ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಮತಕ್ಷೇತ್ರದಲ್ಲಿರುವ ಎಲ್ಲ ರಸ್ತೆಗಳ ಅಭಿವೃದ್ಧಿ ಮಾಡುವ ಜೊತೆಗೆ ಕ್ಷೇತ್ರದಲ್ಲಿ ನೀರಿನ ಭವಣೆ ನೀಗಿಸುವಿಕೆ, ಜನರ ಮೂಲಸೌಲಭ್ಯಗಳಿಗೆ ಆದ್ಯತೆ ನೀಡುವ ಮೂಲಕ ಕ್ಷೇತ್ರವು ಸರ್ವಾಂಗೀಣ ಅಭಿವೃದ್ಧಿಯಾಗುತ್ತಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ, ಆರ್ ಆ್ಯಂಡ್ ಆರ್ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿವಿಧ ಅನುದಾನ ಯೋಜನೆಯಡಿ ಅಂದಾಜು ₹15 ಕೋಟಿ ವೆಚ್ಚದಲ್ಲಿ ಬಸವನಬಾಗೇವಾಡಿ-ಇಂಗಳೇಶ್ವರ ಜಿಲ್ಲಾ ಮುಖ್ಯರಸ್ತೆ ಅಭಿವೃದ್ಧಿ, ಸಿಸಿ ರಸ್ತೆ, ವಾಲ್ಮೀಕಿ ಗುಡಿ ಹತ್ತಿರ ಸಭಾಭವನ ನಿರ್ಮಾಣ ಮತ್ತು ನೆಲಮಾಳ ಸಿದ್ಧನ ದೇವಸ್ಥಾನದಿಂದ ಅರಳಿಚಂಡಿ ಕೂಡು ರಸ್ತೆ ನಿರ್ಮಿಸುವ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ ಮತಕ್ಷೇತ್ರದಲ್ಲಿ ಪಟ್ಟಣ ಸೇರಿದಂತೆ ಎಲ್ಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇನ್ನು ಕೆಲವೇ ರಸ್ತೆಗಳ ಅಭಿವೃದ್ಧಿ ಮಾತ್ರ ಬಾಕಿ ಇದ್ದು ಮುಂಬರುವ ದಿನಗಳಲ್ಲಿ ಅವುಗಳನ್ನು ಅಭಿವೃದ್ಧಿಪಡಿಸಲಾಗುವುದು. ₹26 ಕೋಟಿ ವೆಚ್ಚದಲ್ಲಿ ಈಗಾಗಲೇ ಮಸಬಿನಾಳದಿಂದ ಬಸವನಬಾಗೇವಾಡಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಬ.ಬಾಗೇವಾಡಿ ಪಟ್ಟಣ, ಇಂಗಳೇಶ್ವರ ಗ್ರಾಮ ಒಂದೇ ತಾಯಿ ಮಕ್ಕಳಿದ್ದಂತೆ. ಈ ಎರಡು ಸ್ಥಳಗಳಲ್ಲಿ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದರು.ಇಂಗಳೇಶ್ವರ ಗ್ರಾಮದಲ್ಲಿ ಅಂದಾಜು ₹೧೫ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ₹೧.೫೦ ಕೋಟಿ ವೆಚ್ಚದಲ್ಲಿ ಗ್ರಾಮದಲ್ಲಿ ಬಸವೇಶ್ವರ ಪ್ರತಿಮೆ, ವೃತ್ತವನ್ನು ನಿರ್ಮಿಸಲಾಗುವುದು. ಈಗಾಗಲೇ ಗ್ರಾಮದ ಆರಾಧ್ಯದೈವ ರೇವಣಸಿದ್ದೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಮಾಡಲಾಗಿದೆ. ಗ್ರಾಮದ ಕೆರೆ ಈಗಾಗಲೇ ಕಾಲುವೆ ನೀರಿನಿಂದ ಭರ್ತಿ ಮಾಡಲಾಗಿದೆ. ಪಂಚಾಯತಿ ಅಧ್ಯಕ್ಷರ ಮನವಿಯಂತೆ ಮುಂಬರುವ ದಿನಗಳಲ್ಲಿ ಗ್ರಾಪಂಗೆ ನೂತನ ಕಟ್ಟಡ ನಿರ್ಮಿಸಲಾಗುವುದು. ಗ್ರಾಮಸ್ಥರ ಬೇಡಿಕೆಯಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಗ್ರಾಮದಲ್ಲಿ ಮಂಜೂರು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಮತಕ್ಷೇತ್ರದಲ್ಲಿ ಎಂದೂ ಕಾಣದಷ್ಟು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಅವಧಿಯಲ್ಲಿ ಆಗಿದೆ. ಕ್ಷೇತ್ರದಲ್ಲಿ ರಸ್ತೆ, ದೇವಸ್ಥಾನಗಳ ಅಭಿವೃದ್ಧಿ, ಶಾಲಾ ಕೋಣೆಗಳ ಅಭಿವೃದ್ಧಿ ಸೇರಿದಂತೆ ಜನರಿಗೆ ಬೇಕಾದ ಕಾಮಗಾರಿಗಳನ್ನು ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಜನರು ಕೇಳುವ ಮೊದಲಿಗೆ ಅವರಿಗೆ ಬೇಕಾದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಏಕೈಕ ಶಾಸಕ, ಸಚಿವ ಶಿವಾನಂದ ಪಾಟೀಲರು ಎಂದರೆ ತಪ್ಪಾಗಲಾರದು ಎಂದರು.
ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿ ಹರಿಕಾರರೆಂದು ಶಾಸಕ, ಸಚಿವ ಶಿವಾನಂದ ಪಾಟೀಲರು ಗುರುತಿಸಿಕೊಂಡಿದ್ದಾರೆ. ಅಭಿವೃದ್ಧಿ ಚಿಂತಕರಾಗಿರುವ ಅವರು ರಾಜ್ಯದಲ್ಲಿ ಶ್ರೇಷ್ಠ ಶಾಸಕ ಪ್ರಶಸ್ತಿಗೆ ಭಾಜನರಾಗಿರುವ ಏಕೈಕ ಶಾಸಕರು. ನಮ್ಮ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಿಸುವ ಜೊತೆಗೆ ಮಾದಲಾಂಬಿಕೆ ಭವನದಲ್ಲಿ ಕಾರ್ಯಕ್ರಮ ನಡೆದರೆ ಧ್ವನಿ ಪ್ರತಿಧ್ವನಿಯಾಗುವುದರಿಂದಾಗಿ ಕಾರ್ಯಕ್ರಮ ಮಾಡಲು ಭವನದ ಹೊರಗಡೆ ಇರುವ ವಿಶಾಲ ಜಾಗದಲ್ಲಿ ಶೆಡ್ ಹಾಕಿಸಿಕೊಡಬೇಕು ಎಂದು ಮನವಿ ಮಾಡಿದರು.ಗ್ರಾಮ ಪಂಚಾಯತಿ ಅಧ್ಯಕ್ಷ ಬನ್ನೆಪ್ಪ ಡೋಣೂರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಜಿಲ್ಲಾ ಪಂಚಾಯತಿ ಜಿಲ್ಲಾ ಯೋಜನಾಧಿಕಾರಿ ನಿಂಗಪ್ಪ ಗೋಠೆ, ತಹಸೀಲ್ದಾರ್ ವೈ.ಎಸ್.ಸೋಮನಕಟ್ಟಿ, ಲೋಕೋಪಯೋಗಿ ಇಲಾಖೆಯ ಎಇಇ ಜಿ.ವಿ.ಕಿರಸೂರ, ಆರ್ ಆ್ಯಂಡ್ ಆರ್ ಇಲಾಖೆಯ ಎಇ ಕೆ.ಎನ್.ಒಡೆಯರ, ಎಇ ಮಲ್ಲಿಕಾರ್ಜುನ, ಪಿಐ ಗುರುಶಾಂತ ದಾಶ್ಯಾಳ, ಗುತ್ತಿಗೆದಾರರಾದ ರಾಮು ಕವಲಗಿ, ಮಲ್ಲು ಹಾರಿವಾಳ, ಶ್ರೀಶೈಲ ತಾಳಿಕೋಟಿ, ಅಣ್ಣುಗೌಡ ಪಾಟೀಲ ಇತರರು ಇದ್ದರು. ಎಸ್.ಎಚ್.ಕೋಣಿನ ಸ್ವಾಗತಿಸಿದರು. ಜಕ್ಕಪ್ಪ ಮೀಸಿ ಮಾಸ್ತರ ನಿರೂಪಿಸಿದರು. ಅರವಿಂದ ಗಂಗೂರ ವಂದಿಸಿದರು.ಕಳೆದ ೩೦ ವರ್ಷಗಳಲ್ಲಿ ಈ ವರ್ಷವು ಹಿಂಗಾರು, ಮುಂಗಾರು ಅವಧಿಯಲ್ಲಿ ವರುಣನ ಕೃಪೆಯಾಗಿದ್ದರಿಂದ ಶೇ.೮೦ರಷ್ಟು ಬಿತ್ತನೆಯಾಗಿದೆ. ಇದೀಗ ವರುಣ ಕೃಪೆಯಾಗುತ್ತಿರುವುದರಿಂದ ಉಳಿದ ಶೇ.20 ರಷ್ಟು ಬಿತ್ತನೆಯಾಗುವ ನಿರೀಕ್ಷೆಯಿದೆ. ಉತ್ತಮ ಬೆಳೆ ಬರುವ ನಿರೀಕ್ಷೆಯಿದೆ. ಜಿಲ್ಲೆಯ ಜನರ ಕುಡಿವ ನೀರಿನ ಭವಣೆ ನೀಗಿಸಲು ಜಲಧಾರೆ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡರು ನಾವು ಸೇರಿದಂತೆ ತಾಳಿಕೋಟಿ ಬ್ರಿಡ್ಜ್ ನಿರ್ಮಾಣಕ್ಕೆ ಅಂದಾಜು ₹೩೨ ಕೋಟಿ ಮಂಜೂರಿ ಮಾಡಿಸಲಾಗಿದೆ. ಹೂವಿನಹಿಪ್ಪರಗಿಯಿಂದ ದೇವರಹಿಪ್ಪರಗಿಗೆ ಹೋಗುವ ರಸ್ತೆಯನ್ನು ಆ ಭಾಗದ ಶಾಸಕರೊಂದಿಗೆ ಕೂಡಿ ಅಭಿವೃದ್ಧಿ ಪಡಿಸಲಾಗುವುದು.
-ಶಿವಾನಂದ ಪಾಟೀಲ, ಸಚಿವರು.