ನೊಂದ ಮಹಿಳೆಯರಿಗೆ ಆಯೋಗ ರಕ್ಷಣೆ: ಡಾ.ನಾಗಲಕ್ಷ್ಮಿ ಚೌಧರಿ

| Published : Jul 29 2025, 01:00 AM IST

ಸಾರಾಂಶ

ಮಹಿಳೆಯರೊಂದಿಗೆ ನಡೆಯುವುದೇ ಮಹಿಳಾ ಆಯೋಗ ಕಾಯಕವಾಗಿದೆ. ಮಹಿಳೆಯರು ಪ್ರಾಯೋಜಕತ್ವ ಯೋಜನೆಯ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಪತಿಯಿಂದ ದೂರವಾದ ಪತ್ನಿ ಹಾಗೂ ತಂದೆ-ತಾಯಿ ಇಲ್ಲದ ಮಕ್ಕಳನ್ನು ನೋಡಿಕೊಳ್ಳಲು ಇರುವಂತಹ ಯೋಜನೆ ಇದಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಮಾಜದಲ್ಲಿ ನೊಂದ ಮಹಿಳೆಯರಿಗೆ ಆಶ್ರಯವಾಗಿ, ರಕ್ಷಣೆ ನೀಡಿ ಎಲ್ಲಾ ಸೌಲಭ್ಯ ಸಿಗುವಂತೆ ಆಯೋಗ ಕೆಲಸ ಮಾಡುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿಚೌಧರಿ ಹೇಳಿದರು.

ನಗರದ ಬಾಲಭವನ ಪಾರ್ಕ್ ಆವರಣದಲ್ಲಿ ಭಾರತ ಸೇವಾದಳ, ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಡೆದ ಅಭಿನಂದನಾ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರೊಂದಿಗೆ ನಡೆಯುವುದೇ ಮಹಿಳಾ ಆಯೋಗ ಕಾಯಕವಾಗಿದೆ. ಮಹಿಳೆಯರು ಪ್ರಾಯೋಜಕತ್ವ ಯೋಜನೆಯ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಪತಿಯಿಂದ ದೂರವಾದ ಪತ್ನಿ ಹಾಗೂ ತಂದೆ-ತಾಯಿ ಇಲ್ಲದ ಮಕ್ಕಳನ್ನು ನೋಡಿಕೊಳ್ಳಲು ಇರುವಂತಹ ಯೋಜನೆ ಇದಾಗಿದೆ. ತಾಲೂಕು ಮತ್ತು ಜಿಲ್ಲಾಡಳಿತದ ಮೂಲಕ ಮಾಹಿತಿ ಪಡೆದುಕೊಂಡು ಅದರ ಪ್ರಯೋಜನ ಪಡೆದುಕೊಳ್ಳಬಹುದು ಎಂದರು.

ಶಾಸಕ ಪಿ.ರವಿಕುಮಾರ್‌ ಜನಸ್ನೇಹಿ, ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವವರ ಪಕ್ಕ ಕುಳಿತುಕೊಳ್ಳುವುದೇ ಒಂದು ರೀತಿ ಸಂತಸವಾಗುತ್ತಿದೆ. ಅದೇ ರೀತಿ ಹಿರಿಯ ನಟ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಅವರ ಪಕ್ಕ ಕುಳಿತಿದ್ದೇವೆ ಎಂದು ಪ್ರಶಂಸಿಸಿದರು.

ಶಾಸಕ ಪಿ.ರವಿಕುಮಾರ್‌ ಮಾತನಾಡಿ, ನೊಂದ ಮಹಿಳೆಯರಿಗೆ ರಾಜ್ಯದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಮಹಿಳಾ ದನಿಯಾಗಿ ಡಾ.ನಾಗಲಕ್ಷ್ಮಿ ಚೌಧರಿ ಕೆಲಸ ಮಾಡುತ್ತಿದ್ದಾರೆ. ಈ ಹುದ್ದೆ ನೀಡಿರುವ ಮುಖ್ಯಮಂತ್ರಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಸಮಾರಂಭದಲ್ಲಿ ಭಾರತ ಸೇವಾದಳದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ.ಶಿವಾನಂದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಚುಟುಕು ಸಾಹಿತ್ಯ ಪರಿಷತ್ತಿನ ಜಿ ಘಟಕದ ಅಧ್ಯಕ್ಷ ಜಿ.ವಿ.ನಾಗರಾಜು, ನಟ ಶಂಕರ್ ಅಶ್ವಥ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಬೇಲೂರು ಸೋಮಶೇಖರ್, ಸೇವಾದಳದ ಎಸ್.ಕೆ.ಶಿವಪ್ರಕಾಶ್‌ಬಾಬು, ಮಿಮಿಕ್ರಿ ಮೈಸೂರು ರಮೇಶ್ ಬಾಬು, ಮಂಡ್ಯ ಸತ್ಯ, ಜನಾರ್ಧನ ಕೊಂಡ್ಲಿ ಭಾಗವಹಿಸಿದ್ದರು.