ನಗರದಲ್ಲಿ ಭದ್ರತೆಗಾಗಿ 4 ಡಿಸಿಪಿ, 8 ಎಸಿಪಿ, 34 ಪಿಐ, 66 ಎಸ್‌ಐ, 1062 ಎಚ್‌.ಸಿ ಹಾಗೂ ಪಿಸಿ,

ಕನ್ನಡಪ್ರಭ ವಾರ್ತೆ ಮೈಸೂರು2026ರ ಹೊಸ ವರ್ಷದ ಆಚರಣೆಯ ಸಂಬಂಧ ನಗರದಲ್ಲಿ ಸಾರ್ವಜನಿಕರು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಆದ್ಯತೆಯನ್ನಾಗಿ ಪರಿಗಣಿಸಿ ನಗರಾದ್ಯಂತ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ 1466 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ತಿಳಿಸಿದ್ದಾರೆ.ನಗರದಲ್ಲಿ ಭದ್ರತೆಗಾಗಿ 4 ಡಿಸಿಪಿ, 8 ಎಸಿಪಿ, 34 ಪಿಐ, 66 ಎಸ್‌ಐ, 1062 ಎಚ್‌.ಸಿ ಹಾಗೂ ಪಿಸಿ, 154 ಸಿಬ್ಬಂದಿ ಸಹಿತ ಒಟ್ಟು 1466 ಪೊಲೀಸರನ್ನು ನಿಯೋಜಿಸಲಾಗಿದೆ. 10 ತುಕಡಿ ಸಿಎಆರ್‌, 5 ತುಕಡಿ ಕೆಎಸ್‌ಆರ್‌ ಪಿ, 2 ಕಮಾಂಡೋ ಪಡೆ, 1 ಶ್ವಾನದಳದ ತಂಡ, 2 ಎಎಸ್‌ ಸಿ ತಂಡ ಸಹ ಭದ್ರತೆಗೆ ನಿಯೋಜನೆಗೊಂಡಿದೆ ಎಂದು ಅವರು ಹೇಳಿದ್ದಾರೆ.ಹೊಸ ವರ್ಷಾಚರಣೆಯ ಕಾರ್ಯಕ್ರಮಗಳನ್ನು ಡಿ.31ರ ಮಧ್ಯರಾತ್ರಿ 1ರ ಒಳಗಾಗಿ ಮುಕ್ತಾಯಗೊಳಿಸಲು. ಹೊಸ ವರ್ಷಾಚರಣೆಗಾಗಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅವರು ಸೂಚಿಸಿದ್ದಾರೆ. ಪಾಲಿಸಬೇಕಾದ ನಿಯಮಗಳುಸಾರ್ವಜನಿಕರಿಗೆ ಶುಭ ಕೋರುವ ನೆಪದಲ್ಲಿ ಕೀಟಲೆ/ ಅಸಭ್ಯವಾಗಿ ವರ್ತಿಸುವುದನ್ನು ತಡೆಯಲು ಇನ್ಸ್ ಪೆಕ್ಟರ್ ಗಳ ನೇತೃತ್ವದಲ್ಲಿ ಠಾಣಾವಾರು ವಿಶೇಷ ಕಾರ್ಯಪಡೆ ತಂಡಗಳನ್ನು ರಚಿಸಲಾಗಿದೆ. ಈ ಕಾರ್ಯಪಡೆಗಳು ಕಾರ್ಯನಿರತವಾಗಿದ್ದು, ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.ಮಹಿಳೆಯರ ರಕ್ಷಣೆಯ ಹಿತದೃಷ್ಠಿಯಿಂದ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ಸುರಕ್ಷತಾ ಪಿಂಕ್ ಗರುಡಾ ( ಚಾಮುಂಡಿ ಪಡೆ) ಪಡೆಗಳು ಗಸ್ತಿನಲ್ಲಿರುತ್ತದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶ್ವಾನದಳ ಮತ್ತು ವಿಧ್ವಂಸಕ ಕೃತ್ಯ ತಡೆ ತಂಡದಿಂದ ತಪಾಸಣೆ ನಡೆಸಲಾಗುವುದು. ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಕಣ್ಗಾವಲು ನಿರ್ವಹಿಸಲಾಗುತ್ತದೆ.