ಛಾಯಾಗ್ರಾಹಕರಿಗೆ ಸಾಮಾಜಿಕ ಭದ್ರತೆ ನೀಡಲು ಬದ್ಧ: ಸಚಿವ ಲಾಡ್

| Published : Mar 24 2025, 12:34 AM IST

ಸಾರಾಂಶ

ಛಾಯಾಗ್ರಾಹಕರಿಗೆ ಸಾಮಾಜಿಕ ಭದ್ರತೆ, ಹೆಚ್ಚಿನ ಸೌಲಭ್ಯ, ಆರ್ಥಿಕ ನೆರವು ನೀಡಲು ಬದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಹುಬ್ಬಳ್ಳಿ: ಛಾಯಾಗ್ರಾಹಕರಿಗೆ ಸಾಮಾಜಿಕ ಭದ್ರತೆ ನೀಡುವುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಛಾಯಾಗ್ರಾಹಕರಿಗೆ ಸಾಮಾಜಿಕ ಭದ್ರತೆ, ಇನ್ನೂ ಹೆಚ್ಚಿನ ಸೌಲಭ್ಯ, ಆರ್ಥಿಕ ನೆರವು ನೀಡಲು ಬದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಇಲ್ಲಿನ ಇಂದಿರಾಗಾಜಿನ ಮನೆಯ ಆವರಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಪೋಕಸ್ ಆನ್ ನ್ಯೂಸ್ ಛಾಯಾಚಿತ್ರ ಪ್ರದರ್ಶನ ಹಾಗೂ ಪತ್ರಿಕಾ ಛಾಯಾಗ್ರಹಣ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಅಸಂಘಟಿತ ವಲಯದ ಕಾರ್ಮಿಕರ ಗುಂಪಿಗೆ ಪತ್ರಿಕಾ ವಲಯದ ಛಾಯಾಗ್ರಾಹಕರು ಹಾಗೂ ಪತ್ರಿಕಾ ವಿತರಕರನ್ನು ಈಗಾಗಲೇ ಸೇರ್ಪಡೆ ಮಾಡಲಾಗಿದೆ. ಅವರಿಗೆ ಉಚಿತ ನೋಂದಣಿ ನೀಡಿ, ಸ್ಮಾರ್ಟ್‌ಕಾರ್ಡ್‌ ವಿತರಿಸಲಾಗುತ್ತಿದೆ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಛಾಯಾಚಿತ್ರ ಹಾಗೂ ಛಾಯಾಗ್ರಾಹಕರು ನಮ್ಮ ಜೀವನದಲ್ಲಿ ಬಹಳಷ್ಟು ಪ್ರಮುಖ ಪಾತ್ರ ವಹಿಸಿವೆ. ಒಂದು ಚಿತ್ರ ಸಾಕಷ್ಟು ಅರ್ಥ ಕಲ್ಪಿಸುತ್ತದೆ. ಪೋಟೋಗ್ರಫಿ ಒಂದು ಕಲೆಯಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಈ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ಬರುತ್ತಿವೆ. ಅವುಗಳನ್ನು ಅಳವಡಿಸಿಕೊಳ್ಳಿ ಎಂದರು.

ಶಾಸಕ ಎನ್.ಎಚ್. ಕೋನರಡ್ಡಿ, ಮಹೇಶ ಟೆಂಗಿನಕಾಯಿ ಮಾತನಾಡಿ, ಛಾಯಾಗ್ರಾಹಕರಿಗೆ ಕಾರ್ಮಿಕರ ಕಾರ್ಡ್ ಕೊಡಬೇಕು. ವಸತಿ ವ್ಯವಸ್ಥೆ ಕಲ್ಪಿಸಬೇಕು. ₹5 ರಿಂದ ₹10 ಲಕ್ಷ ವಿಮೆ ಕೊಡುವಂತೆ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪತ್ರಿಕಾ ಛಾಯಾಗ್ರಹಕಿ ಶಿಪ್ರಾ ದಾಸ್, ಪೋಟೋಗ್ರಾಫಿ ಸವಾಲಿನ ಕೆಲಸ. ಇಂದು ಸ್ಮಾರ್ಟ್ ಫೋನ್‌ಗಳು ಬಂದಿರುವುದರಿಂದ ಯಾರ ಬೇಕಾದರೂ ಪೋಟೋ ತೆಗೆಯಬಹುದಾಗಿದೆ. ದೇಶದ ಇತಿಹಾಸವನ್ನು ದಾಖಲಿಸುವ ಕಾರ್ಯದಲ್ಲಿ ಛಾಯಾಚಿತ್ರಗಳ ಮಹತ್ವ ದೊಡ್ಡದು. ಛಾಯಾಚಿತ್ರಗಳು ಸಾರ್ವಜನಿಕ ಅಭಿಪ್ರಾಯ ರೂಪಿಸುತ್ತವೆ. ಈ ಹಿನ್ನೆಲೆಯಲ್ಲಿ ಜವಾಬ್ದಾರಿ ದೊಡ್ಡದಿದೆ ಎಂದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿ ಸದಸ್ಯ ಕೆ. ವೆಂಕಟೇಶ ಮಾತನಾಡಿದರು. ಹುಡಾ ಅಧ್ಯಕ್ಷ ಶಾಕೀರ ಸನದಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ, ಜಿಲ್ಲಾಧ್ಯಕ್ಷ ಲೋಚನೇಶ ಹೂಗಾರ ಸೇರಿದಂತೆ ಹಲವರಿದ್ದರು. ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ ಎಂ. ಸ್ವಾಗತಿಸಿದರು. ಅಕಾಡಮಿ ಸದಸ್ಯ ಅಬ್ಬಾಸ್ ಮುಲ್ಲಾ ವಂದಿಸಿದರು.