ಸಾರಾಂಶ
ಯಾವುದೇ ವಿದ್ಯಾರ್ಥಿಗಳು ನಗರದ ಪೊಲೀಸ್ ಠಾಣೆಗಳು ಹಾಗೂ ಪೊಲೀಸ್ ಕಚೇರಿಗಳಲ್ಲಿ ಶೈಕ್ಷಣಿಕ ತರಬೇತಿ ಪಡೆಯಲು ನಗರ ಪೊಲೀಸ್ ಆಯುಕ್ತರ ಪೂರ್ವಾನುಮತಿ ಕಡ್ಡಾಯ ಎಂದು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಚಂದ್ರಗುಪ್ಪ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಇನ್ನು ಮುಂದೆ ಯಾವುದೇ ವಿದ್ಯಾರ್ಥಿಗಳು ನಗರದ ಪೊಲೀಸ್ ಠಾಣೆಗಳು ಹಾಗೂ ಪೊಲೀಸ್ ಕಚೇರಿಗಳಲ್ಲಿ ಶೈಕ್ಷಣಿಕ ತರಬೇತಿ ಪಡೆಯಲು ನಗರ ಪೊಲೀಸ್ ಆಯುಕ್ತರ ಪೂರ್ವಾನುಮತಿ ಕಡ್ಡಾಯ ಎಂದು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಚಂದ್ರಗುಪ್ಪ ತಿಳಿಸಿದ್ದಾರೆ.ಬೆಂಗಳೂರು ವಿಶ್ವವಿದ್ಯಾಲಯ ಸೇರಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರಾಣಿಶಾಸ್ತ್ರ, ತಳಿ ಶಾಸ್ತ್ರ, ವಿಧಿ ವಿಜ್ಞಾನಶಾಸ್ತ್ರ ಮೊದಲಾದ ವಿಷಯಗಳ ಬಗ್ಗೆ ಪೊಲೀಸ್ ಠಾಣೆಗಳು ಹಾಗೂ ಕಚೇರಿಗಳಲ್ಲಿ ಶೈಕ್ಷಣಿಕ ತರಬೇತಿ ಪಡೆಯುವ ಸಂಬಂಧ ವಿಶ್ವವಿದ್ಯಾಲಯ ಮತ್ತು ಕಾಲೇಜಿನ ಮುಖ್ಯಸ್ಥರು, ನಗರ ಪೊಲೀಸ್ ಆಯುಕ್ತರ ಕಚೇರಿಗೆ ಪತ್ರವ್ಯವಹಾರ ಮಾಡಬೇಕು. ನಿಯಮಾನುಸಾರ ನಗರ ಪೊಲೀಸ್ ಆಯುಕ್ತರ ಸೂಕ್ತ ನಿರ್ದೇಶನ ಪಡೆದ ಬಳಿಕವಷ್ಟೇ ತರಬೇತಿ ಪಡೆಯಬೇಕು.
ಆದರೆ, ಪ್ರಸ್ತುತ ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡುತ್ತಿರುವ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಿಂದ ಪತ್ರ ಪಡೆದು ಪೊಲೀಸ್ ಠಾಣೆ ಹಾಗೂ ಎಸಿಪಿಗೆ ನೇರವಾಗಿ ನೀಡಿ ಪೊಲೀಸ್ ಠಾಣೆಗಳಲ್ಲಿ ತರಬೇತಿ ಪಡೆಯುತ್ತಿರುವುದು ಕಂಡು ಬಂದಿದೆ. ಇದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.ಆಯುಕ್ತರ ಅನುಮತಿ ಕಡ್ಡಾಯ:
ಮುಂದುವರೆದು, ಇನ್ನು ಮುಂದೆ ಯಾವುದೇ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ನಗರ ಪೊಲೀಸ್ ಆಯುಕ್ತರ ನಿರ್ದೇಶನದ ಹೊರತಾಗಿ ನೇರವಾಗಿ ಯಾವುದೇ ವಿದ್ಯಾರ್ಥಿಗಳಿಗೆ ತರಬೇತಿಗೆ ಅವಕಾಶ ನೀಡಬಾರದು. ನೇರವಾಗಿ ಪತ್ರ ವ್ಯವಹಾರ ಮಾಡುವ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಮುಖ್ಯಸ್ಥರಿಗೆ ಅನುಸರಿಸಬೇಕಾದ ನಿಯಮಗಳ ಬಗ್ಗೆ ತಿಳಿಸಬೇಕು. ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.