ವಾಹನಗಳನ್ನು ವೀಲಿಂಗ್ ಮತ್ತು ಡ್ರಾಗ್ ರೇಸ್ ಮಾಡುವುದನ್ನು ಹಾಗೂ ಕರ್ಕಶ ಶಬ್ಧ ಮಾಡುವುದನ್ನು ತಡೆಗಟ್ಟಲು ಸಂಚಾರ ಪೊಲೀಸರು ಒಳಗೊಂಡ ಕ್ಷಿಪ್ರ ಕಾರ್ಯಪಡೆಗಳನ್ನು ರಚಿಸಲಾಗಿದೆ. ನಗರದ ಎಲ್ಲಾ ಪ್ರದೇಶಗಳಲ್ಲಿ ಚಾಲನೆಯಲ್ಲಿರುತ್ತದೆ. ಕಾನೂನು ಉಲ್ಲಂಘಿಸುವ ಪ್ರಕರಣಗಳು ಕಂಡು ಬಂದಲ್ಲಿ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು.ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವವರ ಮತ್ತು ಕಿಡಿಗೇಡಿಗಳ ಬಗ್ಗೆ ನಿಗಾ ವಹಿಸಲು ಚೆಕ್‌ ಪೋಸ್ಟ್‌ ಗಳನ್ನು ತೆರೆಯುವುದರ 112 ವಾಹನ, ಹೈವೇ ಪೆಟ್ರೋಲ್ ವಾಹನಗಳನ್ನು ನಿಯೋಜಿಸಲಾಗುವುದು. ವಿವಿಧ ಸೂಚನೆಗಳುಡಿ.31ರ ರಾತ್ರಿ ಆರಂಭವಾಗುವ ಹೊಸ ವರ್ಷಾಚರಣೆಯನ್ನು ಆಚರಿಸುವ ನಗರದ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಹೋಂ ಸ್ಟೇ, ಸರ್ವಿಸ್ ಅಪಾರ್ಟ್‌ ಮೆಂಟ್, ಅಪಾರ್ಟ್‌ ಮೆಂಟ್ ಅಸೋಸಿಯೇಷನ್, ಮಾಲ್ಸ್ ಮತ್ತು ಸಂಘ ಸಂಸ್ಥೆಗಳು ಪೊಲೀಸ್ ಆಯುಕ್ತರ ಕಚೇರಿಯಿಂದ ಅನುಮತಿ ಪಡೆದು ಮಧ್ಯರಾತ್ರಿ 1 ಗಂಟೆಯೊಳಗೆ ಕಡ್ಡಾಯವಾಗಿ ಮುಕ್ತಾಯಗೊಳಿಸುವುದು. ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸುವುದು. ಸಿಸಿಟಿವಿ ಕ್ಯಾಮರಾಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು. ತಮ್ಮ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವಂತೆ ಧ್ವನಿವರ್ಧಕವನ್ನು ಅಳವಡಿಸಿಕೊಂಡು ಶಬ್ಧವು ಕಾನೂನಿನ ಅಡಿಯಲ್ಲಿ ನಿರ್ಧಿಷ್ಟ ಪಡಿಸಿರುವ ಡೆಸಿಬಲ್‌ ಗಳನ್ನು ಮೀರದಂತೆ ಕಡಿಮೆ ಧ್ವನಿಯಲ್ಲಿ ಕಾರ್ಯಕ್ರಮವನ್ನು ನಡೆಸಬೇಕು ಹಾಗೂ ಪೊಲೀಸ್ ಅನುಮತಿ ಪಡೆಯಬೇಕು.ಸಾಂಸ್ಕೃತಿಕ ಕಾರ್ಯಕ್ರಮದ ನೆಪದಲ್ಲಿ ಅಶ್ಲೀಲ, ಅರೆಬೆತ್ತಲೆ, ಮಾದಕ ವಸ್ತುಗಳ ಸೇವನೆ, ಜೂಜಾಟ ನಡೆಸುವುದನ್ನು ನಿಷೇಧಿಸಿದ್ದು, ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ಬಲವಂತವಾಗಿ ನಿಲ್ಲಿಸಿ ಅವರ ಇಚ್ಚೆಗೆ ವಿರುದ್ದವಾಗಿ ಶುಭ ಕೋರುವ ನೆಪದಲ್ಲಿ ಕಿರಿಕಿರಿ ಉಂಟುಮಾಡಿದ್ದಲ್ಲಿ ಕಾನೂನು ಕ್ರಮ ವಹಿಸಲಾಗುವುದು.