ಸಾರಾಂಶ
ಬ್ಯಾಡಗಿ: ವರ್ತಕರ ಸಂಘವು ಕೇವಲ ವ್ಯಾಪಾರಸ್ಥರ ಸಂಕಷ್ಟಗಳಿಗೆ ಸೀಮಿತಗೊಂಡಿಲ್ಲ. ಸರ್ಕಾರ ಹಾಗೂ ಎಪಿಎಂಸಿ ಇವರೊಂದಿಗೆ ರೈತರಿಗೆ ಮೋಸವೆಸಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮಾರುಕಟ್ಟೆ ಅಭಿವೃದ್ಧಿಗೆ ಕಾರಣವಾಗಿರುವ ರೈತರ ಶ್ರೇಯೋಭಿವೃದ್ಧಿಗಾಗಿ ಎಂತಹುದೇ ಕಠಿಣ ನಿರ್ಧಾರ ಕೈಗೊಳ್ಳಲು ಸಂಘವು ಬದ್ಧವಾಗಿದೆ ಎಂದು ಮಾಜಿ ಶಾಸಕ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ತಿಳಿಸಿದರು.
ಬುಧವಾರ ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಮೆಣಸಿನಕಾಯಿ ವರ್ತಕರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.ಮಾರುಕಟ್ಟೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವ ನಿಟ್ಟಿನಲ್ಲಿ ಹಾಗೂ ರೈತರ ಶ್ರೇಯೋಭಿವೃದ್ಧಿಗಾಗಿ ನಮ್ಮೆಲ್ಲ ಶಕ್ತಿಯನ್ನು ಧಾರೆ ಎರೆದಿದ್ದೇವೆ. ಅದಾಗ್ಯೂ ಕಳೆದೆರಡು ವರ್ಷಗಳ ಹಿಂದಷ್ಟೇ ಎಪಿಎಂಸಿ ಕಚೇರಿಗೆ ಬೆಂಕಿ ಹಚ್ಚಿದ ಪ್ರಕರಣ ನಮ್ಮ ಮನಸ್ಸಿನಲ್ಲಿ ಪಾಪಪ್ರಜ್ಞೆ ಕಾಡುತ್ತಿದೆ. ಹೀಗಾಗಿ ರೈತರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಘವು ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.
₹3 ದಲಾಲಿ ಸಾಧ್ಯವಿಲ್ಲ: ಖರೀದಿದಾರರಿಂದ ಇದೀಗ ಪಡೆಯುತ್ತಿರುವ ₹2 ದಲಾಲಿ ಹಣವನ್ನು ₹3ಕ್ಕೆ ಹೆಚ್ಚಿಸುವಂತೆ ಕೆಲ ದಲಾಲರು ಒತ್ತಾಯಿಸುತ್ತಿದ್ದಾರೆ. ಆದರೆ ಈ ಬೇಡಿಕೆಯ ಕೃಷಿ ಮಾರಾಟ ಇಲಾಖೆ ಹಾಗೂ ಸರ್ಕಾರದ ಮಟ್ಟದಲ್ಲಿ ಇರುವುದರಿಂದ ಈ ಹಂತದಲ್ಲಿ ಅದರ ಬಗ್ಗೆ ವರ್ತಕರ ಸಂಘವು ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ಎಂದರು.ಪಾರ್ಕಿಂಗ್ ಸೌಲಭ್ಯ: ಬ್ಯಾಡಗಿ ಎಪಿಎಂಸಿಯ ವರ್ತಕರನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆ ಲಾರಿಗಳ ಪಾರ್ಕಿಂಗ್ ವ್ಯವಸ್ಥೆ. ಇನ್ನೆರಡು ತಿಂಗಳಿನಲ್ಲಿ ಇದಕ್ಕೂ ಕೂಡ ಶಾಶ್ವತ ದೊರೆಯಲಿದೆ. ಮಲ್ಪಿಪಲ್ ಸ್ಟೇರ್ ಪಾರ್ಕಿಂಗ್ ಸೌಲಭ್ಯವು ಇನ್ನೆರಡು ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು ಎಂದರು.
