ಸಣ್ಣ ಸಮುದಾಯಗಳಿಗೂ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಅನುದಾನ ಮಂಜೂರು
ಹನುಮಸಾಗರ: ಹೂಗಾರ ಹಾಗೂ ಮಡಿವಾಳ ಸಮುದಾಯದವರು ಸದಾ ಆತ್ಮೀಯ ಬಾಂಧವ್ಯ ಹೊಂದಿದ್ದು, ಅವರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ನಿರಂತರವಾಗಿ ಮಾಡುತ್ತಿದ್ದೇನೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಬುಧವಾರ ಹೂಗಾರ ಮಾದಯ್ಯ ಸಮುದಾಯ ಭವನ ಹಾಗೂ ಮಡಿವಾಳರ ಮಾಚಿದೇವರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ 2025-26ನೇ ಸಾಲಿನ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆ (ಸಿಎಂಯ್ಡಿಪಿ) ಅನುದಾನದಡಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಸಮಾಜದ ಪ್ರತಿಯೊಂದು ವರ್ಗದ ಅಭಿವೃದ್ಧಿಯೇ ಸರ್ಕಾರದ ಆದ್ಯತೆಯಾಗಿದ್ದು, ಸಣ್ಣ ಸಮುದಾಯಗಳಿಗೂ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಅನುದಾನ ಮಂಜೂರು ಮಾಡಲಾಗಿದೆ. ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ತಲಾ ₹10 ಲಕ್ಷದಂತೆ ಒಟ್ಟು ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಸಮುದಾಯ ಭವನ ಆಯಾ ಸಮಾಜದ ಜನರಿಗೆ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ, ಸಾಮಾಜಿಕ ಸಮಾರಂಭ ಹಾಗೂ ಸಮುದಾಯದ ವಿವಿಧ ಚಟುವಟಿಕೆ ನಡೆಸಲು ಅನುಕೂಲಕರ ಕೇಂದ್ರಗಳಾಗಿ ರೂಪುಗೊಳ್ಳಲಿವೆ. ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಈ ಕಾಮಗಾರಿ ಮಹತ್ವದ ಮೈಲಿಗಲ್ಲಾಗಿದೆ. ಸಮಾಜದ ಅಭಿವೃದ್ಧಿಗೆ ಅಗತ್ಯವಾದ ಕಟ್ಟಡ, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ತಮ್ಮ ಬದ್ಧತೆ ಮುಂದುವರಿಯಲಿದೆ.
ಸಮುದಾಯ ಭವನ ನಿರ್ಮಾಣವಾದ ಬಳಿಕ ವಿವಿಧ ಸಮಾಜಮುಖಿ ಕಾರ್ಯಕ್ರಮ, ಸಭೆ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆ ಒಂದೇ ಸೂರಿನಡಿ ನಡೆಸಲು ಅನುಕೂಲವಾಗಲಿದೆ. ಇದರಿಂದ ಗ್ರಾಮದಲ್ಲಿ ಸಾಮಾಜಿಕ ಒಗ್ಗಟ್ಟು ಮತ್ತಷ್ಟು ಬಲಗೊಳ್ಳಲಿದೆ ಎಂದರು.ಕಾರ್ಯಕ್ರಮದಲ್ಲಿ ಮಡಿವಾಳರ ತಾಲೂಕಾಧ್ಯಕ್ಷ ಅಶೋಕ ಮಡಿವಾಳರ, ರಾಜ್ಯ ಉಪಾಧ್ಯಕ್ಷ ದುರಗೇಶ ಮಡಿವಾಳರ, ಬಸವರಾಜ ಹಳ್ಳೂರ, ಸುಚಪ್ಪ ದೇವರಮನಿ, ಮಾಜಿ ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಸಂಕ್ರಪ್ಪ ಬಿಂಗಿ, ತಿಮ್ಮನಗೌಡ ಪೊಲೀಸ್ ಪಾಟೀಲ, ಮಾರುತಿಸಾ ರಂಗ್ರೇಜ, ಕೆಪಿಎಸ್ ಅಧ್ಯಕ್ಷ ಬಸವರಾಜ ದೇವಣ್ಣನವರ, ನಾಗರಾಜ ಹಕ್ಕಿ, ಮರೇಗೌಡ ಬೋದುರ, ಹುಲ್ಲಪ್ಪ ಗಡೇಕಾರ, ಯಮನೂರ ಮಡಿವಾಳರ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು, ಜನಪ್ರತಿನಿಧಿ ಹಾಗೂ ಗ್ರಾಮಸ್ಥರು ಇತರರು ಇದ್ದರು.