ಬದುಕಿನಲ್ಲಿ ಗೆಲುವು ಪಡೆಯುವುದು ಎಷ್ಟು ಮುಖ್ಯವೋ ಆ ಗೆಲುವನ್ನು ನಿರಂತರವಾಗಿ ಕಾಯ್ದುಕೊಳ್ಳುವುದು ಅಷ್ಟೇ ಮುಖ್ಯ ಎಂದು ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಹೇಳಿದರು.
ಧಾರವಾಡ: ಇದು ಸ್ಪರ್ಧಾತ್ಮಕ ಯುಗವಾಗಿದ್ದು, ಇಲ್ಲಿ ಜಯಿಸಬೇಕೆಂದರೆ ನಿರಂತರ ಪ್ರಯತ್ನ ಸದಾ ಅಗತ್ಯ. ಬದುಕಿನಲ್ಲಿ ಗೆಲುವು ಸಾಧಿಸಲು ಕಾರ್ಯಕ್ಷಮತೆ ಆ ಕುರಿತು ಬದ್ಧತೆ ಅಗತ್ಯ ಎಂದು ಧಾರವಾಡ ಶಹರ ಹಾಗೂ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಹೇಳಿದರು.
ನಗರದ ಗ್ರಾಮೀಣ ವಲಯದ ಗುರುಭವನದಲ್ಲಿ ಪ್ರೌಢಶಾಲಾ ಸಮಸ್ತ ಗುರುಬಳಗ ಪ್ರತಿಭಾ ಪುರಸ್ಕಾರ ಸಮಿತಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬದುಕಿನಲ್ಲಿ ಗೆಲುವು ಪಡೆಯುವುದು ಎಷ್ಟು ಮುಖ್ಯವೋ ಆ ಗೆಲುವನ್ನು ನಿರಂತರವಾಗಿ ಕಾಯ್ದುಕೊಳ್ಳುವುದು ಅಷ್ಟೇ ಮುಖ್ಯ. ಗೆಲುವಿನ ಮದ ತಲೆಗೇರಿದರೆ ಭವಿಷ್ಯದಲ್ಲಿ ಯಶಸ್ಸು ಸಿಗದು. ಹೀಗಾಗಿ, ಮಕ್ಕಳು ನಿರಂತರ ಅಧ್ಯಯನಶೀಲರಾಗಬೇಕು. ಸೋಲಿಗೆ ಅಳುಕದೇ ಕ್ರಮಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬೆಳಗಾವಿಯ ಡಯಟ್ ಪ್ರಾಚಾರ್ಯ ಬೆಳಗಾವಿ ಅಶೋಕ ಸಿಂದಗಿ, ತಮ್ಮ ಕರ್ತವ್ಯ ಪ್ರಜ್ಞೆ ಅರಿತು ಸಮಯ ವ್ಯಯ ಮಾಡದೇ ಸದಾ ಅಧ್ಯಯನ ಮಾಡಬೇಕು. ಕಲಿಕೆ ಜೊತೆಗೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.ಪ್ರತಿಭಾ ಪುರಸ್ಕಾರ ಸಮಿತಿಯ ದಾನಿ ಪ್ರವೀಣ ಬಿರಾದಾರ ಮಾತನಾಡಿದರು. ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ರಾಜೇಶ್ವರಿ ಮಂಜುನಾಥ ಹಡಪದ ಅವರಿಗೆ ಲ್ಯಾಪ್‌ಟಾಪ್ ವಿತರಿಸಿದರು. ನಿವೃತ್ತ ಹಿರಿಯ ಉಪನ್ಯಾಸಕರಾದ ವಿದ್ಯಾ ನಾಡಿಗೇರ, ಶಿಕ್ಷಕರ ಸಂಘದ ಮುಖಂಡರಾದ ನಾರಾಯಣ ಭಜಂತ್ರಿ, ಅಜಿತ ದೇಸಾಯಿ, ಶಿಕ್ಷಕರಾದ ಬಸವರಾಜ ಛಬ್ಬಿ, ಪಾಂಡುರಂಗ ಅಂಕಲಿ ಮಾತನಾಡಿದರು.
ಎಸ್ಸೆಸ್ಸೆಲ್ಸಿಯಲ್ಲಿ ಉನ್ನತ ಅಂಕ ಪಡೆದು ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ, ನಾಲ್ಕನೇ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಶೇ. 100 ರಷ್ಟು ಫಲಿತಾಂಶ ಪಡೆದ ಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರನ್ನು, ಶೇ. 100ರಷ್ಟು ವಿಷಯದಲ್ಲಿ ಸಾಧನೆ ಮಾಡಿದ ಶಿಕ್ಷಕರನ್ನು, ತಾಲೂಕಿನ ಪ್ರತಿ ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು, ತಾಲೂಕಿನಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳನ್ನು, ಪ್ರತಿಭಾ ಪುರಸ್ಕಾರ ಸಮಿತಿಗೆ ಆಯ್ಕೆಯಾದ ನೂತನ ಸದಸ್ಯರನ್ನು, ಧಾರವಾಡ ಗ್ರಾಮೀಣ ವಲಯಕ್ಕೆ ಹೊಸದಾಗಿ ಆಗಮಿಸಿದ ಇಸಿಒ, ಬಿಆರ್‌ಪಿ, ಸಿ.ಆರ್.ಪಿ. ಅವರನ್ನು, ಅತಿಥಿಗಳನ್ನು ದಾನಿಗಳನ್ನು ಸನ್ಮಾನಿಸಿ ಸತ್ಕರಿಸಲಾಯಿತು. ಶಿಕ್ಷಕ ಲೇಖಕ ರಂಗನಾಥ ವಾಲ್ಮೀಕಿ ನಿರೂಪಿಸಿದರು. ವಿಜಯಲಕ್ಷ್ಮೀ ಪಾಟೀಲ ಸ್ವಾಗತಿಸಿದರು. ಎಚ್.ಎಸ್. ಬಡಿಗೇರ ವಂದಿಸಿದರು.