ಚಿಕ್ಕಬಳ್ಳಾಪುರ ಕೋಲಾರ ಸೇರಿದಂತೆ ಬಯಲು ಸೀಮೆಗಳ ಜಿಲ್ಲೆಗಳಿಗೆ ನೀರಾವರಿ ಯೋಜನೆಗಳ ಅನುಷ್ಠಾನದ ಜೊತೆಗೆ ಯುವ ಜನತೆಗೆ ಉದ್ಯೋಗ ಸೃಷ್ಠಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ನಮ್ಮ ಸರ್ಕಾರ ಹೆಚ್ಚಿನ ಒತ್ತು ನೀಡಲಾಗುವುದು.

ಗಡದಿಂ ದೇವಾಲಯದಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿಕೆ

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ರಾಜ್ಯದ ರೈತರ ಸಂಕಷ್ಟಗಳಿಗೆ ನೆರವಾಗುವಂತಹ ನೀರಾವರಿ ಯೋಜನೆಗಳನ್ನು ಅತೀ ಶೀಘ್ರದಲ್ಲಿಯೇ ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಡಿ,ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಮಾಜಿ ಸಂಸದ ಹಾಗೂ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದರು.

ಪಟ್ಟಣಕ್ಕೆ ಸಮೀಪದ ದೇವರಗುಡಿಪಲ್ಲಿ (ಗಡದಿಂ) ಶ್ರೀ ಲಕ್ಷ್ಮೀವೆಂಕಟರವಣ ಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರ ನೇತೃತ್ವದಲ್ಲಿ ಎಸ್.ಎನ್.ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್‌ ವತಿಯಿಂದ ಸೆ. 26ರ ಬುದುವಾರ ನಡೆದ 23ನೇ ಉಚಿತ ಸಾಮೂಹಿಕ ವಿವಾಹ ಹಾಗೂ ತಿರುಪತಿ ತಿರುಮಲ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಚಿಕ್ಕಬಳ್ಳಾಪುರ ಕೋಲಾರ ಸೇರಿದಂತೆ ಬಯಲು ಸೀಮೆಗಳ ಜಿಲ್ಲೆಗಳಿಗೆ ನೀರಾವರಿ ಯೋಜನೆಗಳ ಅನುಷ್ಠಾನದ ಜೊತೆಗೆ ಯುವ ಜನತೆಗೆ ಉದ್ಯೋಗ ಸೃಷ್ಠಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ನಮ್ಮ ಸರ್ಕಾರ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ಇಂದು ನಡೆದ ಸಾಮೂಹಿಕ ವಿವಾಹಗಳಲ್ಲಿ ನವ ದಾಂಪತ್ಯಕ್ಕೆ ಕಾಲಿಟ್ಟ ನವ ದಂಪತಿಗೆ ಜೀವನೋಪಾಯಕ್ಕಾಗಿ ಸೀಮೆ ಹಸುವನ್ನು ಸುಬ್ಬಾರೆಡ್ಡಿರವರು ನೀಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನೀವು ಹಸುವನ್ನು ಮಾರಬೇಡಿ. ನಿಮ್ಮ ಜೀವನದ ಭದ್ರತೆ ನಿಮ್ಮ ಕೈಯಲ್ಲಿದೆ. ರೈತರ ಬದುಕು ಕ್ಷೀರ ಕ್ಷೇತ್ರದಲ್ಲಿದೆ. ಕ್ಷೀರ ಕ್ಷೇತ್ರವನ್ನು ಉಳಿಸಿ ಬೆಳಸುವುದು ಪ್ರತಿಯೊಬ್ಬ ರೈತರ ಕರ್ತವ್ಯವಾಗಿದೆ. ನಂದಿನಿ ಹಾಲು, ಮೊಸರು, ತುಪ್ಪ ಸೇರಿದಂತೆ ಉತ್ಪನ್ನಗಳ ಬಳಕೆ ಮಾಡುವ ಮೂಲಕ ರೈತರ ಬದುಕನ್ನು ಹಸನುಗೊಳಿಸಬೇಕೆಂದರು.

ಚಿಕ್ಕಬಳ್ಳಾಪುರ ಕೋಲಾರ ಎಂದರೆ ಬರದ ನಾಡು, ಯಾರು ಹೆಣ್ಣು ಕೊಡುತ್ತಿರಲಿಲ್ಲ, ಜೀವನ ನಡೆಸುವುದೇ ಕಷ್ಟ ಎನ್ನುವ ಸ್ಥಿತಿ ಇತ್ತು ಆದರೆ ಇಂದು ಈ ಭಾಗದಲ್ಲಿ ಸಾಕಷ್ಟು ಬದಲಾವಣೆಗಳಿಂದ ಕರ್ನಾಟಕದ ಹೆಬ್ಬಾಗಿಲು ಬಾಗೇಪಲ್ಲಿಯಿಂದ ಪ್ರಾರಂಭವಾಗುವಂತಾಗಿದೆ ಎಂದರು.

