ಮಲಪ್ರಭಾ ಕಾರ್ಖಾನೆ ಅಭಿವೃದ್ಧಿಗೆ ಬದ್ಧ

| Published : Oct 11 2025, 01:00 AM IST

ಸಾರಾಂಶ

ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ, ಉಪಾಧ್ಯಕ್ಷರಾಗಿ ಶಿವನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಷ್ಟದಲ್ಲಿರುವ ಕಾರ್ಖಾನೆ ಪುನಶ್ಚೇತನ ಮಾಡುವುದೊಂದೇ ನಮ್ಮ ಗುರಿ. ಪ್ರಸಕ್ತ ಸಾಲಿನ ಹಂಗಾಮಿನಲ್ಲಿ ೪ ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ, ಕಾರ್ಖಾನೆ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಕಾರ್ಖಾನೆ ನೂತನ ಅಧ್ಯಕ್ಷ, ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಭರವಸೆ ನೀಡಿದರು.

ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈಗಾಗಲೇ 250 ಕಬ್ಬು ಕಟಾವು ತಂಡಗಳನ್ನು ಕಾಯ್ದಿರಿಸಿದ್ದೇವೆ. ರೈತರು ಪೂರೈಸುವ ಕಬ್ಬಿಗೆ ಸಮಯಕ್ಕೆ ಸರಿಯಾಗಿ ಯೋಗ್ಯದರ ನೀಡುತ್ತೇವೆ ಎಂದು ತಿಳಿಸಿದರು.

ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಕಾರ್ಖಾನೆ ಉಳಿಸಿ-ಬೆಳೆಸುತ್ತಾರೆಂಬ ನಂಬಿಕೆಯಿಂದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಪುನಶ್ಚೇತನ ಪೆನಲ್‌ಗೆ ರೈತರು ಬೆಂಬಲಿಸಿ, ಎಲ್ಲ ೧೫ ಜನರನ್ನು ಆರಿಸಿ ತಂದಿದ್ದಾರೆ. ರೈತರು ಇಟ್ಟ ನಂಬಿಕೆಗೆ ದ್ರೋಹ ಆಗದಂತೆ ಕಾರ್ಖಾನೆ ಅಭಿವೃದ್ಧಿ ಪಡಿಸುವ ಜವಾಬ್ದಾರಿ ಎಲ್ಲ 15 ಜನ ನಿರ್ದೇಶಕರ ಮೇಲಿದೆ. ಕಾರ್ಖಾನೆ ಅಭಿವೃದ್ಧಿ ಕನಸು ಹೊತ್ತು ಬಂದವರು ಇವರು. ಪಾರದರ್ಶಕ ಆಡಳಿತದ ಮೂಲಕ ನೂತನ ದಿಗ್ದರ್ಶಕ ಮಂಡಳಿ ಕಾರ್ಖಾನೆಗೆ ಮೊದಲಿನ ಗತವೈಭವ ಮರಳಿಸಲಿದೆ ಎಂದು ತಿಳಿಸಿದರು.

ಕಾರ್ಖಾನೆ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಮೋಹನ ಹಿರೇಮಠ ಮಾತನಾಡಿದರು. ನಿರ್ದೇಶಕರಾದ ಫಕ್ಕೀರಪ್ಪ ಸಕ್ರೆಣ್ಣವರ, ಶಂಕರೆಪ್ಪ ಹೊಳಿ, ಶ್ರೀಕಾಂತ ಇಟಗಿ, ಶಂಕರ ಕಿಲ್ಲೇದಾರ, ಶ್ರೀಶೈಲ ತುರಮರಿ, ರಾಮನಗೌಡ ಪಾಟೀಲ, ರಘು ಪಾಟೀಲ, ಶಿವಪುತ್ರಪ್ಪ ಮರಡಿ, ಸುರೇಶ ಹುಲಿಕಟ್ಟಿ, ಲಲಿತಾ ಪಾಟೀಲ, ಸುನೀತಾ ಲಂಗೋಟಿ, ಬಳಪ್ಪ ಪೂಜಾರ, ಭರಮಪ್ಪ ಶಿಗೆಹಳ್ಳಿ ಹಾಗೂ ರೈತರು, ಕಾರ್ಮಿಕರು, ಅಭಿಮಾನಿಗಳು ಇದ್ದರು. ದಿಗ್ದರ್ಶಕ ಮಂಡಳಿಯ ಎಲ್ಲರನ್ನೂ ಸನ್ಮಾನಿಸಲಾಯಿತು.

ನಮ್ಮ ಮೇಲೆ ಸವಾಲುಗಳ ಗುಡ್ಡವೇ ಇದೆ. ಎಲ್ಲ 15 ಜನ ನಿರ್ದೇಶಕರು ಸಮಾನರಾಗಿ ಶ್ರಮಿಸುತ್ತೇವೆ. ದೀಪಾವಳಿಗೆ ಕಾರ್ಖಾನೆ ಹಂಗಾಮು ಆರಂಭಿಸುತ್ತೇವೆ. ಕಾರ್ಖಾನೆ ಸಿದ್ಧಗೊಳಿಸಲು ಕಾರ್ಮಿಕರೆಲ್ಲ ಶ್ರಮಿಸುತ್ತಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಠ್ಠಲ ಹಲಗೇಕರ್ ಮಾರ್ಗದರ್ಶನದಲ್ಲಿ ಕಾರ್ಖಾನೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತೇವೆ.

ಚನ್ನರಾಜ ಹಟ್ಟಿಹೊಳಿ, ನೂತನ ಅಧ್ಯಕ್ಷ, ಎಂಎಲ್ಸಿ.

ಎಂಎಲ್ಸಿ ಚನ್ನರಾಜ ಅಧ್ಯಕ್ಷ, ಶಿವನಗೌಡ ಉಪಾಧ್ಯಕ್ಷ

ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ, ಉಪಾಧ್ಯಕ್ಷರಾಗಿ ಶಿವನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾದರು. ಕಾರ್ಖಾನೆ ಕಾರ್ಯಾಲಯದಲ್ಲಿ ಗುರುವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಎರಡೂ ಸ್ಥಾನಕ್ಕೆ ಒಂದೊಂದು ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಗಳಾಗಿ ಪ್ರಭಾವತಿ ಫಕ್ಕೀರಪುರ ಕಾರ್ಯನಿರ್ವಹಿಸಿದರು. ಕಳೆದ ಸೆ.28 ರಂದು ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕರ 15 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ನೇತೃತ್ವದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಪುನಶ್ಚೇತನ ಪೆನಲ್ ಎಲ್ಲ 15 ಜನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.