ಹಿಂದಿನಿಂದಲೂ ಲೈಸೆನ್ಸ್ ಹೊಂದಿದ್ದು ನೈಜವಾಗಿ ವ್ಯಾಪಾರ ನಡೆಸುತ್ತಿದ್ದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಪುರಸಭೆ ಈಗಾಗಲೇ ವ್ಯಾಪಾರಿಗಳ ವಿವರಗಳನ್ನು ಸಂಗ್ರಹಿಸಿದ್ದು, ಮಳಿಗೆಗಳು ಸಿದ್ಧವಾದ ತಕ್ಷಣ ಆದ್ಯತೆಯ ಮೇರೆಗೆ ಹಸ್ತಾಂತರಿಸಲಾಗುವುದು .
ಸಕಲೇಶಪುರ: ಪಟ್ಟಣದ ಸೌಂದರ್ಯ ವೃದ್ಧಿ, ಸಾರ್ವಜನಿಕರ ಸುರಕ್ಷತೆ ಹಾಗೂ ಪಾದಚಾರಿಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಸಕಲೇಶಪುರ ನಗರದಲ್ಲಿ ಫುಟ್‌ಪಾತ್ ಮೇಲಿನ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜುನಾಥ್ ಹೇಳಿದರು.
ಮಂಗಳವಾರ ಶಾಸಕರ ಗೃಹ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಕಲೇಶಪುರ, ಆಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಕಳೆದ ಒಂದು ವರ್ಷದಲ್ಲಿ ಸುಮಾರು 34 ಮಂದಿ ಅಪಘಾತಗಳಲ್ಲಿ ಮೃತಪಟ್ಟಿರುವುದಾಗಿ ಪೊಲೀಸ್ ಅಂಕಿಅಂಶಗಳು ತಿಳಿಸುತ್ತವೆ. ಈ ಹಿನ್ನೆಲೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಪುರಸಭೆ ಮೂಲಕ ಫುಟ್‌ಪಾತ್ ತೆರವು ಕ್ರಮಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಫುಟ್‌ಪಾತ್ ತೆರವು ಕಾರ್ಯಾಚರಣೆಯು ಬಡವರ ವಿರುದ್ಧದ ಕ್ರಮವಲ್ಲ. ಸಾರ್ವಜನಿಕ ಹಿತಾಸಕ್ತಿ ಮತ್ತು ಕಾನೂನು ಅನಿವಾರ್ಯತೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪಾದಚಾರಿಗಳ ಸುರಕ್ಷತೆ ಹಾಗೂ ಅಪಘಾತಗಳ ತಡೆಗಟ್ಟುವಿಕೆಯೇ ಇದರ ಮುಖ್ಯ ಉದ್ದೇಶ ಎಂದು ಹೇಳಿದರು.ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಸಕಲೇಶಪುರ ಹಳೆ ಬಸ್ ನಿಲ್ದಾಣ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಫುಡ್ ಕೋರ್ಟ್, ಫ್ರೂಟ್ ಕೋರ್ಟ್ ಹಾಗೂ ಫ್ಲವರ್ ಕೋರ್ಟ್ ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ. ಅಗತ್ಯ ಅನುದಾನ ಮೀಸಲಿಟ್ಟು ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುತ್ತಿದ್ದು, ಅನುಮೋದನೆ ದೊರಕಿದ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದರು.
ಹಿಂದಿನಿಂದಲೂ ಲೈಸೆನ್ಸ್ ಹೊಂದಿದ್ದು ನೈಜವಾಗಿ ವ್ಯಾಪಾರ ನಡೆಸುತ್ತಿದ್ದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಪುರಸಭೆ ಈಗಾಗಲೇ ವ್ಯಾಪಾರಿಗಳ ವಿವರಗಳನ್ನು ಸಂಗ್ರಹಿಸಿದ್ದು, ಮಳಿಗೆಗಳು ಸಿದ್ಧವಾದ ತಕ್ಷಣ ಆದ್ಯತೆಯ ಮೇರೆಗೆ ಹಸ್ತಾಂತರಿಸಲಾಗುವುದು ಎಂದು ಭರವಸೆ ನೀಡಿದರು.ತಾತ್ಕಾಲಿಕವಾಗಿ ತೆರವುಗೊಂಡ ವ್ಯಾಪಾರಿಗಳು ಹಳೆ ತಾಲೂಕು ಕಚೇರಿ ಸಭಾಂಗಣದ ಆವರಣದಲ್ಲಿ ವ್ಯಾಪಾರ ನಡೆಸಬಹುದಾಗಿದೆ. ನಗರದ ಕಿರಿದಾದ ರಸ್ತೆಗಳು ಹಾಗೂ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ಉಂಟಾಗಿರುವ ಸಮಸ್ಯೆ ನಿವಾರಣೆಗೆ ಎನ್‌ಎಚ್‌ಐ ಮೂಲಕ ರಸ್ತೆ ತೆರೆಯುವ ಕಾರ್ಯ ಪ್ರಗತಿಯಲ್ಲಿದೆ.
ಸಾರ್ವಜನಿಕ ಸುರಕ್ಷತೆ, ವ್ಯಾಪಾರಸ್ಥರ ಹಿತ ಹಾಗೂ ನಗರ ಸಂಚಾರ ವ್ಯವಸ್ಥೆ ಈ ಮೂರನ್ನೂ ಸಮತೋಲನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕರು ಹೇಳಿದರು.ಒಂದೂವರೆ ತಿಂಗಳೊಳಗೆ ವ್ಯವಸ್ಥಿತ ಮಳಿಗೆಗಳ ನಿರ್ಮಾಣ ಆರಂಭಿಸಿ, ವ್ಯಾಪಾರಿಗಳನ್ನು ಶಾಶ್ವತವಾಗಿ ಸ್ಥಳಾಂತರಿಸುವ ಗುರಿ ಹೊಂದಲಾಗಿದೆ. ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳು ಪುರಸಭೆ ಸೂಚಿಸುವ ತಾತ್ಕಾಲಿಕ ವ್ಯವಸ್ಥೆಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.