ಸರ್ಕಾರಿ ಆಸ್ಪತ್ರೆಗಳಿಗೆ ಸೌಲಭ್ಯ ಕಲ್ಪಿಸಲು ಬದ್ಧ

| Published : Mar 07 2024, 01:50 AM IST / Updated: Mar 07 2024, 01:51 AM IST

ಸಾರಾಂಶ

ಪ್ರಸ್ತುತ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಮತ್ತು ರೇಡಿಯೋಲಜಿಸ್ಟ್ ನುರಿತ ವೈದ್ಯರ ಕೊರತೆ ಇದ್ದು ನೇರ ಸಂದರ್ಶನದ ಮೂಲಕ ಗುತ್ತಿಗೆ ಆಧಾರದ ಮೇಲೆ ಅತಿ ಶೀಘ್ರದಲ್ಲಿ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ನೇಮಕ ಮಾಡಲಾಗುವುದು

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸುಭದ್ರ ಬಲಿಷ್ಠ ರಾಜ್ಯ ನಿರ್ಮಾಣವಾಗಬೇಕಾದರೆ ಅಲ್ಲಿ ಮುಖ್ಯವಾಗಿ ಆರೋಗ್ಯವಂತ ಮಾನವ ಸಂಪನ್ಮೂಲ ಅತ್ಯಗತ್ಯ, ಈ ಹಿನ್ನಲೆಯಲ್ಲಿ ರಾಜ್ಯದ್ಯಂತ ಸುಸಜ್ಜಿತವಾದ ಆಸ್ಪತ್ರೆಗಳ ಸೌಲಭ್ಯಗಳನ್ನು ಒದಗಿಸಿಕೊಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 12 ಹಾಸಿಗೆಗಳ ಐಸೋಲೇಶನ್ ವಾರ್ಡ್ ಹಾಗೂ ಡಯಾಲಿಸಿಸ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಜನರ ಆರೋಗ್ಯವನ್ನು ರಕ್ಷಿಸಿಕೊಡುವ ನಿಟ್ಟಿನಲ್ಲಿ ಬದ್ಧವಾಗಿದೆ ಎಂದರು.

ಅಸ್ಪತ್ರೆ ನಿರ್ಮಾಣ, ಸೌಲಭ್ಯ

ಈ ಹಿನ್ನೆಲೆಯಲ್ಲಿ ಸುಸಜ್ಜಿತವಾದ ಆಸ್ಪತ್ರೆಗಳ ನಿರ್ಮಾಣ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇದರ ಮುಂದುವರೆದ ಭಾಗವಾಗಿ ಪಟ್ಟಣದಲ್ಲಿ 12 ಹಾಸಿಗೆಗಳ ಒಳಗೊಂಡ ಕಟ್ಟಡ ಮತ್ತು ಐಸೋಲೇಶನ್ ವಾರ್ಡನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಪ್ರಸ್ತುತ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಮತ್ತು ರೇಡಿಯೋಲಜಿಸ್ಟ್ ನುರಿತ ವೈದ್ಯರ ಕೊರತೆ ಇದ್ದು ನೇರ ಸಂದರ್ಶನದ ಮೂಲಕ ಗುತ್ತಿಗೆ ಆಧಾರದ ಮೇಲೆ ಅತಿ ಶೀಘ್ರದಲ್ಲಿ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ನೇಮಕ ಮಾಡಲಾಗುವುದು, ಒಟ್ಟಾರೆಯಾಗಿ ಆರೋಗ್ಯವಂತ ಸದೃಢ ಮಾನವ ಸಂಪನ್ಮೂಲ ಕೃಢೀಕರಣದ ಮೂಲಕ ರಾಜ್ಯವನ್ನು ಅನಾರೋಗ್ಯ ಮುಕ್ತವನ್ನಾಗಿಸುವ ಗುರಿ ನಮ್ಮದಾಗಿದೆ ಎಂದರು.

