ಸಾರಾಂಶ
ಕನ್ನಡಪ್ರಭವಾರ್ತೆ ಚನ್ನಪಟ್ಟಣ
ಚನ್ನಪಟ್ಟಣದ ಜನರ ಬದುಕಿನಲ್ಲಿ ಬದಲಾವಣೆ ತರಬೇಕು. ತಾಲೂಕಿಗೆ ಹೊಸ ರೂಪ ನೀಡಬೇಕು ಎಂದು ನಾವು ಇಲ್ಲಿಗೆ ಬಂದಿದ್ದೇವೆ. ಅದೇ ನಿಟ್ಟಿನಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಬೇಕು ಎಂದು ಇಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚನ್ನಪಟ್ಟಣದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಇಲ್ಲಿನ ಜನರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.ಚನ್ನಪಟ್ಟಣದಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚಲು ತಯಾರಿ ನಡೆಸಲಾಗಿದೆ. ವಸತಿ ಯೋಜನೆಯಲ್ಲಿ ೫ ಸಾವಿರ ಮನೆ ಮಂಜೂರು ಮಾಡಲಾಗಿದೆ. ಚನ್ನಪಟ್ಟಣದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ವಿಶೇಷ ಅನುದಾನ ನೀಡಿದ್ದಾರೆ. ಇದೀಗ ನಿರುದ್ಯೋಗ ಸಮಸ್ಯೆ ನಿವಾರಿಸಲು ಉದ್ಯೋಗ ಮೇಳ ಆಯೋಜಿಸಿದ್ದು, ನಿಮ್ಮ ಸಹಕಾರಕ್ಕೆ ನಮ್ಮ ಸರ್ಕಾರದ ಬಾಗಿಲು ಸದಾ ತೆರೆದಿದೆ ಎಂದರು.೨೪೦ ಕಂಪನಿ ಭಾಗಿಚನ್ನಪಟ್ಟಣದಲ್ಲಿ ಆಯೋಜಿಸಿರುವ ಉದ್ಯೋಗ ಮೇಳದಲ್ಲಿ ಸುಮಾರು ಹತ್ತು ಸಾವಿರ ಮಂದಿ ಉದ್ಯೋಗಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ. ೮ ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದಾರೆ. ೨೪೦ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗಿವೆ. ಈ ಹಿಂದೆ ಕನಕಪುರದಲ್ಲಿ ಉದ್ಯೋಗ ಮೇಳ ಆಯೋಜಿಸಿದ್ದು, ಇಲ್ಲಿಯೂ ಅದೇ ರೀತಿ ಉದ್ಯೋಗ ಮೇಳ ಆಯೋಜಿಲಾಗಿದೆ ಎಂದರು. ದೇವರು ವರವನ್ನು ಕೊಡುವುದಿಲ್ಲ ಶಾಪವನ್ನು ಕೊಡುವುದಿಲ್ಲ ಕೇವಲ ಅವಕಾಶ ನೀಡುತ್ತಾನೆ. ಉದ್ಯೋಗ ಮೇಳದಲ್ಲಿ ಎಲ್ಲ ೧೦ ಸಾವಿರ ಜನರಿಗೆ ಕೆಲಸ ಕೊಡುತ್ತೇವೇ ಎನ್ನುವುದಿಲ್ಲ. ಆದರೆ, ಯುವಕರಿಗೆ ಅವಕಾಶ ಕೊಡಬೇಕು ಎಂದು ಉದ್ಯೋಗ ಮೇಳ ಮಾಡಿದ್ದೇವೆ. ಉದ್ಯೋಗದ ಹಸಿವು ಸಮಸ್ಯೆ ಹೇಗಿದೆ ಎಂದು ಇಲ್ಲಿ ನೋಡಿದೆ. ಹೆಣ್ಣು ಮಕ್ಕಳು ಕಷ್ಟಪಟ್ಟು ಓದಿ, ಬೆಂಗಳೂರಿಗೆ ಬಂದು ಕೆಲಸ ಮಾಡಿದರೆ, ಅರ್ಧ ಹಣ ವಸತಿಗೆ ನೀಡಲು ಖರ್ಚಾಗುತ್ತದೆ. ಅದಕ್ಕೆ ಜನರಿಗೆ ಉದ್ಯೋಗ ಕಲ್ಪಿಸಲು ಸಹಕಾರ ನೀಡಲು ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದರು. ಧೈರ್ಯ ಕಳೆದುಕೊಳ್ಳಬೇಡಿ; ಅವಕಾಶ ಹುಡುಕಿಕೊಂಡು ಬರುವುದಿಲ್ಲ ನೀವೇ ಹುಡುಕಿಕೊಂಡು ಬರಬೇಕು. ಯುವಕರಿಗೆ ಮಾನಸಿಕ ಧೈರ್ಯ ಯಾವ ಕಾರಣಕ್ಕೂ ಕಡಿಮೆಯಾಗಬಾರದು. ಉದ್ಯೋಗ ಸಿಕ್ಕಿತು ಎಂದು ಸುಮ್ಮನಾಗಬೇಡಿ. ಕಲಿಯುವುದು ಮುಂದುವರಿಸಿ, ನೀವೇ ನಾಲ್ಕು ಜನರಿಗೆ ಉದ್ಯೋಗ ಕೊಡವಂತೆ ಬೆಳೆಯಿರಿ. ಸರ್ಕಾರದಲ್ಲಿ ಬೇಕಾದಷ್ಟು ಯೋಜನೆ ಇದ್ದು, ಅದನ್ನು ಬಳಸಿಕೊಂಡು ಮುಂದೆ ಬನ್ನಿ ಎಂದರು.
