ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಹುಬ್ಬಳ್ಳಿ-ಧಾರವಾಡ ತನ್ನದೇ ಆದ ಇತಿಹಾಸ ಹೊಂದಿದೆ. ಅತ್ಯಂತ ದೊಡ್ಡ ದೊಡ್ಡ ಕುಳಗಳೇ ಇದರಲ್ಲಿ ಸಿಲುಕಿ ಹೊರಬಂದಿರುವ ಉದಾಹರಣೆ ಇದೆ. ಪೊಲೀಸರು, ಕೆಲ ಪತ್ರಕರ್ತರು ಇದರಲ್ಲಿ ಶಾಮೀಲಾಗಿದ್ದಕ್ಕೆ ಸಾಕ್ಷಿ ಕೂಡ ಸಿಕ್ಕಿತ್ತು.
ಹುಬ್ಬಳ್ಳಿ:
ದೇಶಾದ್ಯಂತ ಐಪಿಎಲ್ ಕ್ರಿಕೆಟ್ ಈಗಷ್ಟೇ ಶುರುವಾಗಿದೆ. ಇದರೊಂದಿಗೆ ಬೆಟ್ಟಿಂಗ್ ವ್ಯವಹಾರವೂ ಜೋರಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಬೆಟ್ಟಿಂಗ್ ತಡೆಗೆ ಪೊಲೀಸ್ ಕಮಿಷನರೇಟ್ ಕಟ್ಟೆಚ್ಚರ ವಹಿಸಿದೆ.ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಹುಬ್ಬಳ್ಳಿ-ಧಾರವಾಡ ತನ್ನದೇ ಆದ ಇತಿಹಾಸ ಹೊಂದಿದೆ. ಅತ್ಯಂತ ದೊಡ್ಡ ದೊಡ್ಡ ಕುಳಗಳೇ ಇದರಲ್ಲಿ ಸಿಲುಕಿ ಹೊರಬಂದಿರುವ ಉದಾಹರಣೆ ಇದೆ. ಪೊಲೀಸರು, ಕೆಲ ಪತ್ರಕರ್ತರು ಇದರಲ್ಲಿ ಶಾಮೀಲಾಗಿದ್ದಕ್ಕೆ ಸಾಕ್ಷಿ ಕೂಡ ಸಿಕ್ಕಿತ್ತು. ಬೆಟ್ಟಿಂಗ್‌ನಿಂದಲೇ ಕೆಲ ಪೊಲೀಸರು ಕೋರ್ಟ್ ಕಚೇರಿ ಅಲೆದು ನೌಕರಿ ಕಳೆದುಕೊಂಡಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಗೊತ್ತಿಲ್ಲದಂತೆ ಪೊಲೀಸ್ ಇಲಾಖೆಯಲ್ಲೇ ಬೆಟ್ಟಿಂಗ್ ಸುಳಿಗೆ ಸಿಲುಕಿದ್ದು ಇತಿಹಾಸ. ಇಲ್ಲಿ ನಡೆದಿದ್ದ ಐಪಿಎಲ್ ಬೆಟ್ಟಿಂಗ್ ಸಿಒಡಿ ತನಿಖೆ ಕೂಡ ಆಗಿದೆ. ಹೈಟೆಕ್ ಬೆಟ್ಟಿಂಗ್:
ಇದೀಗ ಮತ್ತೆ ಐಪಿಎಲ್ ಶುರುವಾಗಿದೆ. ತನ್ನದೇ ಕ್ರೇಜ್ ಸೃಷ್ಟಿಸಿಕೊಂಡಿರುವ ಐಪಿಎಲ್ ಹಳ್ಳಿಯಿಂದ ಹಿಡಿದು ದೆಹಲಿ ವರೆಗೂ ಕ್ರಿಕೆಟ್ ಜ್ವರ ಹಬ್ಬಿದೆ. ಐಪಿಎಲ್ ಪಂದ್ಯ ದಿನ ನಗರದ ಪ್ರತಿ ಬಾರ್, ರೆಸ್ಟೋರೆಂಟ್ ಸಹ ಫುಲ್. ಎಣ್ಣೆ ಹೊಡೆಯುತ್ತಾ ಕ್ರಿಕೆಟ್ ವೀಕ್ಷಣೆ ಮಾಡುವ ಗುಂಪುಗಳಿಗೇನು ಇಲ್ಲಿ ಕಮ್ಮಿಯಿಲ್ಲ. ಅದೇ ರೀತಿ ಬೆಟ್ಟಿಂಗ್ ವ್ಯವಹಾರವೂ ಸಾಕಷ್ಟು ನಡೆಯುತ್ತಿರುವುದು ಸುಳ್ಳಲ್ಲ. ಮಟಕಾ ಚೀಟಿಯಂತೆ ಚೀಟಿ ಬರೆದುಕೊಡುವ ಬೆಟ್ಟಿಂಗ್‌ನಿಂದ ಹಿಡಿದು ಹೈಟೆಕ್ ಬೆಟ್ಟಿಂಗ್ (ಇಂಟರ್‌ನೆಟ್, ಮೊಬೈಲ್, ಆ್ಯಪ್‌ಗಳ ಮೂಲಕ) ಕೂಡ ಇಲ್ಲಿ ನಡೆಯುತ್ತಿದೆ.ಕಟ್ಟೆಚ್ಚರ ಎಂದರಷ್ಟೇ ಸಾಲದು:
