ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿಗೆ ಸಂಕಲ್ಪ: ಡಾ.ಪ್ರಭಾ

| Published : Jul 19 2025, 02:00 AM IST

ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿಗೆ ಸಂಕಲ್ಪ: ಡಾ.ಪ್ರಭಾ
Share this Article
  • FB
  • TW
  • Linkdin
  • Email

ಸಾರಾಂಶ

ಐಎಎಸ್‌, ಕೆಎಎಸ್‌, ಬ್ಯಾಂಕಿಂಗ್, ರೈಲ್ವೆ, ಪಿಎಸ್ಐ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನುರಿತ, ಸಂಪನ್ಮೂಲ ವ್ಯಕ್ತಿಗಳಿಂದ ದಾವಣಗೆರೆಯಲ್ಲೇ ಆರಂಭಿಸಿರುವ ಸಂಕಲ್ಪ ಕೇಂದ್ರದಲ್ಲಿ ಉಚಿತ ತರಬೇತಿ, ಮಾರ್ಗದರ್ಶನ ನೀಡಲಾಗುವುದು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.

- ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಕೇಂದ್ರ ಉದ್ಘಾಟನೆ । ಪ್ರತಿವರ್ಷ 300 ಜನರ ಆಯ್ಕೆಗೆ ನಿರ್ಧಾರ

- - -

ಕನ್ನಡಪ್ರಭ ವಾರ್ತೆ ದಾವಣಗರೆ

ಐಎಎಸ್‌, ಕೆಎಎಸ್‌, ಬ್ಯಾಂಕಿಂಗ್, ರೈಲ್ವೆ, ಪಿಎಸ್ಐ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನುರಿತ, ಸಂಪನ್ಮೂಲ ವ್ಯಕ್ತಿಗಳಿಂದ ದಾವಣಗೆರೆಯಲ್ಲೇ ಆರಂಭಿಸಿರುವ ಸಂಕಲ್ಪ ಕೇಂದ್ರದಲ್ಲಿ ಉಚಿತ ತರಬೇತಿ, ಮಾರ್ಗದರ್ಶನ ನೀಡಲಾಗುವುದು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಆರಂಭಿಸಲಾದ ಸಂಕಲ್ಪ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿವರ್ಷ 300 ಜನರನ್ನು ಸಂಕಲ್ಪ ಕೇಂದ್ರದಲ್ಲಿ ತರಬೇತಿಗೆ ಆಯ್ಕೆ ಮಾಡಿ, ಅಖಿಲ ಭಾರತಮಟ್ಟ ಮತ್ತು ರಾಜ್ಯಮಟ್ಟದ ನಾಗರೀಕ ಸೇವಾ ಹಾಗೂ ಬ್ಯಾಂಕ್ ಇತರೇ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲಾಗುವುದು. ಐಎಎಸ್ ಬಾಬಾ ಕೋಚಿಂಗ್ ಕೇಂದ್ರದೊಂದಿಗೆ ಒಡಂಬಡಿಕೆ ಮಾಡಿಕೊಂಡು ಕೇಂದ್ರ ಸ್ಥಾಪಿಸಲಾಗಿದೆ ಎಂದು ಹೇಳಿದರು.

ಕೋಚಿಂಗ್ ಕೇಂದ್ರಕ್ಕೆ ಎಸ್‌.ಎಸ್‌. ಕೇರ್ ಟ್ರಸ್ಟ್ ವೆಚ್ಚ ಭರಿಸಲಿದೆ. ಜಿಲ್ಲೆಯ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುವುದು. ಸಂಕಲ್ಪ ಕೇಂದ್ರದಲ್ಲಿ ಉಚಿತ ಕೋಚಿಂಗ್‌ಗೆ ಪ್ರವೇಶ ಪಡೆಯಲು ಜು.24ರೊಳಗೆ ** www.IASbaba.com ** ಮೂಲಕ ಗೂಗಲ್ ಫಾರಂ ಮೂಲಕ ನೋಂದಣಿ ಮಾಡಬೇಕು. ನೋಂದಣಿ ಆದವರಿಗೆ ಜುಲೈ 29ರಂದು ಲಿಖಿತ ಪರೀಕ್ಷೆ ದಾವಣಗೆರೆಯಲ್ಲಿ ನಡೆಯಲಿದೆ. 2 ದಿನದಲ್ಲಿ ಫಲಿತಾಂಶ ಪ್ರಕಟಿಸಿ, ತರಬೇತಿಗೆ 300 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಆ.4ರಿಂದ ತರಗತಿ ಆರಂಭವಾಗಲಿವೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸುಸಜ್ಜಿತ ಕೋಚಿಂಗ್ ಕೇಂದ್ರ, ಐಟಿ, ಬಿಟಿ ವಲಯಗಳ ಸ್ಥಾಪನೆಯೊಂದಿಗೆ ಸ್ಥಳೀಯ ಯುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ಲಭಿಸಬೇಕೆಂಬ ಆಕಾಂಕ್ಷೆಯೊಂದಿಗೆ 2023ರಲ್ಲಿ ಯುವಕರ ಜೊತೆ ಚರ್ಚಿಸಿದಾಗ ಅನೇಕರು ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಅಗತ್ಯದ ಬಗ್ಗೆ ಮನವಿ ಮಾಡಿದ್ದರು. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎಸ್.ಎಸ್. ಕೇರ್ ಟ್ರಸ್ಟ್ ಈ ಬಗ್ಗೆ ಆಲೋಚಿಸಿತು. ‘ಕೌಶಲ್ಯ’, ‘ಸಕ್ಷಮ’ ಎಂಬ ಕಾರ್ಯಕ್ರಮ ಕೂಡ ಮಾಡಿದೆವು. ಸಿಇಟಿ, ನೀಟ್ ಪರೀಕ್ಷೆ ತರಬೇತಿ ಕೂಡ ನೀಡಿದೆವು. ಹಲವು ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಯಿತು ಎಂದರು.

