ಸಾರಾಂಶ
ಚಳ್ಳಕೆರೆ: ನಗರಸಭೆ ಮುಂಭಾಗದಲ್ಲಿ ಕಳೆದ ಮೂರು ದಿನಗಳಿಂದ ಮಾದಿಗ ಸಮುದಾಯದ ಆಸ್ತಿ ರಕ್ಷಣೆಗಾಗಿ ದಲಿತ ಮುಖಂಡ, ಜಿಲ್ಲಾ ಮಾದಿಗ ಮಹಾಸಭಾದ ಅಧ್ಯಕ್ಷ ಎಂ.ಶಿವಮೂರ್ತಿ ನೇತೃತ್ವದಲ್ಲಿ ನಡೆಸಲಾಗುತ್ತಿದ್ದ ಧರಣಿಯನ್ನು ಶಾಸಕ ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನೀಡಿದ ಭರವಸೆ ಮೇರೆಗೆ ವಾಪಾಸ್ ಪಡೆಯಲಾಗಿದೆ.
ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ಕ್ಷೇತ್ರದಲ್ಲಿ ಎಲ್ಲಾ ಸಮುದಾಯಗಳು ಸಮಾನತೆಯಿಂದ ಬದುಕಬೇಕಿದೆ. ವಿಶೇಷವಾಗಿ ನಾನು ಯಾವುದೇ ಸಮುದಾಯವನ್ನು ನಿರ್ಲಕ್ಷ್ಯಿಸುವುದಿಲ್ಲ ಎಂದರು.ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಹೋರಾಟದ ಬಗ್ಗೆ ದಲಿತ ಸಮುದಾಯದ ಮುಖಂಡರು, ಅಧಿಕಾರಿ ವರ್ಗ ಮಾಹಿತಿ ನೀಡಿದೆ. ಈ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಸಬೇಕೆಂಬುವುದು ನನ್ನ ಉದ್ದೇಶ. ಕಳೆದ ಹಲವಾರು ವರ್ಷಗಳಿಂದ ಈ ಸಮಸ್ಯೆಯ ಬಗ್ಗೆ ಹೋರಾಟ ನಡೆಯುತ್ತಲೇ ಇದೆ. ಮಾದಿಗ ಸಮುದಾಯದ ಆಸ್ತಿ ಬಗ್ಗೆ ಇರುವ ಸಮಸ್ಯೆಯನ್ನು ನ್ಯಾಯಸಮ್ಮತವಾಗಿ ತೀರ್ಮಾನಗೊಳ್ಳಲು ಈಗಾಗಲೇ ಜಿಲ್ಲಾಧಿಕಾರಿ, ತಹಸೀಲ್ದಾರ್ ಮತ್ತು ಪೌರಾಯುಕ್ತರಿಗೆ ಸೂಚನೆ ನೀಡಿದ್ದೇನೆ. ದಾಖಲಾತಿಗಳ ಪರಿಶೀಲನೆ ಬಳಿಕ ನಿಮಗೆ ಸ್ವಷ್ಟವಾದ ಚಿತ್ರಣ ಸಿಗಲಿದೆ ಎಂದು ತಿಳಿಸಿದರು.
ನಿಮ್ಮ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ನಾನು ಸದಾಬದ್ಧ. ಇಲ್ಲಿ ಬೇರೆ ಯಾವುದೇ ಸಮಾಜವನ್ನು ಹತ್ತಿಕ್ಕುವ ಪ್ರಶ್ನೆ ಇಲ್ಲ. ನ್ಯಾಯಾಲಯದ ತೀರ್ಮಾನವನ್ನು ನಾವೆಲ್ಲರೂ ಗೌರವಿಸೋಣ. ಮುಂದಿನ ದಿನಗಳಲ್ಲಿ ಚರ್ಮದ ಮಂಡಿ, ಚರ್ಮಮಾರಾಟ ಮಳಿಗೆ ಕಾರ್ಯಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಮಾದಿಗ ಸಮುದಾಯದ ಆಸ್ತಿ ರಕ್ಷಣೆಗಾಗಿ ಹೋರಾಟ ನಡೆಸುತ್ತಿದ್ದೀರಿ, ಈಗಾಗಲೇ ಶಾಸಕರ ಮಾರ್ಗದರ್ಶನದಂತೆ ತಹಸೀಲ್ದಾರ್ ಮತ್ತು ಪೌರಾಯುಕ್ತರೊಂದಿಗೆ ದಾಖಲಾತಿಯ ಪರಿಶೀಲನೆ ನಡೆಸಿದ್ದೇನೆ. ಯಾವುದೇ ಕಾರಣಕ್ಕೂ ನಿಮ್ಮ ಸಮಾಜಕ್ಕೆ ಅನ್ಯಾಯವಾಗದಂತೆ ಜಾಗ್ರತೆ ವಹಿಸಲಾಗುವುದು. ನಾವೆಲ್ಲರೂ ಕಾನೂನು ಪಾಲಕರಾಗಬೇಕು. ದಾಖಲಾತಿಗಳ ಆಧಾರದ ಮೇಲೆ ನ್ಯಾಯಸಮ್ಮತ ತೀರ್ಮಾನ ನೀಡಲು ಸಾಧ್ಯ. ಧರಣಿಯನ್ನು ಕೈಬಿಟ್ಟು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಎಂದು ವಿನಂತಿಸಿದರು.
