ಸಿಎಸ್‌ಆರ್‌ ಅನುದಾನ ಬಳಕೆಗೆ ಅಧಿಕಾರಿಗಳಿಗೆ ಕಮಿಷನ್‌: ಜೋಶಿ ಬೇಸರ

| Published : Nov 24 2024, 01:46 AM IST

ಸಾರಾಂಶ

ಶಾಲೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವಿವಿಧ ಕಂಪನಿಗಳ ಸಿಎಸ್‌ಆರ್‌ ಅನುದಾನ ಒದಗಿಸಿದರೆ, ಸರ್ಕಾರದ ಅಧಿಕಾರಿಗಳು ಕಮಿಷನ್‌ ಕೇಳುತ್ತಿದ್ದಾರೆ ಎಂಬ ಸಂಗತಿ ತುಂಬ ಬೇಸರ ಮೂಡಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಧಾರವಾಡ: ಶಾಲೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವಿವಿಧ ಕಂಪನಿಗಳ ಸಿಎಸ್‌ಆರ್‌ ಅನುದಾನ ಒದಗಿಸಿದರೆ, ಸರ್ಕಾರದ ಅಧಿಕಾರಿಗಳು ಕಮಿಷನ್‌ ಕೇಳುತ್ತಿದ್ದಾರೆ ಎಂಬ ಸಂಗತಿ ತುಂಬ ಬೇಸರ ಮೂಡಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಕೋಲ್‌ ಇಂಡಿಯಾ ಕಂಪನಿಯ ಸಹಕಾರದಲ್ಲಿ ಇಲ್ಲಿಯ ಪೊಲೀಸ್ ಮಕ್ಕಳ ವಸತಿ ಶಾಲೆಯ ವಸತಿ ನಿಲಯ ಹಾಗೂ ಭೋಜನಾಲಯ ಭೂಮಿ ಪೂಜೆಯನ್ನು ಶನಿವಾರ ನೆರವೇರಿಸಿದ ಅವರು, ಸರ್ಕಾರದ ದುಡ್ಡು ಹೊಡೆಯುತ್ತಾರೆ ಎಂಬುದು ಸಾಮಾನ್ಯ ಎನಿಸಿದರೂ ವಿವಿಧ ಕಂಪನಿಗಳಿಂದ ತಂದ ಅನುದಾನಕ್ಕೂ ಸರ್ಕಾರದ ಕೆಲವು ಅಧಿಕಾರಿಗಳು ಕನ್ನ ಹಾಕುತ್ತಿರುವುದು ಅತೀವ ಬೇಸರದ ಸಂಗತಿ ಎಂದರು.

ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸಾಕಷ್ಟಿದೆ. ರಾಜ್ಯ ಸರ್ಕಾರಕ್ಕೆ ಆ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಆಶಯದಿಂದ ತಾವು ವಿವಿಧ ಕಂಪನಿಗಳ ಸಿಎಸ್‌ಆರ್‌ ಅನುದಾನದ ಅಡಿ ಶಾಲಾ ಕೊಠಡಿ, ಕೂರಲು ಆಸನ ಅಂತಹ ಕಾರ್ಯಗಳನ್ನು ಮಾಡುತ್ತಿದ್ದೇವೆ. ಅದರಲ್ಲೂ ಕಮಿಷನ್‌ ಕೇಳುವುದು ಯಾವ ನ್ಯಾಯ? ಸ್ಥಳೀಯ ಶಾಸಕರು ಇಂತಹ ಸಂಗತಿ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕು ಎಂದು ವೇದಿಕೆಯಲ್ಲಿದ್ದ ಶಾಸಕರಾದ ಅರವಿಂದ ಬೆಲ್ಲದ ಅವರಿಗೆ ಜೋಶಿ ಸೂಚಿಸಿದರು.

ನಿಮ್ಮ ಕಾಲದಿಂದ ಶುರು

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಭಾಷಣ ನಂತರ ಮಾತನಾಡಿದ ಶಾಸಕ ಎನ್‌.ಎಚ್‌. ಕೋನರಡ್ಡಿ, ನಿಮ್ಮ ಕಾಲದಲ್ಲಿ ಶುರುವಾದ ಅಧಿಕಾರಿಗಳ ಭ್ರಷ್ಟಾಚಾರ ನಮ್ಮ ಕಾಲಕ್ಕೆ ಬಂದು ನಿಂತಿದೆ. ಅವರ ತಪ್ಪಿನಿಂದ ಸರ್ಕಾರಕ್ಕೂ ಕೆಟ್ಟ ಹೆಸರು. ಆದರೆ, ಇನ್ಮುಂದೆ ಹಾಗಾಗದಂತೆ ನೋಡಿಕೊಳ್ಳುತ್ತೇವೆ. ನೀವು ಕೊಡಿಸಿದ ಅನುದಾನ ಸರಿಯಾಗಿ ಬಳಸಿಕೊಳ್ಳುತ್ತೇವೆ. ತಾವು ಶಿಕ್ಷಣ ಕ್ಷೇತ್ರಕ್ಕೆ ಸಹಕಾರ ನೀಡಿದಂತೆ ಮಹಾದಾಯಿ ಕಾರ್ಯವೊಂದನ್ನು ಬೇಗ ಪೂರ್ತಿಗೊಳಿಸಿದರೆ ರೈತರಿಗೆ ಅನುಕೂಲ ಆಗಲಿದೆ ಎಂಬ ಮನವಿ ಸಹ ಕೋನರಡ್ಡಿ ಮಾಡಿದರು.

ವಿಪ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರುಗಳಾದ ಅರವಿಂದ ಬೆಲ್ಲದ, ಎನ್‌.ಎಚ್‌. ಕೋನರಡ್ಡಿ, ಮಾಜಿ ಶಾಸಕ ಅಮೃತ ದೇಸಾಯಿ, ಎಸ್ಪಿ ಗೋಪಾಲ ಬ್ಯಾಕೋಡ್‌ ಮತ್ತಿತರರು ಇದ್ದರು.