ಐಟಿ ಕಂಪನಿಗಳು ಕೂಡ ದಾವಣಗೆರೆಗೆ ಬರಲಿವೆ. ಹಲವು ಜನರ ನಿರೀಕ್ಷೆ ಕೂಡ ಇದೆ ಆಗಿದೆ. ಎಸ್.ಟಿ.ಪಿ.ಐ. ಕೇಂದ್ರ ಇಲ್ಲಿದೆ. 6 ಕೇಂದ್ರಗಳಲ್ಲಿ 60ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. 2 ಎಕರೆ ಭೂಮಿ ಕೇಳಿದ್ದಾರೆ. 10 ಎಕರೆ ಭೂಮಿ ನೀಡಲು ಸಿದ್ಧರಿದ್ದೇವೆ. ಸ್ಮಾರ್ಟ್ ಸಿಟಿ ಯೋಜನೆ ಕಟ್ಟಡ ಬಳಸಲು ಅವಕಾಶವಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಗ್ರಂಥಾಲಯದಲ್ಲಿ ಮಕ್ಕಳು ನೆಲದ ಮೇಲೆ ಕುಳಿತು ಓದುವುದನ್ನು ನೋಡಿ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಒಲವು ಮೂಡಿತು. ಆಗ ಪರಿಶೀಲಿಸಿದಾಗ ಲಲಿತಕಲಾ ಕಾಲೇಜು ಆವರಣದಲ್ಲಿ ಸ್ಥಳಾವಕಾಶ ಲಭ್ಯವಾಯಿತು. ಹೈಸ್ಕೂಲ್ ಮೈದಾನದಲ್ಲಿದ್ದ ಬಸ್‌ ನಿಲ್ದಾಣ ತೆರವು ಮಾಡಿದ ವಸ್ತುಗಳನ್ನು ಬಳಸಿ, ಈ ಕಟ್ಟಡ ನಿರ್ಮಿಸಿದ್ದೇವೆ. ಡಿಎಂಎಫ್‌ ನಿಧಿಯಲ್ಲಿ ₹80 ಲಕ್ಷಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ್ದಾರೆ ಎಂದರು.

ಬೆಂಗಳೂರಿನಲ್ಲಿ ಕೋಚಿಂಗ್‌ಗೆ ಹೋದರೆ ತಿಂಗಳಿಗೆ ₹25 ಸಾವಿರ ವೆಚ್ಚವಾಗಲಿದೆ. ವರ್ಷಕ್ಕೆ ಲಕ್ಷಾಂತರ ರು. ವೆಚ್ಚ ಆಗಲಿದೆ. ಇದರಿಂದ ಬಡ ಪ್ರತಿಭಾನ್ವಿತರು ತರಬೇತಿ ಪಡೆಯಲು ಸಾಧ್ಯವಾಗದ ನಿದರ್ಶನಗಳಿವೆ. ಈ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ನೀಡಲಾಗುವುದು. ಇದಕ್ಕಾಗಿ ಗ್ರಂಥಾಲಯ ಸ್ಥಾಪಿಸಿ, ಅಗತ್ಯ ಸಿಬ್ಬಂದಿ ನೇಮಿಸಲಾಗುವುದು. ಕೇಂದ್ರವು ಜಿಲ್ಲಾಧಿಕಾರಿ, ಜಿಪಂ ಸಿಇಒ, ಜಿಲ್ಲಾ ಪೊಲೀಸ್ ಅಧೀಕ್ಷಕರ ಉಸ್ತುವಾರಿಯಲ್ಲಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಯೋಜನೆ ಬಳಸಿಕೊಂಡು, ಮತ್ತಷ್ಟು ಸೌಲಭ್ಯ ಕಲ್ಪಿಸುತ್ತೇವೆ. ಹಾಸ್ಟೆಲ್ ಸಮಸ್ಯೆ ಸಹ ಪರಿಹರಿಸುತ್ತೇವೆ. ನೆರೆಯ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ಬರಬಹುದು. ಅಂತಹವರಿಗೂ ಹಾಸ್ಟೆಲ್ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.

