ಸಹಕಾರಿ ಕ್ಷೇತ್ರದಲ್ಲಿ ನಿಸ್ವಾರ್ಥದಿಂದ ಕೆಲಸ ಮಾಡಬೇಕು. ಸಹಕಾರ ಕ್ಷೇತ್ರ ಉಳಿಸಿ, ಬೆಳೆಸುವ ಕೆಲಸವಾಗಬೇಕು. ಮುಂದಿನ ಪೀಳಿಗೆಗೆ ಸಹಕಾರ ಕ್ಷೇತ್ರದ ಬಗ್ಗೆ ಅರಿವು ಮೂಡಿಸೋಣ.
ಶಿರಸಿ: ಸಹಕಾರಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಣೆ ಮಾಡುವುವರು ಪ್ರಾಮಾಣಿಕತೆ ಮತ್ತು ಬದ್ಧತೆ ದಕ್ಷತೆಯಿಂದ ಕೆಲಸ ನಿರ್ವಹಿಸಿದಾಗ ಮಾತ್ರ ಸಹಕಾರ ಸಂಸ್ಥೆಗಳು ಸಾಧನೆ ಶಿಖರವೇರಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಬಿ.ಕೆ. ಶಿವಕುಮಾರ್ ಅವರು ಹೇಳಿದರು.ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಸಹಕಾರ ಇಲಾಖೆ, ಉತ್ತರ ಕನ್ನಡ ಜಿಲ್ಲಾ ಸಹಕಾರ ಯುನಿಯನ್ ಕುಮಟಾ ಇವರ ಆಶ್ರಯದಲ್ಲಿ ಬೆಳಗಾವಿ ವಿಭಾಗದ ಆಯ್ದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳ ಪದಾಧಿಕಾರಿಗಳು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿಗೆ ನಗರದ ಟಿಎಂಎಸ್ ಸಭಾಭವನದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಹಕಾರಿ ಕ್ಷೇತ್ರದಲ್ಲಿ ನಿಸ್ವಾರ್ಥದಿಂದ ಕೆಲಸ ಮಾಡಬೇಕು. ಸಹಕಾರ ಕ್ಷೇತ್ರ ಉಳಿಸಿ, ಬೆಳೆಸುವ ಕೆಲಸವಾಗಬೇಕು. ಮುಂದಿನ ಪೀಳಿಗೆಗೆ ಸಹಕಾರ ಕ್ಷೇತ್ರದ ಬಗ್ಗೆ ಅರಿವು ಮೂಡಿಸೋಣ ಎಂದರು.ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ರಾಜ್ಯದ ಸಹಕಾರ ಚಳವಳಿಯ ಬೆಳವಣಿಗೆಯಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತಿದೆ. ಎಲ್ಲ ಸಹಕಾರ ಸಂಘಗಳಿಗೆ ಶಿಕ್ಷಣ, ತರಬೇತಿ, ಪ್ರಚಾರದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ. ಅವುಗಳ ಸದುಪಯೋಗ ಪಡೆಯಲು ಸೂಚಿಸಿದರು.ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಕಾಶಿಲಿಂಗ ಹುಡೇದ ಮಾತನಾಡಿ, ಸಹಕಾರ ಸಂಘ ಸಂಸ್ಥೆಗಳ ಬೆಳವಣಿಗೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಪಾತ್ರ ಮಹತ್ವದ್ದಾಗಿದ್ದು, ಅವರು ಕೌಶಲ್ಯಾಧಾರಿತ ಜ್ಞಾನ ಹೊಂದಿ ವೃತ್ತಿಪರತೆಯಿಂದ ಕಾರ್ಯನಿರ್ವಹಿಸಲಿ. ಸಹಕಾರ ಕ್ಷೇತ್ರದಲ್ಲಿ ಸೇವೆ ಅತ್ಯಂತ ಪುಣ್ಯದ ಕೆಲಸ ಎಂದು ಪ್ರತಿಪಾದಿಸಿದರು.ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಮಂಜುನಾಥ ಗೌಡ ಮುರಳ್ಳಿ ಮಾತನಾಡಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ಶತಮಾನಗಳಿಂದ ಸಹಕಾರ ಚಳವಳಿಯ ಬೆಳವಣಿಗೆಗೆ ಶ್ರಮಿಸುತ್ತಿದೆ ಎಂದರು.ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಆರ್.ಎಂ. ಹೆಗಡೆ ಬಾಳೇಸರ ಮಾತನಾಡಿ, ಸಹಕಾರ ವಲಯವು ರೈತರ ಜೀವನವನ್ನು ಹಸನುಗೊಳಿಸುವ ಕೆಲಸ ಮಾಡುತ್ತಿದೆ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಸಲ್ಲದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್. ನವೀನ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದ ಸಹಕಾರ ಚಳವಳಿಯ ಸಮಗ್ರ ಬೆಳವಣಿಗೆಯಲ್ಲಿ ಮಾತೃ ಸಂಸ್ಥೆಯಾಗಿ ಸಹಕಾರ ಶಿಕ್ಷಣ, ತರಬೇತಿ ಮತ್ತು ಪ್ರಚಾರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಡೆಸಿಕೊಂಡು ಬಂದಿದೆ ಎಂದರು.ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಪ್ರಸ್ತುತ ಸಹಕಾರ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹಲವಾರು ಕಾನೂನು ತಿದ್ದುಪಡಿಗಳು ಆಗಿವೆ. ಅವುಗಳನ್ನು ತಿಳಿಯಲು ಇಂತಹ ತರಬೇತಿಗಳು ಪೂರಕವಾಗುತ್ತವೆ ಎಂದರು.ಉತ್ತರ ಕನ್ನಡ ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷರಾದ ವಿ.ಎನ್. ಭಟ್ಟ ಅಳ್ಳಂಕಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಡಾ. ಗುರುಸ್ವಾಮಿ ಅವರು ಮಾತನಾಡಿದರು.ರಶ್ಮಿ ಹೆಗಡೆ ಪ್ರಾರ್ಥಿಸಿದರು. ಸುರೇಶ ಭಟ್ಟ ಸ್ವಾಗತಿಸಿದರು. ಗೋಪಾಲ ನಾಯಕ ನಿರೂಪಿಸಿದರು. ಹಾಲಪ್ಪ ಕೋಡಿಹಳ್ಳಿ ವಂದಿಸಿದರು.
ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಸಹಕಾರ ಯುನಿಯನ್ ಕುಮಟಾ ಉಪಾಧ್ಯಕ್ಷ ಶ್ರೀಪಾದ ನಾರಾಯಣ ರಾಯದ, ನಿರ್ದೇಶಕರಾದ ಸತೀಶ ಸುಬ್ರಹ್ಮಣ್ಯ ಭಟ್ಟ, ಶಿರಸಿಯ ಸಹಾಯಕ ನಿಬಂಧಕ ರಾಮನಗೌಡ ಪಾಟೀಲ, ಸುಧಾ ಪಾಟೀಲ, ಟಿಎಂಎಸ್ ಶಿರಸಿ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟಿಸರ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶಚಂದ್ರ ಹೆಗಡೆ ಕೆಶಿನಮನೆ ಇತರರು ಇದ್ದರು.