ಸಾರಾಂಶ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಸಾಮಾಜಿಕ ಕ್ರಾಂತಿಯ ಮೂಲಕ ಹಿಂದುಳಿದ ಮತ್ತು ಶೋಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ವೈಚಾರಿಕ ನಿಲುವುಗಳು ಅನುಕರಣೀಯ ಎಂದು ಶಾಸಕ ಧೀರಜ್ ಮುನಿರಾಜ್ ಹೇಳಿದರು.ಇಲ್ಲಿನ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜ ಅರಸು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ದನಿಯಾಗಿ ಹಲವು ದೂರಗಾಮಿ ಯೋಜನೆಗಳ ಜಾರಿಗೊಳಿಸುವ ಮೂಲಕ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಅವರು ಮುತ್ಸದ್ದಿತನ ಮೆರೆದಿದ್ದಾರೆ. ಅವರು ಕೈಗೊಂಡ ಹಲವು ನಿರ್ಧಾರಗಳ ಪರಿಣಾಮ ಹಿಂದುಳಿದ ವರ್ಗಗಳು ಇಂದು ಸಾಮಾಜಿಕ ನ್ಯಾಯವನ್ನು ಪಡೆಯಲು ಸಾಧ್ಯವಾಗಿದೆ ಎಂದರು.ಶ್ರೀ ದೇವರಾಜ ಅರಸು ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ನಾರಾಯಣ ಗುರುಗಳು ಸಾಮಾಜಿಕ ಪಿಡುಗುಗಳ ವಿರುದ್ಧ ಬಹುದೊಡ್ಡ ಆಂದೋಲನ ರೂಪಿಸಿ ಮಾದರಿಯಾಗಿದ್ದಾರೆ. ಅಸ್ಪೃಶ್ಯ ಮತ್ತು ಶೋಷಿತ ಸಮುದಾಯಗಳ ದನಿಯಾಗಿ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಂದೇ ದೇವರು ಎಂಬ ತತ್ವ ಸಾರುವ ಮೂಲಕ ಬಹುತ್ವದ ಆಲೋಚನೆಗಳಿಗೆ ತಾರ್ಕಿಕವಾದ ವಾಸ್ತವವನ್ನು ಬೆಸುಗೆ ಹಾಕಿದ್ದಾರೆ. ದೇವರು ಎಲ್ಲರಿಗೂ ಸೇರಿದವನು. ಆತನನ್ನು ಆರಾಧಿಸುವ ಮನಸ್ಥಿತಿ ಶುದ್ಧವಾಗಿದ್ದಾಗ ಮಾತ್ರ ಅದು ಪ್ರಸ್ತುತ ಎನಿಸುತ್ತದೆ ಎಂದು ಹೇಳಿದರು.
ಆರ್ಯ ಈಡಿಗ ಸಮುದಾಯದ ಮುಖಂಡ ಕೆ.ಜಿ.ಶ್ರೀನಿವಾಸಮೂರ್ತಿ ಮಾತನಾಡಿ, ನಾರಾಯಣ ಗುರುಗಳ ಆದರ್ಶಗಳನ್ನು ಮೈಗೂಡಿಸಿಕೊಳ್ಳುವುದು ಅಗತ್ಯ ಎಂದ ಅವರು, ನಾರಾಯಣ ಗುರುಗಳು ಕೇರಳದಲ್ಲಿ ಸಾಮಾಜಿಕ ಕ್ರಾಂತಿಯ ಭಾಗವಾಗಿ 60ಕ್ಕೂ ಹೆಚ್ಚು ದೇವಾಲಯಗಳನ್ನು ಕಟ್ಟಿದರು. ಎಲ್ಲ ವರ್ಗಗಳಿಗೆ ಸಮಾನತೆಯ ಪರಿಕಲ್ಪನೆಯನ್ನು ಪರಿಚಯಿಸಿದ ಮಹಾನುಭಾವ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಬೆಂ.ಗ್ರಾ. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೆ.ಆರ್.ರವಿಕಿರಣ್, ಈಡಿಗ ಸಮುದಾಯದ ಮುಖಂಡರಾದ ಕುಮಾರ್, ಪ್ರವೀಣ್, ರವಿಕಿರಣ್, ಶಾಂತಮ್ಮ, ಸಮುದಾಯದ ಹಲವು ಪ್ರಮುಖರು, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.