ಸೋಷಿಯಾಲ್ ಮೀಡಿಯಾ ಮೂಲಕ ಹೊಸ ವರ್ಷಾಚರಣೆ ಸಂಬಂಧ ಸಾರ್ವಜನಿಕರಿಗೆ ಆತಂಕ ಮೂಡಿಸುವ ಪೋಸ್ಟ್‌ ಗಳನ್ನು ಮತ್ತು ಅಪಪ್ರಚಾರ ಪೋಸ್ಟ್‌ ಗಳನ್ನು ಹಾಕಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲಾತಾಣಗಳ ಮೂಲಕ ಉಡುಗೊರೆ ನೀಡುವ / ಉಡುಗೊರೆ ಬಂದಿರುವ ನೆಪದಲ್ಲಿ ಕಳುಹಿಸುವ ಯಾವುದೇ ಅಪರಿಚಿತ ಲಿಂಕ್‌ ಗಳಿಗೆ ಮರುಳಾಗಿ ಡಿಜಿಟಲ್ ಮೋಸಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸುವುದು. ಬಲೂನ್‌ ಗಳಿಗೆ ಅನಧಿಕೃತ ಸಿಲಿಂಡರ್‌ ಗಳ ಮೂಲಕ ಯಾವುದೇ ರೀತಿಯ ಅನಿಲ ತುಂಬಿ ಮಾರಾಟ ಮಾಡುವುದು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಡಿ.ಜೆ. ಬಳಸುವುದನ್ನು ನಿಷೇಧಿಸಲಾಗಿದ್ದು, ಈ ಬಗ್ಗೆ ಶಬ್ಧ ಮಾಲಿನ್ಯ ಪರಿಶೀಲನಾ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದ್ದು, ಡಿಜೆ ಬಳಸುವುದು ಕಂಡು ಬಂದರೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಯಾವುದೇ ರೀತಿಯ ತೊಂದರೆಯಾದಲ್ಲಿ ಪೊಲೀಸ್ ಕಂಟ್ರೋಲ್ ರೂಂ. 0821- 2418339, 2418139, 112ಸಂಪರ್ಕಿಸಲು ಕೋರಲಾಗಿದೆ. ಚಾಮುಂಡಿಬೆಟ್ಟಕ್ಕೆ ಡಿ.31ರ ಸಂಜೆ 7 ಗಂಟೆ ನಂತರ ಚಾಮುಂಡಿಬೆಟ್ಟಕ್ಕೆ ಉತ್ತನಹಳ್ಳಿ ಕ್ರಾಸ್ ಗೇಟ್, ದೇವಿವನ ಗೇಟ್, ಚಾಮುಂಡಿಬೆಟ್ಟ ಪಾದದ ಗೇಟ್, ಲಲಿತಮಹಲ್ ಗೇಟ್ ಮೂಲಕ ಪ್ರವೇಶವನ್ನು ನಿರ್ಭಂಧಿಸಲಾಗಿದೆ. ತಾವರೆಕಟ್ಟೆ ಗೇಟ್ ಮುಖಾಂತರ ಡಿ.31ರ ರಾತ್ರಿ 8 ಗಂಟೆ ನಂತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಚಾಮುಂಡಿಬೆಟ್ಟಕ್ಕೆ ಯಾವುದೇ ರೀತಿಯ ಊಟ, ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.ರಾತ್ರಿ 9 ಗಂಟೆ ನಂತರ ಸಾರ್ವಜನಿಕರು ಚಾಮುಂಡಿಬೆಟ್ಟದಿಂದ ವಾಪಸ್ ಬರುವಂತೆ ಸೂಚಿಸಲಾಗಿದೆ. ಇದು ಚಾಮುಂಡಿಬೆಟ್ಟದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಹಾಗೂ ಚಾಮುಂಡಿಬೆಟ್ಟದಲ್ಲಿ ವಾಸಿಸುವವರಿಗೆ ಅನ್ವಯಿಸುವುದಿಲ್ಲ. ಚಾಮುಂಡಿಬೆಟ್ಟದಿಂದ ರಾತ್ರಿ 9 ಗಂಟೆ ನಂತರ ವಾಪಸ್ ಬರುವವರು ತಾವರೆಕಟ್ಟೆ ದ್ವಾರದ ಮುಖಾಂತರ ಬರುವಂತೆ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.