ಸಮುದಾಯದ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಶಿಕ್ಷಣವೇ ಸಮುದಾಯದ ಪ್ರಗತಿಗೆ ಪ್ರಮುಖ ಅಸ್ತ್ರ. ಯುವಕರು ಕೇವಲ ಉದ್ಯೋಗ ಹುಡುಕುವವರಾಗದೆ, ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆಯಬೇಕು ಎಂದು ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಶಿರಾ
ಮಡಿವಾಳ ಸಮುದಾಯಕ್ಕೆ ಇದುವರೆಗೂ ನಿರೀಕ್ಷಿತ ಮಟ್ಟದ ರಾಜಕೀಯ ಶಕ್ತಿ ದೊರೆತಿಲ್ಲ. ಸಮುದಾಯವು ಸ್ವಾವಲಂಬಿಯಾಗಿ ಬೆಳೆಯುವುದರ ಜೊತೆಗೆ ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಜಾಗೃತರಾಗಬೇಕು. ಈ ನಿಟ್ಟಿನಲ್ಲಿ ಮಾಡಿವಾಳ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸುವುದೇ ನನ್ನ ಗುರಿ ಎಂದು ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ ಹೇಳಿದರು.ಭಾನುವಾರ ಶಿರಾ ನಗರದ ಕುಂಚಶ್ರೀ ಪ್ಯಾಲೇಸ್ ನಲ್ಲಿ ಶಿರಾ ತಾಲೂಕು ಮಡಿವಾಳ ಮಾಚಿದೇವ ಸಂಘ, ಶ್ರೀ ವೀರಘಂಟೆ ಮಡಿವಾಳ ಮಾಚಿದೇವರ ದೇವಸ್ಥಾನ ಟ್ರಸ್ಟ್ ಹಾಗೂ ಸರ್ಕಾರಿ ನೌಕರರ ಸಂಘದ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಡಿವಾಳ ಸಮುದಾಯದವರು ಶಿಕ್ಷಣ ಪಡೆಯುವುದಕ್ಕೂ, ಆರ್ಥಿಕವಾಗಿ ಮುಂದೆ ಬರುವುದಕ್ಕೂ ಹಿಂದಿನ ದಿನಗಳಲ್ಲಿ ಹಲವು ರೀತಿಯ ಅಡೆತಡೆಗಳನ್ನು ಎದುರಿಸಬೇಕಾಗಿತ್ತು. ಇಂತಹ ಪರಿಸ್ಥಿತಿಯನ್ನು ಬದಲಾಯಿಸಲು ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
ಸಮುದಾಯದ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಶಿಕ್ಷಣವೇ ಸಮುದಾಯದ ಪ್ರಗತಿಗೆ ಪ್ರಮುಖ ಅಸ್ತ್ರ. ಯುವಕರು ಕೇವಲ ಉದ್ಯೋಗ ಹುಡುಕುವವರಾಗದೆ, ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆಯಬೇಕು ಎಂದು ಕರೆ ನೀಡಿದರು.ಶ್ರೀ ಮಾಚಿದೇವ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಆಶೀರ್ವಚನ ನೀಡಿ ಮಡಿವಾಳ ಸಮುದಾಯದವರು ಸಮುದಾಯದ ಸಂಘಟನೆಗೆ ಹೆಚ್ಚಿನ ಮಹತ್ವ ನೀಡಬೇಕು. ವಿದ್ಯಾರ್ಥಿಗಳು ಗುರಿ ಸ್ಪಷ್ಟವಾಗಿ ನಿರ್ಧರಿಸಿಕೊಳ್ಳಬೇಕು. ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ ೨೫ನೇ ವಯಸ್ಸಿನೊಳಗೆ ತಮ್ಮ ಗುರಿ ತಲುಪುವ ಸಂಕಲ್ಪ ಮಾಡಬೇಕು. ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಸಾಮಾನ್ಯ ವ್ಯಕ್ತಿಯೂ ದೊಡ್ಡ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ ಮಾತನಾಡಿ ಮಡಿವಾಳ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪರಿಶಿಷ್ಟ ಜಾತಿ ಮೀಸಲಾತಿಯ ಸೌಲಭ್ಯ ದೊರೆಯುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಮುದಾಯದ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರುವುದು ಖಚಿತ. ಆ ಸಂದರ್ಭದಲ್ಲಿ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸುಮಾರು ೨೭ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆಯ ನಿರ್ದೇಶಕ ಡಾ.ಶಶಿಭೂಷಣ್ ಬಿ.ಎಲ್., ಶಿರಾ ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಬಿ.ಕೆ.ಈಶ್ವರ್, ಅಖಿಲ ದೋಭಿ ಮಹಾ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಯು.ಕೃಷ್ಣಯ್ಯ, ಸಂವಹನ ತಜ್ಞ ಪ್ರವೀಣ್ ಹುಲಿಕುಂಟೆ, ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ಪಾಪಣ್ಣ, ಡಾ.ಪಿ.ಶಂಕರಪ್ಪ, ನಗರಸಭೆ ಸದಸ್ಯರು ಹಾಗೂ ಮಡಿವಾಳ ಮಾಚಿದೇವ ಟ್ರಸ್ಟ್ನ ಅಧ್ಯಕ್ಷ ಎಸ್.ಎನ್.ಮಹೇಶ್, ಜಿಲ್ಲಾಧ್ಯಕ್ಷ ಎಚ್.ಬಿ. ಜ್ಞಾನೇಶ್, ಕಾರ್ಯದರ್ಶಿ ನಟರಾಜ ಡಿ., ಕೆ.ಕುಮಾರ್, ಭೂತೇಶ್, ಕರಿಯಪ್ಪ, ಅನಂತರಾಜು ಸೇರಿ ಹಲವರು ಹಾಜರಿದ್ದರು.