ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವುದಾಗಿ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ರಾಜಣ್ಣ ಭರವಸೆ ನೀಡಿದರು.ಶುಕ್ರವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿ ವಿದ್ಯುತ್ ಸಂಪರ್ಕ, ಕುಡಿವ ನೀರು, ಶವಗಾರ,ಮಕ್ಕಳ ವಿಭಾಗ ,ಕಟ್ಟಡದ ಮೇಲ್ಚಾವಣಿ,ಪುರುಷರ ವಾರ್ಡ್ ,ಶಸ್ತ್ರ ಚಿಕಿತ್ಸಾ ವಿಭಾಗ ,ತುರ್ತು ಚಿಕಿತ್ಸಾ ಘಟಕ ಸೇರಿದಂತೆ ಕುಂದು ಕೊರತೆಗಳ ಬಗ್ಗೆ ಪರಿಶೀಲಿಸಿದ ನಂತರ ವಾರ್ಡ್‌ಗಳಲ್ಲಿರುವ ರೋಗಿಗಳನ್ನು ಮಾತನಾಡಿಸಿ ಮಾಹಿತಿ ಪಡೆದರು.
ಕೆಲವು ಮುಖಂಡರು ಈ ಆಸ್ಪತ್ರೆಯಲ್ಲಿ ಸಣ್ಣಪುಟ್ಟ ಗಾಯಗಳಿಗೆ ಬರುವ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸುವ ಜೊತೆಗೆ ಹೆರಿಗೆಗಳನ್ನು ಇಲ್ಲಿ ಮಾಡುವುದಿಲ್ಲ, ವೈದ್ಯರು ಸಕಾಲಕ್ಕೆ ಬಾರದೇ ರೋಗಿಗಳು ಪರದಾಡುವ ಸ್ಥಿತಿ ಕೂಡ ಇಲ್ಲಿದೆ ಎಂದು ದೂರಿದರು.ರಾಜೇಂದ್ರ ರಾಜಣ್ಣ ಮಾತನಾಡಿ,ಈ ಆಸ್ಪತ್ರೆಗೆ ಅಗತ್ಯವಿರುವ ಎಲ್ಲ ಮೂಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ,ತಾಲೂಕಿನ ಜನನ ಪ್ರಮಾಣದ ಬಗ್ಗೆ ಮಾಹಿತಿ ಒದಗಿಸುವಂತೆ ಕಚೇರಿ ಸಿಬ್ಬಂದಿಗೆ ಸೂಚಿಸಿದರು.
ಶಸ್ತ್ರ ಚಿಕಿತ್ಸಾ ವಿಭಾಗದ ಕೊಠಡಿಯಲ್ಲಿ ಕಳೆದ ಎrಡು ತಿಂಗಳಿಂದ ಕಿತ್ತು ಹಾಕಿರುವ ಕಿಟಕಿ ಕಂಡು ಬೇಸರ ವ್ಯಕ್ತಪಡಿಸಿ, ಸಿಸಿ ರಸ್ತೆ ,ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸ್ಥಳದಲ್ಲೇ ಇದ್ದ ಪುರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿ, ಆಸ್ಪತ್ರೆ ಆವರಣವನ್ನು ಶುಚಿಯಾಗಿ ಇಟ್ಟುಕೊಳ್ಳುವಂತೆ ಸಿಬ್ಬಂದಿಗೆ ಸೂಚಿಸಿದರು.ಹವಾ ನಿಯಂತ್ರಿತ ಮತ್ತು ವಿದ್ಯುತ್ ಪರಿಕರಗಳು ಸುಟ್ಟು ಹೋಗುತ್ತಿರುವ ಕಾರಣ ಆಸ್ಪತ್ರೆಗೆ ಬೇಕಾದ ವಿದ್ಯುತ್ ಲೋಡ್ ಒದಗಿಸುವಂತೆ ಬೆಸ್ಕಾಂ ಇಇ ಮಾಯಕ್ಕಣ್ಣ ನಾಯಕ್‌ಗೆ ಸೂಚಿಸಿದರು.
ಕೆಟ್ಟು ಹೋಗಿರುವ ಪರಿಕರಗಳನ್ನು ಬದಲಾಯಿಸಿ, ಶವಗಾರವು ಅತ್ಯಂತ ಹಳೆಯ ಕಟ್ಟವಾಗಿರುವ ಕಾರಣ ಹೊಸ ಕಟ್ಟಡ ನಿರ್ಮಿಸುವವರೆಗೂ ಶವಗಾರದ ಪಕ್ಕದಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಿಸಿ,ಶವಗಾರ ಸೇರಿದಂತೆ ಹಿಂದಿನ ಕಟ್ಟಡಗಳನ್ನು ಶೀಘ್ರ ನೆಲಸಮ ಮಾಡಿ ಆಂಬ್ಯುಲೆನ್ಸ್ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು.ಇಲ್ಲಿನ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ವೈದ್ಯರಿದ್ದು ಸೌಲಭ್ಯ ಕಲ್ಪಿಸಿಕೊಡಬೇಕು.ಪದೇ ಪದೇ ವಿದ್ಯುತ್ ಅವಘಡಗಳು ಸಂಭವಿಸುತ್ತಿವೆ. ಶೀಘ್ರ ದುರಸ್ಥಿಗೊಳಿಸಿ ಮುಂದಿನ ದಿನಗಳಲ್ಲಿ ಅನುದಾನ ಸರ್ಕಾರದಿಂದ ಬಿಡುಗಡೆಗೊಳಿಸಿ ಕೊಡುವುದಾಗಿ ತಿಳಿಸಿದರು.ವೈದ್ಯರಾದ ಜಿ.ಸಿ,ರಘುನಂದನ್,ಹೇಮಾವತಿ,ರಮೇಶ್ ,ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್,ತುಮುಲ್ ನಿರ್ದೇಶಕ ಬಿ.ನಾಗೇಶ್‌ಬಾಬು,ಪುರಸಭಾ ಸದಸ್ಯ ಮಂಜುನಾಥ್ ಆಚಾರ್,ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಘು,ಆಂಜಿನಪ್ಪ,ಪಾಂಡು ,ಎಂ.ಜಿ.ರಾಮು ,ಬಿ.ಆರ್.ಸತ್ಯನಾರಾಯಣ್ ,ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಅನೇಖರು ಇದ್ದರು.