ಅಕ್ರಮ ಗಣಿಗಾರಿಕೆಯ ನಷ್ಟ ವಸೂಲಿಗೆ ಆಯುಕ್ತರನ್ನು ನೇಮಿಸಿ

| Published : Aug 13 2025, 12:30 AM IST

ಅಕ್ರಮ ಗಣಿಗಾರಿಕೆಯ ನಷ್ಟ ವಸೂಲಿಗೆ ಆಯುಕ್ತರನ್ನು ನೇಮಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಗಣಿಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿ ವತಿಯಿಂದ ಬಳ್ಳಾರಿಯಲ್ಲಿ ಆ. 16ರಂದು ಸಮಾಜ ಪರಿವರ್ತನಾ ಸಮುದಾಯುವು ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದೆ. ಅಂದು ಬೆಳಗ್ಗೆ 11ಕ್ಕೆ ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯಿಂದ ಗಾಂಧೀ ಭವನದ ವರೆಗೆ ಪಾದಯಾತ್ರೆ ನಡೆಯಲಿದೆ.

ಧಾರವಾಡ: ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ಮೂಲಕ ಸುಮಾರು ₹1.5 ಲಕ್ಷ ಕೋಟಿ ಮೊತ್ತದ ಖನಿಜ ಸಂಪನ್ಮೂಲಗಳನ್ನು ಅಧಿಕಾರಸ್ಥ ಹಾಗೂ ರಾಜಕಾರಣಿಗಳು ಲೂಟಿ ಹೊಡೆದಿದ್ದು, ಸರ್ಕಾರಕ್ಕೆ ಉಂಟಾಗಿರುವ ಈ ನಷ್ಟವನ್ನು ವಸೂಲಿ ಮಾಡಲು ವಸೂಲಾತಿ ಆಯುಕ್ತರನ್ನು ನೇಮಿಸಬೇಕೆಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ, ಹೋರಾಟಗಾರ ಎಸ್‌.ಆರ್‌. ಹಿರೇಮಠ ಆಗ್ರಹಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಗಣಿ ಅಕ್ರಮಗಳ ತನಿಖೆಗೆ ನೇಮಿಸಿದ್ದ ಸಚಿವ ಸಂಪುಟದ ಉಪಸಮಿತಿ ಅಧ್ಯಕ್ಷ ಎಚ್‌.ಕೆ. ಪಾಟೀಲ ಕಳೆದ ಜುಲೈ 18ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. 2007 ರಿಂದ 2011ರ ವರೆಗೆ ಅಕ್ರಮ ಗಣಿಗಾರಿಕೆಯಿಂದ ₹1.5 ಲಕ್ಷ ಕೋಟಿ ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಸರ್ಕಾರ ಈವರೆಗೆ ಯಾವುದೇ ಕ್ರಮವಹಿಸಿಲ್ಲ ಎಂದರು.

ಖನಿಜ ಸಂಪನ್ಮೂಲಗಳನ್ನು ಲೂಟಿ ಮಾಡಲಾಗಿದೆ ಎಂದು ಉಪಸಮಿತಿ ಸ್ಪಷ್ಟವಾಗಿ ತನ್ನ ತನಿಖೆಯಲ್ಲಿ ಹೇಳಿದೆ. ಸರ್ಕಾರವು ತಕ್ಷಣವೇ ವಸೂಲಾತಿ ಆಯುಕ್ತರನ್ನು ನೇಮಿಸಬೇಕು. ಅಕ್ರಮದ ಅಪರಾಧಿಗಳ ಆಸ್ತಿ ಮುಟ್ಟುಗೋಲು ಹಾಕಲು ಆಯಕ್ತರಿಗೆ ಬೆಂಬಲ ಒದಗಿಸಬೇಕು. ಬಳ್ಳಾರಿ ಜಿಲ್ಲೆಯಲ್ಲಿ 13 ಕಬ್ಬಿಣದ ಅದಿರಿನ ಡಂಪ್‌ಗಳ ಹರಾಜನ್ನು ಸರ್ಕಾರವು ರದ್ದುಪಡಿಸಬೇಕು. ಈ ಹರಾಜು ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲಂಘಿಸಿದೆ ಎಂದು ಮೇಲುಸ್ತುವಾರಿ ಸಮಿತಿಯು ಸ್ಪಷ್ಟಪಡಿಸಿದೆ ಎಂದರು.

16ರಂದು ಪ್ರತಿಭಟನೆ: ಗಣಿಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿ ವತಿಯಿಂದ ಬಳ್ಳಾರಿಯಲ್ಲಿ ಆ. 16ರಂದು ಸಮಾಜ ಪರಿವರ್ತನಾ ಸಮುದಾಯುವು ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದೆ. ಅಂದು ಬೆಳಗ್ಗೆ 11ಕ್ಕೆ ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯಿಂದ ಗಾಂಧೀ ಭವನದ ವರೆಗೆ ಪಾದಯಾತ್ರೆ ನಡೆಯಲಿದೆ. ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರು ಸಮಾವೇಶ ಉದ್ಘಾಟಿಸುವರು. ರಾಘವೇಂದ್ರ ಕುಷ್ಟಗಿ, ಅಲ್ಲಮ ಪ್ರಭು ಬೆಟದೂರು ಪಾಲ್ಗೊಳ್ಳುವರು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಹಾವೇರಿ, ಲಕ್ಷ್ಮಣ ಬಕ್ಕಾಯಿ, ಎಂ.ಎಸ್‌. ಮುಲ್ಲಾ ಇದ್ದರು.