ಹಾನಗಲ್ಲ: ೨೬೭ ಪ್ರಾಥಮಿಕ, ೫೦ ಪ್ರೌಢಶಾಲೆಗಳ ೪೦ ಸಾವಿರ ಮಕ್ಕಳ ಶಾಲಾರಂಭದ ದಿನ ಇಡೀ ತಾಲೂಕಿನಾದ್ಯಂತ ಸಂಭ್ರಮ ಸಡಗರದಿಂದ ಕೂಡಿ, ಹೂ ಗುಚ್ಛ ನೀಡಿ, ಮೆರವಣಿಗೆ ಮಾಡಿ, ಸಿಹಿ ಹಂಚಿ ವಿಶೇಷವಾಗಿತ್ತಲ್ಲದೆ, ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಶೇ.ನೂರು ಸಾಧನೆ ಮಾಡುವ ಸಂಕಲ್ಪವೂ ಇದರಲ್ಲಿತ್ತು.ಸೋಮವಾರ ಹಾನಗಲ್ಲ ತಾಲೂಕಿನಲ್ಲಿ ಎಲ್ಲ ಶಾಲೆಗಳು ಅಲಂಕಾರಗೊಂಡು, ಎಲ್ಲ ಶಿಕ್ಷಕರು ಕಾಮ್ಸ ಕರ್ತವ್ಯ ಆ್ಯಪ್ ಮೂಲಕ ಹಾಜರಾತಿ ಹಾಕಿ ಶಾಲೆ ಪ್ರವೇಶ ಮಾಡಿದ್ದು ವಿಶೇಷವಾಗಿತ್ತು. ತಾಲೂಕಿನ ೨೨೦ ಸರ್ಕಾರಿ, ೯ ಅನುದಾನಿತ , ೩೮ ಅನುದಾನ ರಹಿತ ಪ್ರಾಥಮಿಕ ಶಾಲೆಗಳು ಹಾಗೂ ೩೧ ಸರ್ಕಾರಿ, ೧೯ ಅನುದಾನಿತ, ೯ ಅನುದಾನ ರಹಿತ ಪ್ರೌಢಶಾಲೆಗಳ ೪೦ ಸಾವಿರ ವಿದ್ಯಾರ್ಥಿಗಳ ಈ ವರ್ಷದ ಓದಿಗೆ ಮೊದಲ ದಿನವಾಗಿತ್ತು. ಇದರಲ್ಲಿ ೪ ಕೆಪಿಎಸ್ ಹಾಗೂ ೨ ಪಿಎಂಶ್ರೀ ಶಾಲೆಗಳು, ೪೧ ಎಲ್‌ಕೆಜಿ, ಯುಕೆಜಿ ಸಹಿತ ಶಾಲೆಗಳು ಇವೆ.ಈಗಾಗಲೇ ೨.೯೮ ಲಕ್ಷ ಉಚಿತ ಪಠ್ಯ ಪುಸ್ತಕಗಳನ್ನು ವಿತರಿಸಲಾಗಿದೆ. ಇನ್ನೂ ಶೇ.೩೦ರಷ್ಟು ಪಠ್ಯಪುಸ್ತಕಗಳು ಬರಬೇಕಾಗಿದ್ದು, ಸದ್ಯಕ್ಕೆ ಹಳೆಯ ಪುಸ್ತಕಗಳನ್ನು ನೀಡಿ ಪಾಠ ಆರಂಭಿಸಲಾಗುತ್ತಿದೆ. ಇನ್ನೂ ಸಮವಸ್ತ್ರ ಪೂರೈಕೆಯಾಗಿಲ್ಲ. ಈ ಬಾರಿ ಮಕ್ಕಳಿಗೆ ಇಲಾಖೆಯಿಂದಲೇ ಶೂಗಳನ್ನು ವಿತರಿಸಲಾಗುತ್ತದೆ. ಹಾನಗಲ್ಲ ತಾಲೂಕಿನಲ್ಲಿ ಶಾಲೆಗಳ ಕೊಠಡಿಗಳ ಕೊರತೆ ಇಲ್ಲ. ಆದರೆ ಕೆಲವು ಕೊಠಡಿಗಳ ದುರಸ್ತಿ ಅಗತ್ಯವಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳ ೧೧೩೪ ಮಂಜೂರಿ ಹುದ್ದೆಗಳಲ್ಲಿ ೩೨೯ ಹುದ್ದೆ ಖಾಲಿ ಇವೆ. ಸರ್ಕಾರಿ ಪ್ರೌಢಶಾಲೆಗಳ ೨೭೬ ಮಂಜೂರಿ ಹುದ್ದೆಗಳಲ್ಲಿ ೯೨ ಖಾಲಿ ಹುದ್ದೆಗಳಿವೆ. ಆದರೆ ಈಗ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ೧೭೮ ಸರ್ಕಾರಿ ಪ್ರೌಢಶಾಲೆಗಳಿ ೫೬ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಆದರೆ ಉಳಿದ ಅಗತ್ಯಕ್ಕೆ ಎರಡನೇ ಹಂತದಲ್ಲಿ ಅತಿಥಿ ಶಿಕ್ಷಕರನ್ನು ನಿಯೋಜಿಸುವ ಮಾಹಿತಿ ಇದೆ. ಬಿಸಿಯೂಟಕ್ಕಾಗಿ ೨೮೨ ಶಾಲೆಗಳಿಗೆ ೨೭೪ ಅಡುಗೆ ಕೇಂದ್ರಗಳಿವೆ. ಸಿಲಿಂಡರ್ ಕೊರತೆಯೂ ಇಲ್ಲ. ಸಿಬ್ಬಂದಿಯ ಕೊರತೆಯೂ ಇಲ್ಲ. ಆದರೆ ನಿವೃತ್ತ ರಾಜಿನಾಮೆ ನೀಡಿದವರ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೇ ಇದೇ ತಿಂಗಳಿನಲ್ಲಿ ನಡೆಯಲಿದೆ.ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನೀಕಟ್ಟಿ ಈ ವರ್ಷದ ಶಾಲಾರಂಭ ಹಾಗೂ ಉತ್ತಮ ಶಿಕ್ಷಣಕ್ಕಾಗಿ ಪಾಲಕರ ಸಭೆಗಳನ್ನು ನಡೆಸಿ, ಶಿಕ್ಷಕರಿಗೆ ಮುನ್ಸೂಚನೆ ನೀಡಿ, ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ.ನೂರು ಆಗಲೇಬೇಕು. ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಆರಂಭವಾಗಲಿ ಎಂಬ ಕಟ್ಟಪ್ಪಣೆ ಮಾಡಿದ್ದಾರೆ.ಅತ್ಯಂತ ಸಂಭ್ರಮದಿಂದ ಹಾನಗಲ್ಲ ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆಗಳು ಈ ದಿನ ಆರಂಭವಾಗಿವೆ. ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರ ನೇಮಕ ಆರಂಭವಾಗಿದೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸೇರಿದಂತೆ ಶೇ.ನೂರರಷ್ಟು ಫಲಿತಾಂಶ ನಮ್ಮ ಗುರಿ. ಅದಕ್ಕಾಗಿ ಮುಖ್ಯೋಪಾಧ್ಯಾಯರು, ಶಿಕ್ಷಕರು ಸಿದ್ಧರಾಗಿದ್ದಾರೆ. ಪಾಲಕರ ಸಹಕಾರವನ್ನೂ ಪಡೆಯಲಾಗಿದೆ ಎಂದು ಹಾನಗಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನೀಕಟ್ಟಿ ಹೇಳಿದರು.ಈ ಬಾರಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸಂಕಲ್ಪ ನಮ್ಮೆಲ್ಲ ಶಿಕ್ಷಕರದ್ದಾಗಿದೆ. ದ್ವಿಭಾಷಾ ಮಾಧ್ಯಮದ ಕುರಿತು ಮಾಹಿತಿ ನೀಡಲಾಗಿದೆ. ಸರ್ಕಾರಿ ಶಾಲೆ ಬಲಪಡಿಸುವ ಉದ್ದೇಶದಲ್ಲಿ ನಮ್ಮ ಶಿಕ್ಷಕರ ಪಾತ್ರ ದೊಡ್ಡದಿದೆ. ಪಾಲಕರ ಸಹಕಾರವೂ ಬೇಕು. ಸರ್ಕಾರಿ ಶಾಲೆಗಳನ್ನು ಉಳಿಸಲು ನಾವೆಲ್ಲ ಮುಂದಾಗಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ ಸವಣೂರ ಹೇಳಿದರು.
ಶೇ. ನೂರರಷ್ಟು ಎಸ್ಸೆಸ್ಸೆಲ್ಸಿ ಸಾಧನೆಗೆ ಸಂಕಲ್ಪ
೨೬೭ ಪ್ರಾಥಮಿಕ, ೫೦ ಪ್ರೌಢಶಾಲೆಗಳ ೪೦ ಸಾವಿರ ಮಕ್ಕಳ ಶಾಲಾರಂಭದ ದಿನ ಇಡೀ ತಾಲೂಕಿನಾದ್ಯಂತ ಸಂಭ್ರಮ ಸಡಗರದಿಂದ ಕೂಡಿ, ಹೂ ಗುಚ್ಛ ನೀಡಿ, ಮೆರವಣಿಗೆ ಮಾಡಿ, ಸಿಹಿ ಹಂಚಿ ವಿಶೇಷವಾಗಿತ್ತಲ್ಲದೆ, ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಶೇ.ನೂರು ಸಾಧನೆ ಮಾಡುವ ಸಂಕಲ್ಪವೂ ಇದರಲ್ಲಿತ್ತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.