ತಹಸೀಲ್ದಾರ್ ರೇಹಾನ್‌ಪಾಷ ಮಾತನಾಡಿ, ಚರ್ಮದ ಮಂಡಿಗೆ ನಾಲ್ಕು ಎಕರೆ ಜಾಗವಿರುವುದಾಗಿ ಸಮಾಜದ ಬಂಧುಗಳು ತಿಳಿಸಿದ್ದಾರೆ. ವಾಸ್ತವಾಗಿ ಕೇವಲ ಎರಡು ಎಕರೆ ಇದೆ. ಈ ಬಗ್ಗೆ ಬೇರೆಕೋಮಿನ ಜನರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ತೀರ್ಮಾನ ಕೈಗೊಳ್ಳಲು ಬರುವುದಿಲ್ಲ ಎಂದರು.ಜಿಲ್ಲಾ ಮಾದಿಗ ಮಹಾಸಭಾದ ಅಧ್ಯಕ್ಷ ಎಂ.ಶಿವಮೂರ್ತಿ ಮಾತನಾಡಿ, ಚಳ್ಳಕೆರೆ ನಗರದಲ್ಲಿ ಬೇರೆ ಎಲ್ಲಾ ಸಮುದಾಯಗಳು ತಮ್ಮದೇಯಾದ ಆಸ್ತಿ ಮತ್ತು ಅಸ್ಥಿತ್ವವನ್ನು ಹೊಂದಿವೆ. ಕೆಲವು ಸಮುದಾಯಗಳು ಕಾಂಪ್ಲೆಕ್ಸ್ ಗಳನ್ನು ನಿರ್ಮಿಸಿಕೊಂಡಿವೆ. ಅದು ನಮ್ಮ ಪೂರ್ವಜನರು ೧೯೫೯ರಲ್ಲಿ ರಿ.ಸರ್ವೆ, ನಂ ೧೮೦ರಲ್ಲಿ ನಾಲ್ಕು ಎಕರೆ, ಬೆಂಗಳೂರು ರಸ್ತೆಯ ಈದ್ಗಾ ಮೈದಾನದ ಪಕ್ಕ ೩೦ ಗುಂಟೆ ಜಮೀನನ್ನು ೫ ಸಾವಿರ ಪಾವತಿಸಿ ಪಡೆದಿದ್ದಾರೆ. ಸುಮಾರು ೭೦ ಸಾವಿರ ಹಣವನ್ನು ನಗರಸಭೆಗೆ ಪಾವತಿಸಲಾಗಿದೆ, ಆದರೆ ನಗರಸಭೆ ಅಧಿಕಾರಿಗಳು ದಾಖಲಾತಿಗಳನ್ನು ಸೇರಿಸಿ ಇ-ಸ್ವತ್ತು ಕೊಡಲು ಸಿದ್ಧರಿಲ್ಲ. ಪೌರಾಯುಕ್ತ ಜಗರೆಡ್ಡಿ ನಿರ್ಲಕ್ಷ್ಯದ ಮಾತುಗಳನ್ನು ಆಡುತ್ತಾರೆಂದು ದೂರಿದರು.
ಇದೇ ಸಂದರ್ಭದಲ್ಲಿ ಶಾಸಕರ ಮಾತಿಗೆ ಮನ್ನಣೆ ನೀಡಿ ಧರಣಿಯನ್ನು ವಾಪಸ್ ಪಡೆಯುವುದಾಗಿ ಎಂ.ಶಿವಮೂರ್ತಿ ತಿಳಿಸಿದರು.ಪೌರಾಯುಕ್ತರ ಜಗರೆಡ್ಡಿ, ವ್ಯವಸ್ಥಾಪಕ ಲಿಂಗರಾಜು, ಕಂದಾಯಾಧಿಕಾರಿ ತಿಪ್ಪೇಸ್ವಾಮಿ, ಗ್ರಾಮ ಲೆಕ್ಕಿಗ ಪ್ರಕಾಶ್, ನಗರಸಭೆ ಕಂದಾಯಾಧಿಕಾರಿ ಸತೀಶ್, ಭೂತಯ್ಯ, ಚೇತನ್, ನಗರಸಭಾ ಸದಸ್ಯರಾದ ಕೆ.ವೀರಭದ್ರಪ್ಪ, ಎಂ.ಜೆ.ರಾಘವೇಂದ್ರ, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ, ನಾಮಿನಿ ಸದಸ್ಯರಾದ ಬಡಗಿಪಾಪಣ್ಣ, ಆರ್.ವೀರಭದ್ರಪ್ಪ, ದಲಿತ ಮುಖಂಡ ಕೃಷ್ಣಮೂರ್ತಿ, ದ್ಯಾವರನಹಳ್ಳಿ ತಿಪ್ಪೇಸ್ವಾಮಿ, ಹೊಟ್ಟೆಪ್ಪನಹಳ್ಳಿ ಕಾಂತರಾಜು, ವೆಂಕಟೇಶ್ , ಚಂದ್ರು, ಚನ್ನಕೇಶವಮೂರ್ತಿ, ಚನ್ನಿಗರಾಯ, ಎಚ್.ಪ್ರಕಾಶ್, ಭೀಮನಕೆರೆಶಿವಮೂರ್ತಿ, ಪಾಪಣ್ಣ ಮುಂತಾದವರು ಇದ್ದರು.