ಅಭಿವೃದ್ಧಿ ಪಥದತ್ತ ಬಂಗಾರಪೇಟೆ

ಎಸ್ ಎನ್ ನಾರಾಯಣಸ್ವಾಮಿ ಶಾಸಕರಾದ ನಂತರ ಬಂಗಾರಪೇಟೆ ತಾಲೂಕು ಅಭಿವೃದ್ಧಿಯ ಪಥದತ್ತ ಸಾಗಿದೆ ಶಾಸಕರು ಪದೇಪದೇ ಸರ್ಕಾರಿ ಆಸ್ಪತ್ರೆಯ ಬಗ್ಗೆ ಚರ್ಚೆ ನಡೆಸುತ್ತಿದ್ದರು, ಈ ಹಿನ್ನಲೆಯಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಒಳಗೊಂಡ ಆಸ್ಪತ್ರೆ ನಿರ್ಮಾಣವಾಗಿದೆ, ಇದರೊಟ್ಟಿಗೆ ಇಂದು ಐಸೋಲೇಶನ್ ವಾರ್ಡ್ ಲೋಕಾರ್ಪಣೆಯಾಗಿದ್ದು ಶಾಸಕರ ಸೇವಾ ಮನೋಭಾವದ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್ ಎನ್ ನಾರಾಯಣಸ್ವಾಮಿ ಮಾತನಾಡಿ, ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಹುದಿನದ ಬೇಡಿಕೆಯಾಗಿದ್ದ ಡಯಾಲಿಸಿಸ್ ಸೆಂಟರ್ ಮತ್ತು ಐಸೋಲೇಶನ್ ವಾರ್ಡ್ ಗಳನ್ನು ಒದಗಿಸಿಕೊಟ್ಟು ಸಹಕರಿಸಿದಂತ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು ತಿಳಿಸುವುದಾಗಿ ಹೇಳಿದರು.

ಆಸ್ಪತ್ರೆಗೆ ಅತ್ಯಾಧುನಿಕ ಸೌಲಭ್ಯ

ಸಾರ್ವಜನಿಕ ಆಸ್ಪತ್ರೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದ್ದು ನುರಿತ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶಿಷ್ಟವಾಗಿ 1050 ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡುವ ಸ್ವಂತ ಸಾಮರ್ಥ್ಯದ ಘಟಕವನ್ನು ಹೊಂದಿದ್ದು ಪ್ರತಿನಿತ್ಯ1500ಕ್ಕೂ ಹೆಚ್ಚು ಹೊರರೋಗಿಗಳು ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ, ತಹಸಿಲ್ದಾರ್ ರಶ್ಮಿ, ಡಿಸಿಸಿ ಬ್ಯಾಂಕ್ ನಿರ್ಧೇಶಕ ಪಿಚ್ಚಹಳ್ಳಿ ಗೋವಿಂದರಾಜು, ತಾಲೂಕು ವೈದ್ಯಾಧಿಕಾರಿ ಪ್ರಿಯದರ್ಶಿನಿ, ಡಾ.ಎ ಎಂ ಭಾರತಿ, ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ, ಸಿ ಓ ಮೀನಾಕ್ಷಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಾರ್ಥಸಾರಥಿ ಮತ್ತು ಚಂದು, ಬೂದಿಕೋಟೆ ನಾಗರಾಜು, ಪುರಸಭಾ ಸದಸ್ಯರಾದ ಎಂ.ಮಂಜುನಾಥ್, ಎಸ್ ವೆಂಕಟೇಶ್, ಗೋವಿಂದ, ಶಾರದಾ ವಿವೇಕಾನಂದ, ಶಫಿ, ಶಂಶುದ್ದೀನ್ ಬಾಬು, ಮುಖಂಡ ಅ.ನಾ.ಹರೀಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಂ. ಹರೀಶ್, ಇತರರು ಇದ್ದರು.