ಸಾರಾಂಶ
ಕಾರವಾರ: ರಾಜ್ಯ ಮಟ್ಟದಲ್ಲಿ ಜೆಡಿಎಸ್-ಬಿಜೆಪಿ ಒಂದಾಗಿರುವುದರಿಂದ ರಾಜ್ಯದಲ್ಲಿ, ಜಿಲ್ಲೆಯಲ್ಲಿ ದ್ವಿಪಕ್ಷದಿಂದ ಆಯ್ಕೆಯಾದ ಒಮ್ಮತದ ಅಭ್ಯರ್ಥಿಗಳು ಗೆಲ್ಲಲು ಸುಲಭವಾಗಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಲು ರಾಜ್ಯ, ಜಿಲ್ಲೆಯ ಜೆಡಿಎಸ್ ನಾಯಕರು, ಕಾರ್ಯಕರ್ತರು ಕೈ ಜೋಡಿಸುತ್ತೇವೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮೋದಿ ಅವರ ಅಭಿಮಾನಿ ಎಂದು ಮೊದಲಿನಿಂದಲೂ ಹೇಳುತ್ತಿದ್ದೇನೆ. ಅವರ ವಿರುದ್ಧ ಯಾವತ್ತೂ ಮಾತನಾಡಿಲ್ಲ. ರಾಷ್ಟ್ರಕ್ಕೆ ಮೋದಿ ಅವರ ನೇತೃತ್ವ ಇನ್ನೊಮ್ಮೆ ಬೇಕಿದೆ. ಅಭಿವೃದ್ಧಿ, ಶಾಂತಿ, ಜಗತ್ತಿನ ಆಗುಹೋಗುಗಳ ಬಗ್ಗೆ ಗೊತ್ತಿದೆ. ಇಂತಹ ಸಂದರ್ಭದಲ್ಲಿ ಅವರೇ ಪ್ರಧಾನಿಯಾಗುವುದು ಬಹುಮುಖ್ಯವಾಗಿದೆ. ಈ ಬಾರಿ ರಾಷ್ಟ್ರದಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಎಲ್ಲರೂ ಸೇರಿ ಕೆಲಸ ಮಾಡುತ್ತೇವೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಆರು ತಿಂಗಳಾಗಿದೆ. ಬದಲಾವಣೆ ಆಗಬೇಕೆಂಬ ದೊಡ್ಡ ಕೂಗಿತ್ತು. ಐದು ಗ್ಯಾರೆಂಟಿಯಿಂದ ಬಹುಮತ ಬಂದಿದೆ. ಲೋಪದೋಷ, ಸಮಸ್ಯೆ, ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಕುಮಾರಸ್ವಾಮಿ ದಿನನಿತ್ಯ ಮಾಧ್ಯಮಗಳ ಮೂಲಕ ಜನರ ಗಮನಕ್ಕೆ ತರುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರು ಪ್ರತ್ಯೇಕ ಕಮಿಟಿ ಮಾಡಿ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿದೆಯೇ ಇಲ್ಲವೇ ಎಂದು ತನಿಖೆ ಮಾಡುತ್ತೇವೆ ಎಂದಿದ್ದಾರೆ. ಇದಕ್ಕೆ ಕಾರಣ ಕುಮಾರಣ್ಣ ಆಗಿದ್ದಾರೆ ಎಂದು ಅಭಿಪ್ರಾಯಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸತೀಶ ಸೈಲ್ ಹಾಗೂ ತಾವು ಡಬ್ಬಲ್ ಎಂಜಿನ್ ಎಂದಿರುವ ಬಗ್ಗೆ ಕೇಳಿದಾಗ, ನಾವಿಬ್ಬರೂ ವೈಯಕ್ತಿಕವಾಗಿ ಆತ್ಮೀಯರಾಗಿಯೇ ಇದ್ದೇವೆ. ಕಳೆದ ಚುನಾವಣಾ ಪ್ರಚಾರದಲ್ಲಿ ಹೇಳಿದಂತೆ ಇದ್ದೇನೆ. ಪಕ್ಷ ಬೇರೆ ಬೇರೆ ಆಗಿರಬಹುದು. ಆದರೆ ಜನರಿಗೆ ಕೊಟ್ಟ ಮಾತು ತಪ್ಪುವುದಿಲ್ಲ. ಅವರು ತಪ್ಪು ಮಾಡಿದರೆ ತಾವು ಕೂಡಾ ಜವಾಬ್ದಾರಿ ಎಂದ ಅವರು, ಲೋಕಸಭಾ ಚುನಾವಣೆಗೆ ಅಸ್ನೋಟಿಕರ ಸ್ಪರ್ಧಿಸಿದರೆ ಸೈಲ್ ಬೆಂಬಲಿಸುತ್ತಾರೋ ಎಂದು ಕೇಳಿದಕ್ಕೆ, ಅವರು ನನಗೆ ಬೆಂಬಲ ಕೊಡುತ್ತಾರೊ ಬಿಡುತ್ತಾರೊ ಅವರಿಗೆ ಬಿಟ್ಟ ವಿಚಾರವಾಗಿದೆ ಎಂದಷ್ಟೆ ಹೇಳಿದರು.