ಪೊಲೀಸ್ ಕಮಿಷನರೇಟ್ ಕ್ರಿಕೆಟ್ ಬೆಟ್ಟಿಂಗ್ ತಡೆಗೆ ಭಾರೀ ಕಟ್ಟೆಚ್ಚರ ವಹಿಸಿದ್ದೇವೆ ಎಂದರೆ ಸಾಲದು. ಅವರ ಇಲಾಖೆಯಲ್ಲಿ ದಶಕಗಳಿಂದ ಬೇರೂರಿರುವವರು ಬುಕ್ಕಿಗಳಿಗೆ ಸಾಥ್ ನೀಡುತ್ತಿದ್ದಾರೆ. ಬೆಟ್ಟಿಂಗ್ ನಡೆದರೂ ಏನು ನಡೆದೇ ಇಲ್ಲ ಎಂದು ಅಧಿಕಾರಿಗಳ ದಾರಿ ತಪ್ಪಿಸುತ್ತಿದ್ದಾರೆ. ನಗರದ ವಿವಿಧ ಭಾಗಗಳಲ್ಲಿ ಬೆಟ್ಟಿಂಗ್ ಜಾಲದ ಹಿನ್ನೆಲೆ ಹೊಂದಿರುವ ವ್ಯಕ್ತಿಗಳನ್ನು ಗುರುತಿಸಿ ಎಚ್ಚರಿಕೆ ನೀಡುವ ಕೆಲಸ ಕಮಿಷನರೇಟ್ ಮಾಡುತ್ತಿದೆಯಂತೆ. ಮೊಬೈಲ್ ಆ್ಯಪ್ ಮೂಲಕ ನಡೆಯುವ ಬೆಟ್ಟಿಂಗ್ ದಂಧೆ ಭೇದಿಸಲು ತಾಂತ್ರಿಕ ತಂಡ ಕಾರ್ಯಾಚರಣೆಯಲ್ಲಿದೆ. ಆ್ಯಪ್‌ಗಳ ಮೂಲಕ ಹಣ ಪಣಕ್ಕಿಟ್ಟು ಜೂಜಾಡುವವರ ಮಾಹಿತಿ ಸಹ ಕಲೆ ಹಾಕಲಾಗುತ್ತಿದೆ. ಜತೆಗೆ ಐಪಿಎಲ್ ಪಂದ್ಯದ ದಿನ ಸಂಜೆ ಮತ್ತು ರಾತ್ರಿ ನಗರದ ಪ್ರಮುಖ ವೃತ್ತ, ಕೆಫೆ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಪೊಲೀಸರ ಗಸ್ತು ಹೆಚ್ಚಿಸಲಾಗಿದೆ. ಬೆಟ್ಟಿಂಗ್‌ನಿಂದಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಸೂಕ್ತ ಬಂದೋಬಸ್ತ್ ನಿಯೋಜಿಸಲಾಗಿದೆ ಎಂದು ಕಮಿಷನರೇಟ್ ತಿಳಿಸಿದೆ. ಆದರೆ, ಐಪಿಎಲ್ ಪಂದ್ಯ ಮುಗಿಯುವ ವರೆಗೂ ಪೊಲೀಸ್ ಕಮಿಷನರೇಟ್ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತರ ಆಗ್ರಹ.ಐಪಿಎಲ್ ಪಂದ್ಯದಲ್ಲಿ ಬೆಟ್ಟಿಂಗ್ ವ್ಯವಹಾರ ತಡೆಯಲು ಕಮಿಷನರೇಟ್ ಕ್ರಮಕೈಗೊಳ್ಳುತ್ತಿದೆ. ಗಸ್ತು ಹೆಚ್ಚಿಸಲಾಗಿದೆ. ಆ್ಯಪ್, ಇಂಟರ್‌ನೆಟ್ ಮೂಲಕ ನಡೆಯುವ ಬೆಟ್ಟಿಂಗ್ ಭೇದಿಸಲು ತಾಂತ್ರಿಕ ತಂಡ ಕೆಲಸ ಮಾಡುತ್ತಿದೆ. ಯಾರೇ ಆದರೂ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತದೆ.
ಎನ್. ಶಶಿಕುಮಾರ, ಪೊಲೀಸ್ ಕಮಿಷನರ್