ಯುವಸಮುದಾಯಕ್ಕೆ ಸಾಧಿಸುವ ಛಲ ಇರಬೇಕು. ಆಗ ಸೋಲು ನಿಮ್ಮನ್ನು ಆಗ ಕಾಡುವುದಿಲ್ಲ . ನಿಮ್ಮ ಪ್ರತಿಭೆಗೆ ಒಂದಲ್ಲ ಒಂದು ದಿನ ಅವಕಾಶ ಸಿಗುತ್ತದೆ. ಪ್ರಯತ್ನ ಬಿಡಬೇಡಿ. ನಿಮ್ಮ ಪ್ರಯತ್ನ, ನಿಮ್ಮ ಪರಿಶ್ರಮ ವಿಫಲವಾಗುವುದಿಲ್ಲ ಎಂದರು. ಬುದ್ಧಿವಂತರ ತಾಲೂಕು: ಒಂದು ಕಾಲದಲ್ಲಿ ಚನ್ನಪಟ್ಟಣ ತಾಲೂಕು ನಮ್ಮ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ವಿದ್ಯಾವಂತರು ಇದ್ದ ತಾಲೂಕು ಎನ್ನಿಸಿಕೊಂಡಿತ್ತು. ಪ್ರೊ. ವೆಂಕಟಗಿರಿಗೌಡರಂಥವರು, ಮೈಸೂರು ರಾಜ್ಯದ ಮೊದಲ ವಿದ್ಯಾಮಂತ್ರಿಯಾಗಿದ್ದ ವೆಂಕಟಪ್ಪನವರು ಇಲ್ಲಿಯವರು. ಬಹಳ ಬುದ್ಧಿವಂತರು ಹುಟ್ಟಿದ ತಾಲೂಕು ಇದಾಗಿದು, ಬಹಳ ದೊಡ್ಡ ಇತಿಹಾಸ ತಾಲೂಕಿಗೆ ಇದೆ ಎಂದು ಬಣ್ಣಿಸಿದರು.ಎಚ್‌ಡಿಕೆ ಸಿಪಿವೈಗೆ ಪರೋಕ್ಷ ಟಾಂಗ್ ನೀಡಿದ ಡಿಕೆಶಿಚನ್ನಪಟ್ಟದಲ್ಲಿ ಸಾಕಷ್ಟು ದೊಡ್ಡ ನಾಯಕರು ಬೆಳೆದಿದ್ದಾರೆ ಅವರೆಂದಾದರೂ ಇಷ್ಟು ದೊಡ್ಡ ಉದ್ಯೋಗ ಮಾಡಿದ್ದಾರಾ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಂಎಲ್‌ಸಿ ಸಿ.ಪಿ.ಯೋಗೇಶ್ವರ್ ಹೆಸರೇಳದೇ ಪರೋಕ್ಷವಾಗಿ ಟಾಂಗ್ ನೀಡಿದರು. ಇಲ್ಲಿಂದ ಮುಖ್ಯಮಂತ್ರಿ, ಸಚಿವ, ಶಾಸಕ, ಎಂಎಲ್‌ಸಿ ಆದವರು ಇದ್ದಾರೆ. ಆದರೆ, ಅವರೆಂದು ಇಂಥ ಕಾರ್ಯಕ್ರಮ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.