ಬೃಹತ್ ಕಲ್ಯಾಣ ಮಂಟಪ: ಹಂಸಭಾವಿ ರಸ್ತೆಯಲ್ಲಿ ವರ್ತಕರ ಸಂಘದ ವತಿಯಿಂದ ಸುಮಾರು ₹4 ಕೋಟಿ ವೆಚ್ಚದಲ್ಲಿ ಬೃಹತ್ ಕಲ್ಯಾಣಮಂಟಪ ನಿರ್ಮಿಸಲಾಗುತ್ತಿದ್ದು, ಬರುವ ಜನವರಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಅತ್ಯಂತ ಕಡಿಮೆ ದರದಲ್ಲಿ ಸುಸಜ್ಜಿತ ಕಲ್ಯಾಣ ಮಂಟಪ ವರ್ತಕರದ್ದಾಗಲಿದೆ ಎಂದರು.ತೂಕದ ಫೀ ₹25 ಪೈಸೆ ಹೆಚ್ಚಳ: ವೇಮನ್ ಸಂಘದವರು ಪ್ರತಿ ಚೀಲಕ್ಕೆ ಈಗಿರುವ ತೂಕದ ಫೀಯನ್ನು ₹1.50 ಪೈಸೆ ಬದಲಾಗಿ ₹2.50 ಪೈಸೆ ಹೆಚ್ಚಿಸುವಂತೆ ಮನವಿ ಮಾಡುತ್ತಿದ್ದಾರೆ. ಕಳೆದ ವರ್ಷ 72 ಲಕ್ಷ ಚೀಲಗಳು ಆವಕವಾಗಿದ್ದು ₹1.25 ಕೋಟಿಯಷ್ಟು ಹಣ ತೂಕದ ಫೀ ರೂಪದಲ್ಲಿ ಹೋಗಿದ್ದು, ಒಂದೇ ಬಾರಿಗೆ ಇಷ್ಟೊಂದು ಹೆಚ್ಚಳ ಮಾಡಲು ಸಾಧ್ಯವಿಲ್ಲ. ಅದನ್ನು ₹1.75 ಪೈಸೆಗೆ ಹೆಚ್ಚಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಜೀವಮಾನ ಶೇಷ್ಠ ಸಾಧಕ ಪ್ರಶಸ್ತಿಗೆ ಭಾಜನರಾದ ನಾಗರಾಜ ಮಲ್ಲಶೆಟ್ಟೆಪ್ಪ ಕೆಂಬಿ ದಂಪತಿ ಹಾಗೂ ಹಿರಿಯ ವರ್ತಕರಾದ ಬಿ.ಡಿ. ಮಾಳೇನಹಳ್ಳಿ ಸಿ.ಆರ್. ಆಲದಗೇರಿ, ಉಳಿವೆಪ್ಪ ಕಬ್ಬೂರ, ಎಸ್.ವಿ. ಸುಂಕಾಪುರ, ಶಂಬಾಜಿರಾವ ಶಿರಕೆ ಅವರನ್ನು ವರ್ತಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಅಗಲಿದ ವರ್ತಕರಿಗೆ ಒಂದು ನಿಮಿಷದ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಬಿ.ಎಂ. ಛತ್ರದ, ಉಳಿವೆಪ್ಪ ಕಬ್ಬೂರ, ಸಿದ್ದು ಪಾಟೀಲ. ಎಂ.ಬಿ. ಹುಚಗೊಂಡರ, ಎ.ಆರ್. ನದಾಫ್, ಜಗದೀಶಗೌಡ್ರ ಪಾಟಿಲ, ಸತೀಶಗೌಡ್ರು ಪಾಟೀಲ, ಕುಮಾರಗೌಡ್ರು ಪಾಟೀಲ, ಎನ್.ಎಚ್. ಹುಗ್ಗಿ, ದತ್ತು ಸಾಳುಂಕೆ, ಶೈಲೇಶ್ ಬೂದಿಹಾಳಮಠ, ಚಂದ್ರಣ್ಣ ಅಂಗಡಿ, ಸಿ.ಆರ್. ಪಾಟೀಲ, ರಾಜು ಮಾಗನೂರ, ಎ.ಎಂ. ಹಿರೇಮಠ, ಸಿದ್ದಲಿಂಗಪ್ಪ ಚಂದ್ರಾಪಟ್ಟಣ, ಗಣೇಶ ಅಚಲಕರ ಹಾಗೂ ಇತರರಿದ್ದರು. ಜಗದೀಶ ರೋಣದ ಸ್ವಾಗತಿಸಿದರು. ರಾಜು ಮೋರಿಗೇರಿ ನಿರೂಪಿಸಿ, ವಂದಿಸಿದರು.