ಅನಂತಕುಮಾರ ಪರ ಬ್ಯಾಟಿಂಗ್:ಮುಂದಿನ ಲೋಕಸಭಾ ಚುನಾವಣೆಗೆ ತಾವೂ ಆಕಾಂಕ್ಷಿಯಾಗಿದ್ದು, ಕಳೆದ ಲೋಕಸಭೆಯಲ್ಲಿ ತಯಾರಿಯಿಲ್ಲದೆ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾಗ ತಮಗೆ ಪರಾಭವವಾಗಿದೆ. ಕೊನೆಯ ಕ್ಷಣದಲ್ಲಿ ಟಿಕೆಟ್ ಘೋಷಣೆಯಾಗಿತ್ತು. ಈ ಬಾರಿ ಮೊದಲಿನಿಂದಲೂ ತಯಾರಿಯಲ್ಲಿದ್ದೇವೆ. ಅವಕಾಶ ನೀಡಿದರೆ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ಅನಂತಕುಮಾರ ಹೆಗಡೆ ಬೆಂಬಲಿಗರು ತಮ್ಮನ್ನು ಗೆಲ್ಲಿಸುತ್ತಾರೆ ಎಂದು ಆನಂದ ಅಸ್ನೋಟಿಕರ ವಿಶ್ವಾಸ ವ್ಯಕ್ತಪಡಿಸಿದರು.ಅನಂತಕುಮಾರ ಹೆಗಡೆ ಅವರೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ. ಅವರು ನಿಲ್ಲುತ್ತಾರೆ ಎಂದರೆ ಸಂಪೂರ್ಣ ಬೆಂಬಲವನ್ನು ಜೆಡಿಎಸ್‌ನಿಂದ ನೀಡುತ್ತೇವೆ. ಅನಂತಕುಮಾರ ಸ್ಪರ್ಧಿಸುತ್ತಾರೆಂದರೆ ತಾವು ಆಕಾಂಕ್ಷಿ ಅಲ್ಲ. ಅವರು ನಿಲ್ಲುವುದಿಲ್ಲ ಎಂದರೆ ಮಾತ್ರ ಈ ಕ್ಷೇತ್ರಕ್ಕೆ ತಾವೂ ಒಬ್ಬ ಆಕಾಂಕ್ಷಿಯಾಗಿದ್ದು, ಅನಂತಕುಮಾರ ಸ್ಪರ್ಧಿಸಿದರೆ ಗೆಲ್ಲಿಸುತ್ತೇವೆ. ಅಂತಿಮವಾಗಿ ದ್ವಿಪಕ್ಷದ ನಾಯಕರು ಯಾರನ್ನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರೂ ಗೆಲ್ಲಿಸುತ್ತೇವೆ ಎಂದು ತಿಳಿಸಿದರು.ಕಳೆದ ಲೋಕಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ ವಿರುದ್ಧ ಮಾತನಾಡಿದ ಬಗ್ಗೆ ಪ್ರಶ್ನಿಸಿದಾಗ, ರಾಜಕಾರಣದಲ್ಲಿ ಏನಾಗಬಹುದು ಎನ್ನಲು ಸಾಧ್ಯವಿಲ್ಲ. ಅವರು ನಮ್ಮ ಬ್ರದರ್. ಅಂದು ನಮ್ಮ ಎದುರಾಳಿಯಾಗಿದ್ದರು. ಒಬ್ಬ ಎದುರಾಳಿಯಾಗಿ ಮಾತನಾಡಿದ್ದೇವೆ. ನಾವು ಈಗ ಒಂದಾಗಿದ್ದೇವೆ. ಒಂದೇ ಮನೆಯ ಸದಸ್ಯರಾಗಿದ್ದೇವೆ. ಬಿಜೆಪಿಯಲ್ಲಿ ಅತ್ಯಂತ ಹಿರಿಯ ನಾಯಕರಾಗಿದ್ದು, ಅವರು ಆಯ್ಕೆಯಾದರೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಪರ ಅಸ್ನೋಟಿಕರ ಬ್ಯಾಟಿಂಗ್ ಮಾಡಿದರು.
ಮಾಜಿ ಶಾಸಕಿ ರೂಪಾಲಿ ನಾಯ್ಕ ವಿರುದ್ಧ ಹರಿಯಾಯ್ದ ಆನಂದ, ಅವರು ಜಿಪಂ ಸದಸ್ಯರಾಗಲೂ ಅರ್ಹರಲ್ಲ ಎಂದರು.ಪಕ್ಷದ ರಾಜ್ಯ ಮಹಿಳಾ ಘಟಕದ ಸದಸ್ಯೆ ಮೋಹಿನಿ ನಾಯ್ಕ, ಸಂದೀಪ್ ಬಂಟ, ಮಂಜು ಗೌಡ, ಅನ್ಮೋಲ್ ಇದ್ದರು.