2027ರೊಳಗೆ ಎತ್ತಿನಹೊಳೆ ನೀರು:

ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಕೋಲಾರ ಚಿಕ್ಕಬಳ್ಳಾಪುರ ಸೇರಿದಂತೆ ಬಯಲು ಸೀಮೆ ಜಿಲ್ಲೆಗಳ ಎಲ್ಲಾ ತಾಲೂಕುಗಳಿಗೂ 2027ರೊಳಗೆ ಎತ್ತಿನಹೊಳೆ ನೀರು ನಮ್ಮ ಸರ್ಕಾರ ಹರಿಸಲಿದೆ. ರೈತ ಕುಟುಂಬದಲ್ಲಿ ಹುಟ್ಟಿರುವ ಸುಬ್ಬಾರೆಡ್ಡಿ ರವರು ಕಳೆದ 25 ವರ್ಷಗಳಿಂದ ಸಾಮೂಹಿಕ ವಿವಾಹ ಸೇರಿದಂತೆ ಬಡವರ ಅಭಿವೃದ್ಧಿಗೆ ಶ್ರಮಿಸುವ ಮೂಲಕ ತಮ್ಮ ಕೈಲಾದ ಸಮಾಜ ಸೇವೆ ಮಾಡುತ್ತಿದ್ದಾರೆ. ಇವರ ಸೇವೆ ಗುರ್ತಿಸಿದ ಈ ಕ್ಷೇತ್ರದ ಜನತೆ ಸತತ ಮೂರು ಸಲ ಶಾಸಕರನ್ನಾಗಿ ಗೆಲ್ಲಿಸಿದ್ದಾರೆ. ಇವರ ಸೇವೆ ಮುಂದುವರೆಯಲಿ ಎಂದರು.

ಶಾಸಕ ಎಸ್,ಎನ್.ಸುಬ್ಬಾರೆಡ್ಡಿ ಮಾತನಾಡಿ, ಕುಟುಂಬದ ಸಹಕಾರದಿಂದ ಈ ಕ್ಷೇತ್ರದಲ್ಲಿ ಕಳೆದ ವರ್ಷಗಳಿಂದ ಬಡವರ ಸೇವೆ ಮಾಡಲು ಸಾಧ್ಯವಾಯಿತು. ಅಧಿಕಾರ ಇದ್ದರೂ ಇಲ್ಲದಿದ್ದರೂ ನನ್ನ ಜೀವ ಇರುವ ತನಕ ನನ್ನ ಸೇವೆ ಮುಂದುವರೆಸುವುದಾಗಿ ತಿಳಿಸಿದ ಅವರು ಮುಂದಿನ ವರ್ಷದಿಂದ ಈ ಭಾಗದ ರೈತರಿಗೆ ವಿಶೇಷ ಪ್ಯಾಕೇಜ್ ನೀಡುವ ಕೆಲಸ ಮಾಡುಉದಾಗಿ ಭರವಸೆ ನೀಡಿದರು.

ಇದೇ ವೇಳೆ ಅದಿಚಂಚುಚನಗಿರಿ ಚಿಕ್ಕಬಳ್ಳಾಪುರ ಶಾಖೆಯ ಮಠಾಧೀಶರಾದ ಶ್ರೀ ಮಂಗಳನಂದ ಸ್ವಾಮಿ ಸೇರಿದಂತೆ ಗಣ್ಯರು ನವ ವಧುವರರನ್ನು ಆಶೀರ್ವದಿಸಿದರು.

ಸಾಮೂಹಿಕ ವಿವಾಹಗಳಿಗೆ ಜನಸಾಗರವೇ ಹರಿದು ಬಂದಿತ್ತು. ವಿವಾಹಗಳಿಗೆ ಬಂದಿದ್ದ ಪ್ರತಿಯೊಬ್ಬರಿಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಶಿವಶಂಕರರೆಡ್ಡಿ, ಬಂಗಾರುಪೇಟೆ ಶಾಸಕ ನಾರಾಯಣಸ್ವಾಮಿ, ಮಾಜಿ ಶಾಸಕ ಹಾಗೂ ಆಹಾರ ನಿಗಮದ ಅಧ್ಯಕ್ಷ ಎನ್.ಸಂಪಂಗಿ, ಚಿಮೂಲ್ ಅಧ್ಯಕ್ಷ ವಿ.ಮಂಜುನಾಥರೆಡ್ಡಿ ಮತ್ತಿತರರು ಇದ್ದರು.

27ಬಿಜಿಪಿ-1: ಬಾಗೇಪಲ್ಲಿಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನೇತೃತ್ವದಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹಗಳು ಮತ್ತು ಶ್ರೀ ಶೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್, ಸಚಿವ ಕೆ.ಎಚ್.ಮುನಿಯಪ್ಪ ಸೇರಿದಂತೆ ಗಣ್ಯರು ಭಾಗಿಯಾಗಿರುವುದು.

27ಬಿಜಿಪಿ-2: ಬಾಗೇಪಲ್ಲಿಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಏತೃತ್ವದಲ್ಲಿ ನಡೆದ 23ನೇ ಸಾಮೂಹಿಕ ವಿವಾಹಗಳಲ್ಲಿ 100 ಕ್ಕೂ ಹೆಚ್ಚು ಜೋಡಿಗಳು ನವ ದಾಂತ್ಯಕ್ಕೆ ಕಾಲಿಟ್ಟಿರುವುದು.