ಬಿಟ್ಟು ಸೀರೆ, ಕುಕ್ಕರ್ ಹಂಚಿ ಮತ ಕೇಳಬಾರದು. ಇದು ಪ್ರಜಾಪ್ರಭುತ್ವದ ವಿರೋಧಿಯಾಗಲಿದೆ. ಈ ಅಕ್ರಮಗಳ ಬಗ್ಗೆ ಚುನಾವಣಾ ಆಯೋಗ ಗಮನಹರಿಸಬೇಕು ಎಂದು ಆಗ್ರಹಿಸಿದರು.

ಈ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಸಹೋದರ ಡಿ.ಕೆ.ಸುರೇಶ್ ಸ್ಪರ್ಧೆ ಮಾಡುತ್ತಿದ್ದು, ಅಧಿಕಾರ ದುರುಪಯೋಗವಾಗುವ ಸಾಧ್ಯತೆಗಳಿವೆ. ಇಲ್ಲಿ ಪಾರದರ್ಶಕವಾಗಿ ಚುನಾವಣೆ ನಡೆಯಬೇಕಾದರೆ ಚುನಾವಣಾ ಆಯೋಗ ಅರೆಸೇನಾ ಪಡೆಯನ್ನು ನಿಯೋಜಿಸಬೇಕು ಎಂದು ಹೇಳಿದರು.

ಮತದಾನದ ದಿನಾಂಕ ಹತ್ತಿರ ಬಂದಾಗ ತಟಸ್ಥರಾಗುತ್ತಾರೆಂದು ವಿರೋಧಿಗಳು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಈವರೆಗೆ ನಾನು ಮೂರು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ. ಈ ಬಾರಿ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲೆಡೆ ಪ್ರಚಾರ ನಡೆಸುತ್ತಿದ್ದು, ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಇದನ್ನು ಸಹಿಸದ ವಿರೋಧಿಗಳು ನನ್ನನ್ನು ಕುಗ್ಗಿಸಲು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಚಿನ್ನಪ್ಪ ವೈ.ಚಿಕ್ಕಹಾಗಡೆ ತಿಳಿಸಿದರು.

ಬಿಎಸ್ಪಿ ರಾಜ್ಯ ಕಾರ್ಯದರ್ಶಿ ನಾಗೇಶ್ ಮಾತನಾಡಿ, ದೇಶದಲ್ಲಿ 400 ಸೀಟು ಗೆದ್ದು ಸಂವಿಧಾನ ಬದಲಾಯಿಸುವುದೇ ಬಿಜೆಪಿ ಹಿಡನ್ ಅಜೆಂಡಾವಾಗಿದೆ. ಸಿಎಂ ಸಿದ್ಧರಾಮಯ್ಯ ಸಂವಿಧಾನ ಉಳಿಸುತ್ತೇವೆ ಎಂದು ಸಂವಿಧಾನದ ಜಾತ್ರೆ ಮಾಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಸುದೀರ್ಘವಾಗಿ ಆಳ್ವಿಕೆ ನಡೆಸಿದೆ. ಈಗ ಸಂವಿಧಾನ ಉಳಿಸುವ ನಾಟಕ ಆಡುತ್ತಿದ್ದು, ಜನರು ಎಚ್ಚೆತ್ತುಕೊಳ್ಳಬೇಕು ಎಂದರು.

ಸಂವಿಧಾನ ಇರುವುದರಿಂದಲೇ ಪ್ರಜಾಪ್ರಭುತ್ವ ಉಳಿದಿದೆ‌. ಆದರೆ, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಸಂವಿಧಾನ ಉಳಿಸುವ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ಮೂರು ಪಕ್ಷಗಳು ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ವಿರೋಧಿಯಾಗಿವೆ. ಇವರ ದುರಾಡಳಿತದ ವಿರುದ್ಧ ಜನರು ಮತ ಚಲಾಯಿಸಬೇಕು ಎಂದು ನಾಗೇಶ್ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬಿಎಸ್ಪಿ ಮುಖಂಡರಾದ ಅಬ್ದುಲ್ ರಹೀಂ, ಮಹದೇವ್, ಮುರುಗೇಶ್, ಸ್ವಾಮಿ, ವೆಂಕಟಾಚಲ, ಲೋಕೇಶ್ ಆಚಾರ್, ಕೃಷ್ಣಮೂರ್ತಿ, ಬಸವರಾಜು, ಅನು, ನಾರಾಯಣಪ್ಪ, ಕಾಂತರಾಜು, ಇಮ್ಯುನಲ್ ಇದ್ದರು.

‘ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿಯಾಗಿ ಚಿನ್ನಪ್ಪ ವೈ ಚಿಕ್ಕಹಾಗಡೆರವರು ಮಾ.28ರಂದು ಮಧ್ಯಾಹ್ನ 12 ಗಂಟೆಗೆ ನಾಮಪತ್ರ ಸಲ್ಲಿಸುವರು. ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಸೇರಿ ಅನೇಕ ನಾಯಕರು ಭಾಗವಹಿಸುವರು. ಇದಕ್ಕೂ ಮೊದಲು ಜೂನಿಯರ್ ಕಾಲೇಜು ಮೈದಾನದ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಆಗಮಿಸುವರು.’

- ಎಂ.ನಾಗೇಶ್ ,ರಾಜ್ಯ ಕಾರ್ಯದರ್ಶಿಗಳು, ಬಿಎಸ್ಪಿ.