ಐಎಎಸ್ ಬಾಬಾ ಕೋಚಿಂಗ್ ಸಂಸ್ಥೆಯ ಮೋಹನ್ ಮಾತನಾಡಿ, ಕೇಂದ್ರದಲ್ಲಿ 300 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆ ಎಲ್ಲ ವಿದ್ಯಾರ್ಥಿಗಳನ್ನು ಸಂಕಲ್ಪ ಕೇಂದ್ರದಲ್ಲಿ ಸೂಕ್ತ ತರಬೇತಿ, ಮಾರ್ಗದರ್ಶನ ನೀಡುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜುಗೊಳಿಸಲಾಗುವುದು ಎಂದರು.

ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಮಾತನಾಡಿ, ದಾ.ವಿ.ವಿ.ಯಲ್ಲಿ ಇದೊಂದು ಮೈಲುಗಲ್ಲು. ರಾಜ್ಯದ ಯಾವುದೇ ವಿ.ವಿ. ಇಂತಹ ತರಬೇತಿ ಸಂಸ್ಥೆ ಹೊಂದಿಲ್ಲ. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವ (ಪಿಪಿಪಿ ಮಾದರಿ)ಯಲ್ಲಿ ರೂಪಿಸಿದ ಸಂಸ್ಥೆ ಇದು. ವಿಶ್ವವಿದ್ಯಾಲಯಗಳು ಪದವಿ ನೀಡಲಿವೆ. ಆದರೆ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯನ್ನು ಯಾವುದೇ ವಿ.ವಿ.ಗೂ ನೀಡುತ್ತಿಲ್ಲ. ಇಂತಹ ಕೇಂದ್ರದಿಂದ ಉದ್ಯೋಗ ಹೊಂದಲು ಅನುಕೂಲ ಆಗಲಿದೆ. ವಿ.ವಿ. ನುರಿತ ಪ್ರಾಧ್ಯಾಪಕರೂ ಇಲ್ಲಿ ತರಬೇತಿ ನೀಡುವರು. ನಿವೃತ್ತ ಪ್ರಾಧ್ಯಾಪಕರ ಸೇವೆ ಬಳಸುತ್ತೇವೆ. ಮುಂದಿನ 3 ವರ್ಷಗಳಲ್ಲಿ ಕೇಂದ್ರವು ಉತ್ತಮ ಫಲಿತಾಂಶ ನೀಡುವ ವಿಶ್ವಾಸವಿದೆ ಎಂದರು.

ಇದೇ ವೇಳೆ ಹೈಮಾಸ್ಟ್ ದೀಪ, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ₹12 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಶೌಚಾಲಯವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿದರು. ವೀರೇಶ್ ಮತ್ತು ಪ್ರಶಾಂತ್ ಉಪಸ್ಥಿತರಿದ್ದರು.

- - -

(ಕೋಟ್‌) ಐಟಿ ಕಂಪನಿಗಳನ್ನು ದಾವಣಗೆರೆ ಕರೆ ತರಲು ಪ್ರಯತ್ನ ನಡೆಯುತ್ತಲೇ ಇದೆ. ಇದಕ್ಕೆ ಜಾಗದ ಪರಿಶೀಲನೆಯೂ ಮಾಡುತ್ತಿದ್ದೇವೆ. ಐಟಿಗೆ ಪೂರಕವಾದ ಸಮ್ಮೇಳನ ನಡೆಯಲು ಪ್ರಯತ್ನ ಮಾಡಿದ್ದೇವೆ.

- ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ

- - -

-18ಕೆಡಿವಿಜಿ3, 4.ಜೆಪಿಜಿ:

ದಾವಣಗೆರೆಯಲ್ಲಿ ಶುಕ್ರವಾರ ದೃಶ್ಯಕಲಾ ಮಹಾ ವಿದ್ಯಾಲಯದಲ್ಲಿ ಸಂಕಲ್ಪ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿ, ಪೋಸ್ಟರ್ ಬಿಡುಗಡೆ ಮಾಡಿದರು. ಡಿಸಿ ಗಂಗಾಧರ ಸ್ವಾಮಿ, ದಾವಿವಿ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಇತರರು ಇದ್ದರು.