ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಅತ್ಯುತ್ತಮವಾದ ಬಡಾವಣೆಯನ್ನು ನಿರ್ಮಿಸಿರುವ ರಾಜ್ಯ ಮಾಂಡವ್ಯ ನಗರ ಗೃಹ ನಿರ್ಮಾಣ ಸಹಕಾರ ಸಂಘದ ಅಭಿವೃದ್ಧಿಗೆ ಸಂಪೂರ್ಣ ಬದ್ಧನಿದ್ದೇನೆ ಎಂದು ಶಾಸಕ ಪಿ.ರವಿಕುಮಾರ್ ಭರವಸೆ ನೀಡಿದರು.ಇಲ್ಲಿನ ಹೊಸಹಳ್ಳಿ ವೃತ್ತದಲ್ಲಿರುವ ಸಂಘದ ಕಚೇರಿಗೆ ಬುಧವಾರ ಭೇಟಿ ನೀಡಿ ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ.ಸಿದ್ದರಾಜು ಅವರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಹೊಸ ಬಡಾವಣೆಗಳ ನಿರ್ಮಾಣ ವೇಳೆ ವಿಶಾಲ ರಸ್ತೆಗಳು, ಅತ್ಯಾಧುನಿಕ ಸೌಲಭ್ಯಗಳೊಂದಿಗೆ ವೈಜ್ಞಾನಿಕವಾಗಿ ರಚನೆಯಾದಾಗ ನಗರದ ಸೌಂದರ್ಯ ಹೆಚ್ಚುತ್ತದೆ. ತಾಂತ್ರಿಕತೆ ಬೆಳೆದಂತೆಲ್ಲಾ ಅದನ್ನು ಬಡಾವಣೆಗಳ ನಿರ್ಮಾಣದಲ್ಲಿ ಅಳವಡಿಸಿಕೊಳ್ಳಬೇಕು. ಸೋಲಾರ ವಿದ್ಯುತ್, ಅಂಡರ್‌ಗ್ರೌಂಡ್ ಎಲೆಕ್ಟ್ರಿಕ್ ಕೇಬಲ್ ವ್ಯವಸ್ಥೆ, ಕೊಳಚೆ ನೀರು ನಿರ್ವಹಣಾ ಘಟಕ, ಗಿಡಮರಗಳೊಂದಿಗೆ ಉತ್ತಮ ಪರಿಸರವನ್ನು ಸೃಷ್ಟಿಸಿಕೊಂಡಾಗ ಬಡಾವಣೆಗಳ ಅಂದ ಹೆಚ್ಚುವುದಲ್ಲದೆ, ನಗರದ ಬೆಳವಣಿಗೆಯೂ ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ.ಸಿದ್ದರಾಜು ಅವರು, ಸಂಘ ಬೆಳೆದು ಬಂದ ಹಾದಿ, ಮಾಂಡವ್ಯ ನಗರ ಬಡಾವಣೆ ನಿರ್ಮಾಣ ವೇಳೆ ಎದುರಾದ ಸವಾಲುಗಳು, ಕಾನೂನು ಹೋರಾಟ, ಅದರಲ್ಲಿ ಸಿಕ್ಕ ಗೆಲುವು ಎಲ್ಲವನ್ನೂ ಶಾಸಕರಿಗೆ ಮನದಟ್ಟು ಮಾಡಿಕೊಟ್ಟರು.ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ಸಂಘದ ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷ ನಾರಾಯಣ, ತಿಮ್ಮೇಗೌಡ, ಡಾ.ಅರುಣಾನಂದ, ಡಾ.ವೈ.ಎಂ.ಶಿವರಾಮು, ನಾಗೇಶ, ಕಾಳಮ್ಮನ ನಾಗೇಶ, ನಗರಸಭೆ ಸದಸ್ಯರಾದ ಶ್ರೀಧರ್, ಹರೀಶ್‌ಕುಮಾರ್ ಇತರರಿದ್ದರು.
ಹುಲ್ಲಹಳ್ಳಿ, ಗಣಿಗ ಗ್ರಾಮದಲ್ಲಿ ಕಾಮಗಾರಿಗೆ ಚಾಲನೆಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಬಸರಾಳು ಹೋಬಳಿಯ ಹುಲ್ಲಹಳ್ಳಿ ಹಾಗೂ ಗಣಿಗ ಗ್ರಾಮದಲ್ಲಿ 2.12 ಕೋಟಿ ರು. ವೆಚ್ಚದ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್ ಬುಧವಾರ ಭೂಮಿಪೂಜೆ ನೆರವೇರಿಸಿದರು.ನಂತರ ಮಾತನಾಡಿ, ಹುಲ್ಲಹಳ್ಳಿಯಿಂದ ನಾಯಕನಹಳ್ಳಿಗೆ ಹೋಗುವ ರಸ್ತೆ ಅಭಿವೃದ್ಧಿಗೆ 1.12 ಕೋಟಿ ರು. ಮತ್ತು ಗಣಿಗ ಗ್ರಾಮದ ರಸ್ತೆ ಅಭಿವೃದ್ಧಿಗೆ 1 ಕೋಟಿ ರು. ಅಂದಾಜು ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ್ದೇನೆ. ಹುಲ್ಲಹಳ್ಳಿಯಲ್ಲಿ ಹಲವು ವರ್ಷಗಳಿಂದ ರಸ್ತೆ ಡಾಂಬರು ಕಾಣದೆ ಗ್ರಾಮದ ಜನರು ಹೈರಾಣಾಗಿದ್ದರು. ಅದನ್ನು ಮನಗಂಡು ರಸ್ತೆ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಭೋಜೇಗೌಡ, ಪ್ರದೀಪ್, ಕೃಷ್ಣೇಗೌಡ, ಮಣಿ ಸೇರಿದಂತೆ ಹಲವರಿದ್ದರು.